ಸಾರಾಂಶ
ಹಾವೇರಿ: ಬೆಳೆಯುತ್ತಿರುವ ಮಕ್ಕಳು ಇಂದು ಒತ್ತಡದ ಜೀವನ ನಡೆಸುತ್ತಿದ್ದಾರೆ. ಮನೆಯ ವಾತಾವರಣ ಉತ್ತಮಗೊಂಡರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಪ್ರೀತಿ, ಸಮಾಧಾನ, ಸಂಸ್ಕಾರಗಳು ಆರೋಗ್ಯಕರ ಜೀವನಕ್ಕೆ ಪ್ರೇರಕವಾಗಿವೆ ಎಂದು ಖ್ಯಾತ ಪ್ರವಚನಕಾರ್ತಿ ಬ್ರಹ್ಮಕುಮಾರಿ ಶಿವಾನಿ ಹೇಳಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ''''ಜೀವನದಲ್ಲಿ ಸಂತೋಷ'''' ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಂಧಕಾರದಲ್ಲಿ ಮುಳುಗಿರುವ ಜಗತ್ತಿಗೆ ಸಂಸ್ಕಾರ, ಸಂಸ್ಕೃತಿಯ ಬೆಳಕು ನೀಡುವ ಮೂಲಕ ಭಾರತ ವಿಶ್ವಗುರು ಎನಿಸಿದೆ. ಆದಿ ಸನಾತನ ಧರ್ಮ ಮತ್ತು ಅಧ್ಯಾತ್ಮ ಭಾರತದ ಜೀವಾಳವಾಗಿವೆ. ವಿಕಾರಗಳಿಂದ ತುಂಬಿದ್ದ ರಾವಣ ರಾಜ್ಯ ನಾಶವಾಗಿ, ಸಂಸ್ಕಾರ ತುಂಬಿದ ರಾಮ ರಾಜ್ಯ ಉದಯವಾಯಿತು. ಉತ್ತಮ ಗುಣಗಳನ್ನು ಹೊಂದಿರುವ ರಾಮನನ್ನು ನಾವು ದೇವರೆಂದು ಪೂಜಿಸುತ್ತೇವೆ. ಕುಟುಂಬದಲ್ಲಿ ಸದಾ ಜಗಳ, ದುಃಖ, ಅಸೂಯೆ, ದ್ವೇಷ, ಕೋಪ ತುಂಬಿದ್ದರೆ ಆತ್ಮದ ಔನ್ನತ್ಯ ಸಾಧ್ಯವಿಲ್ಲ. ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳು ನಮ್ಮನ್ನು ಅವಸಾನದತ್ತ ಕೊಂಡೊಯ್ಯುತ್ತವೆ ಎಂದರು.ಪ್ರೀತಿ, ವಿಶ್ವಾಸದಿಂದ ಬದುಕುವುದು ನಮ್ಮ ಸಂಸ್ಕಾರ. ಸುತ್ತಲಿನ ವಾತಾವರಣ ಖುಷಿಯಾಗಿದ್ದರೆ, ಒತ್ತಡವಿಲ್ಲದೆ ಸಂತೋಷವಾಗಿ ಬದುಕಬಹುದು. ಕಲಿಯುಗದಿಂದ ಸತ್ಯಯುಗದ ಕಡೆ ನಾವೆಲ್ಲ ಸಾಗುತ್ತಿದ್ದು, ಸ್ವಯಂಗೌರವ ಇಟ್ಟುಕೊಳ್ಳಬೇಕು. ನಿಸ್ವಾರ್ಥವಾಗಿ ಎಲ್ಲರನ್ನು ಪ್ರೀತಿಸುತ್ತಾ ಸಾಗಬೇಕು. ಪ್ರತಿದಿನ ಹದಿನೈದು ನಿಮಿಷ ಧ್ಯಾನ ಮಾಡಿದರೆ, ನಮ್ಮ ಆಲೋಚನಾ ಲಹರಿ ಬದಲಾಗುತ್ತದೆ. ಸತ್ಯಯುಗದಲ್ಲಿ ಆತ್ಮವೇ ಅಂತಿಮ. ಅದು ಪರಮಾತ್ಮವಾಗಿದ್ದು, ಪವಿತ್ರವಾಗಿದೆ ಎಂದು ಹೇಳಿದರು.
ಹಿಂದಿನ ಪೀಳಿಗೆಯವರು ಸಂತೋಷದಿಂದ ಇರುತ್ತಿದ್ದರು. ಈಗ ಟಿವಿ ಮತ್ತು ಮೊಬೈಲ್ ಬಂದ ನಂತರ ಜೀವನದಲ್ಲಿ ಒತ್ತಡಗಳು ಹೆಚ್ಚಾಗಿವೆ. ವಿವಾಹ ವಿಚ್ಛೇದನಗಳು ಹೆಚ್ಚಾಗುತ್ತಿವೆ. ಮನೆ ಮುರಿಯುವ ಧಾರಾವಾಹಿಗಳು ವಿಜೃಂಭಿಸುತ್ತಿವೆ. ಇದೆಲ್ಲವನ್ನೂ ಬದಿಗಿಟ್ಟು, ಸಾತ್ವಿಕ ಆಹಾರ ಸೇವಿಸಿ, ರಾತ್ರಿ ಬೇಗ ಮಲಗಿ ಬೇಗ ಎದ್ದರೆ ಸಂತೋಷಕರ ಜೀವನ ನಿಮ್ಮದಾಗಿಸಿಕೊಳ್ಳಬಹುದು ಎಂದರು.ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಅತಿಯಾದ ನಿರೀಕ್ಷೆಗಳು ನಿರಾಸೆ ಉಂಟು ಮಾಡುತ್ತವೆ. ಮಕ್ಕಳಿಗೆ ಉನ್ನತ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಕಲಿಸಬೇಕು. ಇಲ್ಲದಿದ್ದರೆ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಾರೆ ಎಂದು ಹೇಳಿದರು.
ಬ್ರಹ್ಮಾಕುಮಾರ ಬಸವರಾಜ ರಾಜಋಷಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರೂಪಾಕ್ಷಪ್ಪ ಬಳ್ಳಾರಿ, ಹಾವೇರಿ ವಿವಿ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಬ್ರಹ್ಮಾಕುಮಾರಿ ನಿರ್ಮಲಾ, ಬ್ರಹ್ಮಾಕುಮಾರಿ ಲೀಲಾಜಿ ಇತರರು ಇದ್ದರು.