ಕಬ್ಬಿನ ಬಾಕಿ ಪಾವತಿಸಿ ಕಾರ್ಖಾನೆ ಆರಂಭಿಸಿ

| Published : Aug 07 2024, 01:08 AM IST

ಸಾರಾಂಶ

ತಾಲೂಕಿನ ಕುಂತೂರು ಮಹದೇಶ್ವರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ರೈತರಿಂದ ಪಡೆಯಲಾದ ಕಬ್ಬಿಗೆ ಮೊದಲು ಬಾಕಿ ಪಾವತಿಗೆ ಮುಂದಾಗಲಿ, ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಲಿ ಇದಕ್ಕೂ ಮುನ್ನ ಕಾರ್ಖಾನೆ ಆರಂಭ ಸರಿಯಾದ ಬೆಳವಣಿಗೆಯಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಕುಂತೂರು ಮಹದೇಶ್ವರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ರೈತರಿಂದ ಪಡೆಯಲಾದ ಕಬ್ಬಿಗೆ ಮೊದಲು ಬಾಕಿ ಪಾವತಿಗೆ ಮುಂದಾಗಲಿ, ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಲಿ ಇದಕ್ಕೂ ಮುನ್ನ ಕಾರ್ಖಾನೆ ಆರಂಭ ಸರಿಯಾದ ಬೆಳವಣಿಗೆಯಲ್ಲ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಪ್ರವಾಸಿ ಮಂದಿರದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕಬ್ಬು ಕಟಾವು ಕೂಲಿ ಸಾಗಾಣಿಕೆ ವೆಚ್ಚ ನಿರ್ಧಾರ ಮಾಡಿದ ಬಳಿಕ ಕಾರ್ಖಾನೆ ಆರಂಭಕ್ಕೆ ಮುಂದಾಗಲಿ, ಕಬ್ಬುದರ ನಿಗದಿ ಮಾಡದೆ ಕಾರ್ಖಾನೆ ಆರಂಭಿಸಿರುವುದನ್ನು ಖಂಡಿಸಿ ಪ್ರತಿಭಟಿಸಲು ಕಾರ್ಖಾನೆ ಮುಂದೆ 9 ರಂದು ಕಬ್ಬು ಬೆಳೆಗಾರರು, ರೈತರ ಸಭೆ ಆಯೋಜಿಸಲಾಗಿದ್ದು, ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಆಗಸ್ಟ್ 15 ರಂದು ರೈತರಿಗೆ ಕರಾಳ ದಿನವಾಗಿದ್ದು, ರೈತರ ಹಕ್ಕುಗಳನ್ನು ಶಮನ ಮಾಡಲು ಕೇಂದ್ರ ಸರ್ಕಾರ ವಿಫಲವಾಗುತ್ತಿದ್ದು, ಇದನ್ನು ಖಂಡಿಸಲು ಟ್ರ್ಯಾಕ್ಟರ್ ರ್‍ಯಾಲಿ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಲು ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಅಕ್ಕಿ ರಫ್ತು ನಿಷೇಧ ವಾಪಸ್ ಪಡೆಯಯಬೇಕು. ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚು ಭತ್ತ ಬೆಳೆಯುವ ರೈತರ ಹಿತರಕ್ಷಣೆಗಾಗಿ ಜಿಲ್ಲೆಯ ಸಂಸದ ಸುನಿಲ್ ಬೋಸ್ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರವಾಹ ಹಾನಿ, ಮಳೆಹಾನಿ, ಬೆಳೆ ಹಾನಿ ಸಂತ್ರಸ್ತರ ರಕ್ಷಣೆಗೆ ಸರ್ಕಾರ ನಿಲ್ಲಬೇಕು, ಕೇವಲ ಕಾಟಾಚಾರಕ್ಕೆ ಪರಿಹಾರ ವಿತರಿಸಿ ಸುಮ್ಮನಾಗಬಾರದು ಎಂದು ಆಗ್ರಹಿಸಿದರು.

ಸರ್ಕಾರಕ್ಕೆ, ಅರಣ್ಯ ಇಲಾಖೆಗೆ ಈಗ ಜ್ಞಾನೋದಯವಾಗಿದ್ದು, ಮೋಜಿಗಾಗಿ ಅರಣ್ಯದ ಒಳಗೆ ರೆಸಾರ್ಟ್ ನಿರ್ಮಾಣ. ಕಾಡು ನಾಶ ಮಾಡಿರುವುದರಿಂದ ದುರಂತ ಅನುಭವಿಸುವಂತಾಗಿದೆ. ಈಗಲಾದರೂ ಎಚ್ಚೆತ್ತು ಕಾಡಿನ ಒಳಗೆ ರೆಸಾರ್ಟ್‌ಗಳನ್ನು ಮುಚ್ಚಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದರು. ಸಭೆಯಲ್ಲಿ ದೊಡ್ಡಿಂದುವಾಡಿ ಮಾದೇಶ, ವಿನಾಯಕ, ಕಾಮಗೆರೆ ಗೌರೀಶ, ಜಿಲ್ಲಾ ಕಾರ್ಯಾಧ್ಯಕ್ಷ ರೇವಣ್ಣ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಪಟೇಲ್ ಶಿವಮೂರ್ತಿ, ಸುಂದರಪ್ಪ, ಕಿನಕಹಳ್ಳಿ ಬಸವಣ್ಣ, ಹೆಗ್ಗೊಟಾರ ಶಿವಸ್ವಾಮಿ, ಪ್ರದೀಪ್, ಶಿವಕುಮಾರ್, ಅಂಬಳೆ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.