ಸಂಸತ್‌ ಅಧಿವೇಶನ ಬಳಿಕ ಸಿದ್ದು ಪ್ರಾಸಿಕ್ಯೂಷನ್‌ ಭವಿಷ್ಯ ನಿರ್ಧಾರ?

| Published : Aug 07 2024, 01:08 AM IST

ಸಂಸತ್‌ ಅಧಿವೇಶನ ಬಳಿಕ ಸಿದ್ದು ಪ್ರಾಸಿಕ್ಯೂಷನ್‌ ಭವಿಷ್ಯ ನಿರ್ಧಾರ?
Share this Article
  • FB
  • TW
  • Linkdin
  • Email

ಸಾರಾಂಶ

ಸಂಸತ್‌ ಅಧಿವೇಶನ ನಡೆಯುತ್ತಿರುವ ಈ ಸಮಯದಲ್ಲಿ ಮುಡಾ ಅಕ್ರಮ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ ವಿಚಾರವಾಗಿ ರಾಜ್ಯಪಾಲರು ಯಾವುದೇ ನಿರ್ಧಾರ ಕೈಗೊಳ್ಳದೆ ಇನ್ನೂ ಕೆಲ ದಿನ ಕಾದು ನೋಡುವ ಸಾಧ್ಯತೆ ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಸಂಸತ್‌ ಅಧಿವೇಶನ ನಡೆಯುತ್ತಿರುವ ಈ ಸಮಯದಲ್ಲಿ ಮುಡಾ ಅಕ್ರಮ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ ವಿಚಾರವಾಗಿ ರಾಜ್ಯಪಾಲರು ಯಾವುದೇ ನಿರ್ಧಾರ ಕೈಗೊಳ್ಳದೆ ಇನ್ನೂ ಕೆಲ ದಿನ ಕಾದು ನೋಡುವ ಸಾಧ್ಯತೆ ಹೆಚ್ಚಾಗಿದೆ.

ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ಸೋಮವಾರ ದೆಹಲಿ ಪ್ರವಾಸದಿಂದ ರಾಜ್ಯಕ್ಕೆ ವಾಪಸ್ಸಾಗಿದ್ದು, ಇದರ ಬೆನ್ನಲ್ಲೇ ಎಲ್ಲರ ಚಿತ್ತ ರಾಜಭವನದತ್ತ ನೆಟ್ಟಿದೆ. ಆದರೆ, ಪ್ರಾಸಿಕ್ಯೂಷನ್‌ ವಿಚಾರದಲ್ಲಿ ಸಂಸತ್‌ ಅಧಿವೇಶನ ಕೊನೆಗೊಳ್ಳುವ ಆ.12ರವರೆಗೆ ಯಾವುದೇ ನಿರ್ಧಾರ ಹೊರಬೀಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.ಏಕೆಂದರೆ ಒಂದೆಡೆ ರಾಜ್ಯದಲ್ಲಿ ಪ್ರತಿಪಕ್ಷದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಪಕ್ಷಗಳು ಮುಡಾ ಅಕ್ರಮ ಪ್ರಕರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿವೆ. ಆ ಮೂಲಕ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರಕ್ಕೆ ಕುತ್ತು ತರುವ ಪ್ರಯತ್ನ ನಡೆಸಿವೆ. ಮತ್ತೊಂದೆಡೆ ಕೇಂದ್ರದಲ್ಲಿ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ವರಿಷ್ಠರು, ಕರ್ನಾಟಕದ ಸರ್ಕಾರಕ್ಕೆ ಯಾವುದೇ ಪೆಟ್ಟಾಗದಂತೆ ನೋಡಿಕೊಳ್ಳಲು ಸಾಕಷ್ಟು ಪ್ರತಿತಂತ್ರಗಳ ಮೂಲಕ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಈ ನಡುವೆ ರಾಜ್ಯಪಾಲರು ನೋಟಿಸ್‌ ವಾಪಸ್‌ ಪಡೆಯುವಂತೆ ರಾಜ್ಯ ಸಚಿವ ಸಂಪುಟ ನಿರ್ಣಯ ಕೈಗೊಂಡು ಕಳುಹಿಸಿದೆ. ನ್ಯಾಯಾಂಗ ಹೋರಾಟಕ್ಕೂ ಸಿದ್ಧತೆ ನಡೆಸಿದೆ.

ಒಂದು ವೇಳೆ ರಾಜ್ಯಪಾಲರೇನಾದರೂ ಮುಖ್ಯಮಂತ್ರಿಯವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡಿದರೆ ಸಂಸತ್‌ ಅಧಿವೇಶನದಲ್ಲಿ ಇದರ ವಿರುದ್ಧ ದನಿ ಎತ್ತಿ ಕಲಾಪ ಬಲಿಯಾಗುವ ಸಾಧ್ಯತೆ ಇದೆ. ಜತೆಗೆ ಪಾದಯಾತ್ರೆ ನಡೆಯುವ ವೇಳೆ ಅನುಮತಿ ನೀಡಿದಲ್ಲಿ ಪ್ರತಿಪಕ್ಷಗಳ ಬೇಡಿಕೆಗೆ ಮಣಿದಂತಾಗುತ್ತದೆ ಎಂಬ ಸಂದೇಶ ರವಾನೆಯಾಗಬಹುದು. ಹಾಗಾಗಿ ರಾಜ್ಯಪಾಲರು ಅಧಿವೇಶನ ಮುಗಿಯುವವರೆಗೆ (ಆ.12) ಪ್ರಾಸಿಕ್ಯೂಷನ್‌ ವಿಚಾರದಲ್ಲಿ ತಮ್ಮ ಯಾವುದೇ ನಿರ್ಧಾರ ಪ್ರಕಟಿಸುವ ಸಾಧ್ಯತೆ ಕಡಮೆ ಎಂದು ಮೂಲಗಳು ತಿಳಿಸಿವೆ.

ಇದರ ನಡುವೆ ಮುಖ್ಯಮಂತ್ರಿಯವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಮಂಗಳವಾರ ರಾಜ್ಯಪಾಲರು ರಾಜ್ಯಕ್ಕೆ ಮರಳುತ್ತಲೇ ರಾಜಭವನದಲ್ಲಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಇನ್ನಷ್ಟು ಕುತೂಹಲ ಹೆಚ್ಚಿಸಿದೆ.