ಸಾರಾಂಶ
ಕೊಪ್ಪಳ: ಜಗತ್ತಿನ ಹಲವು ಭಾಗಗಳಲ್ಲಿ ಯುದ್ಧಗಳು ನಡೆಯುತ್ತಿವೆ.ಇವುಗಳನ್ನು ನೈಜವಾಗಿ ನೋಡುವ ದೌರ್ಭಾಗ್ಯ ನಮ್ಮದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಹಜರತ್ ಮಹ್ಮದ್ ಫೈಗಂಬರ ಅವರ 1500 ನೇ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಭಾರತದ ಪಕ್ಕದಲ್ಲಿಯೇ ಇರುವ ಪಾಕಿಸ್ತಾನಕ್ಕೆ ಅಮೇರಿಕಾ ಶಸ್ತ್ರಾಸ್ತ್ರ ನೀಡಿ ಯುದ್ಧ ಮಾಡಲು ಪ್ರೇರೇಪಿಸುತ್ತದೆ. ಅತ್ತ ಉಕ್ರೇನ್ ಮೇಲೆ ದಾಳಿ ನಿರಂತರವಾಗಿ ನಡೆಯುತ್ತಿದೆ. ಹೀಗೆ ಜಗತ್ತಿನಾದ್ಯಂತ ಯುದ್ಧದಾಹಿಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಶಾಂತಿಯ ಅಗತ್ಯವಿದೆ ಎಂದು ಹೇಳಿದರು.
ಪರಸ್ಪರವಾಗಿ ಅನ್ಯೋನ್ಯ, ಪ್ರೀತಿಯಿಂದ ಇರಬೇಕಾದ ಕಾಲದಲ್ಲಿ ಯುದ್ಧ ನೋಡುವ ದೌರ್ಭಾಗ್ಯ ನಮ್ಮದಾಗಿದೆ ಎಂದು ವಿಷಾಧಿಸಿದರು.ನಮ್ಮ ಪಕ್ಕದಲ್ಲಿಯೇ ಇರುವ ಫಕೀರೇಶ್ವರ ಮಠ ಕೇವಲ ನಾಡಿನಲ್ಲಿ ಅಷ್ಟೇ ಅಲ್ಲ, ರಾಷ್ಟ್ರಾದ್ಯಂತ ಅದಕ್ಕೆ ಮಹತ್ವವಿದೆ. ಅಲ್ಲಿ ಇರುವಿಕೆ ಯಾವ ಜಾತಿ ಮತ್ತು ಧರ್ಮ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲವನ್ನು ಅಷ್ಟೇ ಪ್ರೀತಿಯಿಂದ ಆಚರಣೆ ಮಾಡಲಾಗುತ್ತದೆ. ಇಂಥ ಮಠಗಳು ನಮಗೆ ಬೇಕಾಗಿದೆ ಎಂದರು.
ಕಲಬುರಗಿಯಲ್ಲಿರುವ ಖಾಜಾ ಬಂದೇನವಾಜ್ ದರ್ಗಾ ಸಹ ಇದಕ್ಕೆ ಉದಾಹರಣೆಯಾಗಿದೆ. ಅಲ್ಲಿಯೂ ಸಹ ಎಲ್ಲ ಧರ್ಮಿಯರ ಪ್ರೀತಿಗೆ ಪಾತ್ರವಾಗಿದೆ ಎಂದರು.ವಿಪ ಸದಸ್ಯ ಬಿ.ಕೆ. ಹರಿಪ್ರಸಾದ, ಕ್ರಿಕೆಟ್ ಆಟಗಾರ ಹಾಗೂ ತೆಲಂಗಾಣ ವಿಧಾನಪರಿಷತ್ ಸದಸ್ಯ ಮೊಹ್ಮದ್ ಅಜರುದ್ದೀನ, ಆಯೋಜಕ ಹಾಗೂ ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ಸಹಬಾಳ್ವೆಯ ಬದುಕು ಸಾಗಿಸಲು ಮಹ್ಮದ್ ಫೈಗಂಬರ್ ಸಂದೇಶಗಳು ಬಹಳ ಮುಖ್ಯ ಎಂದರು.
ಇಂಥ ಸಂದೇಶ ಸಾರುವುದಕ್ಕಾಗಿಯೇ ಮಹ್ಮದ್ ಫೈಗಂಬರ್ ಅವರ 1500 ನೇ ಜನ್ಮದಿನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ನಮ್ಮ ನಿರೀಕ್ಷೆ ಮೀರಿ ಯಶಸ್ವಿಯಾಗುತ್ತಿದೆ. ಸೇರಿರುವ ಜನಸ್ತೋಮವೇ ಇದಕ್ಕೆ ಸಾಕ್ಷಿ ಎಂದರು. ಶ್ರೀಶರಣಬಸಪ್ಪ ಅಪ್ಪಮಠದ ದೊಡ್ಡಬಸಪ್ಪ ಅಪ್ಪ ಗುರುಗಳು, ಖಾಜಾ ಬಂದೇನವಾಜ ಗುರುಗಳು, ಅಳವಂಡಿಯ ಮರಳು ಸಿದ್ದೇಶ್ವರಮಠದ ಸಿದ್ದೇಶ್ವರ ಶಿವಚಾರ್ಯ ಮಹಾಸ್ವಾಮೀಜಿಗಳು, ಶಿರಹಟ್ಟಿ ಫಕೀರೇಶ್ವರ ಮಠದ ಸ್ವಾಮೀಜಿಗಳು, ಶ್ರೀ ಚನ್ನಬಸವ ಮಹಾಸ್ವಾಮೀಜಿಗಳು. ನಜೀರ ಅಹ್ಮದ್ ಖಾದ್ರಿ ಗುರುಗಳು ಸಾನ್ನಿಧ್ಯ ವಹಿಸಿದ್ದರು.ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಶಾಸಕ ರಾಘವೇಂದ್ರ, ಸಂಸದ ರಾಜಶೇಖರ ಹಿಟ್ನಾಳ, ಹಸನಸಾಬ್ ದೋಟಿಹಾಳ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಕೆ. ಬಸವರಾಜ ಹಿಟ್ನಾಳ, ಸುರೇಶ ಭೂಮರಡ್ಡಿ, ಕೆ. ಎಂ.ಸಯ್ಯದ್, ಕಾಟನ್ ಪಾಶಾ, ಅಮರೇಶ ಕರಡಿ, ರಾಜಶೇಖರ ಅಡೂರು, ಆಸಿಫ್ ಅಲಿ, ಎಚ್.ಆರ್. ಶ್ರೀನಾಥ ಇದ್ದರು.ಕೆ.ಎಂ.ಸಯ್ಯದ್ ಸ್ವಾಗತಿಸಿದರು.ನಜೀರ ಅಹ್ಮದ್ ಮುಕ್ತಿ ಸಾಹೇಬ್ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಕೊಪ್ಪಳದಲ್ಲಿ ಮಹ್ಮದ್ ಫೈಗಂಬರ ಅವರ 1500 ನೇ ಜಯಂತಿ ಆಚರಣೆ ಮಾಡುತ್ತಿರುವುದು ಪವಿತ್ರ ದಿನವಾಗಿದೆ. ಪರಸ್ಪರ ಅನ್ಯೋನ್ಯವಾಗಿ ಜೀವನ ಮಾಡಬೇಕಾಗಿದೆ. ಈ ಕಾರ್ಯಕ್ರಮ ಮೂಲಕ ವಿಶ್ವಶಾಂತಿ ಸಂದೇಶ ರವಾನೆ ಮಾಡಲಾಗಿದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.