ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ಟೆಂಡರ್‌

| Published : Feb 03 2024, 01:49 AM IST

ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ಟೆಂಡರ್‌
Share this Article
  • FB
  • TW
  • Linkdin
  • Email

ಸಾರಾಂಶ

77 ಕಿ.ಮೀ. ಉದ್ದದ ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ಬಿಡಿಎ 3ನೇ ಬಾರಿಗೆ ಜಾಗತಿಕ ಟೆಂಡರ್‌ ಕರೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದಿರುವ ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತೊಮ್ಮೆ ಜಾಗತಿಕ ಮಟ್ಟದ ಟೆಂಡರ್‌ ಆಹ್ವಾನಿಸಿದೆ.

ಪಿಆರ್‌ಆರ್‌ ಯೋಜನೆಗೆ ‘ಬೆಂಗಳೂರು ಬಿಸಿನೆಸ್‌ ಕಾರಿಡಾರ್‌(ಬಿಬಿಸಿ) ಎಂದು ಮರು ನಾಮಕರಣ ಮಾಡಿದ ಬೆನ್ನಲ್ಲೇ ಜಾಗತಿಕ ಟೆಂಡರ್‌ ಆಹ್ವಾನಿಸಿದೆ. ಈ ಯೋಜನೆಯಲ್ಲಿ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 100 ಮೀಟರ್ ಅಗಲದ ಎಂಟು ಪಥದ, 74 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

2022ರಲ್ಲಿ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಎರಡು ಬಾರಿ ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಬಿಡ್‌ ಮಾಡಲು ಯಾರು ಆಸಕ್ತಿ ತೋರಿರಲಿಲ್ಲ. ಜತೆಗೆ, ರೈತರಿಗೆ `ಭೂಪರಿಹಾರ ನಿಗದಿ ವಿಚಾರದಲ್ಲೂ ಸಾಕಷ್ಟು ಗೊಂದಲಗಳಿದ್ದವು. ಹೀಗಾಗಿ, ಯೋಜನೆ ವಿಳಂಬವಾಗಿತ್ತು. ಆ ನಂತರ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಯೋಜನೆ ಕುರಿತು ಹೆಚ್ಚಿನ ಆಸಕ್ತಿ ಹೊಂದಿದ್ದು, ಯೋಜನೆಗೆ ವೇಗ ಕೊಡಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾಮಗಾರಿ ಕೈಗೊಳ್ಳಲು ಜಾಗತಿಕ ಟೆಂಡರ್ ಕರೆಯಲಾಗಿದೆ.

74 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆಯು 77 ಗ್ರಾಮಗಳ ಮೂಲಕ ಹಾದು ಹೋಗುತ್ತದೆ. ಬೆಂಗಳೂರು ಬಿಸಿನೆಸ್ ಕಾರಿಡಾರನ್ನು ಎಂಟು ಪಥಗಳ ರಸ್ತೆಯು ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದ್ದು, ಹೆಸರಘಟ್ಟ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ರಸ್ತೆ, ಹಳೇ ಮದ್ರಾಸ್ ರಸ್ತೆ, ಹೊಸಕೋಟೆ ರಸ್ತೆ ಮತ್ತು ಸರ್ಜಾಪುರ ಸೇರಿದಂತೆ 77 ಗ್ರಾಮಗಳ ಮೂಲಕ ಸಾಗಿ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ.₹27 ಸಾವಿರ ಕೋಟಿ ವೆಚ್ಚ

ಯೋಜನೆಗೆಂದು ಭೂಮಿ ಬಿಟ್ಟುಕೊಟ್ಟ ರೈತರಿಗೆ ಪರಿಹಾರ ನೀಡಲು ಅಂದಾಜು ₹21 ಸಾವಿರ ಕೋಟಿ ವೆಚ್ಚವಾಗಲಿದ್ದು, ಉಳಿದಂತೆ ₹6 ಸಾವಿರ ಕೋಟಿಗಳನ್ನು ರಸ್ತೆ ನಿರ್ಮಾಣಕ್ಕೆ ವಿನಿಯೋಗಿಸಲು ಯೋಜಿಸಲಾಗಿದೆ. ಹೀಗೆ ಒಟ್ಟು ₹27 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಟೆಂಡರ್‌ದಾರರು ಅರ್ಜಿಯೊಂದಿಗೆ ದಾಖಲೆಗಳನ್ನು ಸಲ್ಲಿಸಲು ಫೆ.29 ಕಡೆಯ ದಿನವಾಗಿದ್ದು, ಮಾ.2ರಂದು ತಾಂತ್ರಿಕವಾಗಿ ಬಿಡ್‌ ತೆರೆಯಲಾಗುವುದು. ಗುತ್ತಿಗೆ ಪಡೆದ ಸಂಸ್ಥೆಯು 50 ವರ್ಷಗಳ ಅವಧಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ ಜವಾಬ್ದಾರಿ ವಹಿಸಲಿದೆ.17 ವರ್ಷದ ಹಳೆ ಯೋಜನೆ

2007ರಲ್ಲಿ ಪಿಆರ್‌ಆರ್‌ ನಿರ್ಮಾಣಕ್ಕಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಆ ವೇಳೆಯಲ್ಲೇ ರಸ್ತೆ ನಿರ್ಮಿಸಿದ್ದರೆ, ಯೋಜನಾ ವೆಚ್ಚವು ಕಡಿಮೆಯಾಗುತ್ತಿತ್ತು. ನ್ಯಾಯಾಲಯದಲ್ಲಿ ಈ ಯೋಜನೆ ಕುರಿತಂತೆ ವಿಚಾರಣೆ ನಡೆದಿದ್ದು, `ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಆದೇಶ ಬಂದಿದೆ. ಇದಕ್ಕೆ ಬಿಡಿಎಗೆ ಹೊಸ ‘ಭೂಸ್ವಾಧೀನ ಕಾನೂನು ಅನ್ವಯವಾಗುವುದಿಲ್ಲ. ಹಳೆ ಕಾನೂನಿನ ಪ್ರಕಾರವೇ ಭೂಸ್ವಾಧೀನ ಮಾಡಬೇಕೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.ಭೂ ಪರಿಹಾರಕ್ಕೆ ಸುಗ್ರೀವಾಜ್ಞೆ:

ಸುಪ್ರೀಂಕೋರ್ಟ್ ತೀರ್ಪು ರೈತರ ಹಿತಕ್ಕೆ ವಿರುದ್ಧವಾಗಿದ್ದು, ಸರ್ಕಾರ ಸುಗ್ರೀವಾಜ್ಞೆ ಮೂಲಕ ರೈತರಿಗೆ 2013ರ ಕಾಯಿದೆ ಅನ್ವಯ ಪರಿಹಾರ ನೀಡಬೇಕು. ಈ ಮೂಲಕ ಸರ್ಕಾರ ರೈತರ ನೆರವಿಗೆ ಮುಂದಾಗಬೇಕು ಎಂದು ಭೂಮಿ ಕಳೆದುಕೊಂಡಿರುವ ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡುವ ರೈತರು ಒತ್ತಾಯಿಸಿದ್ದಾರೆ.