ಭದ್ರಾ ಮೇಲ್ದಂಡೆಗಾಗಿ ಫೆ.9ಕ್ಕೆ ಚಳ್ಳಕೆರೆ ಬಂದ್‌

| Published : Feb 03 2024, 01:49 AM IST

ಭದ್ರಾ ಮೇಲ್ದಂಡೆಗಾಗಿ ಫೆ.9ಕ್ಕೆ ಚಳ್ಳಕೆರೆ ಬಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ, ಹತ್ತಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಭದ್ರಾ ಯೋಜನೆ ಶೀಘ್ರಾನುಷ್ಠಾನಕ್ಕೆ ಒತ್ತಾಯಿಸಿ ಫೆ.9 ರಂದು ಚಳ್ಳಕೆರೆ ತಾಲ್ಲೂಕಿನಾದ್ಯಂತ ಸ್ವಯಂ ಪ್ರೇರಿತ ಬಂದ್‌ಗೆ ಒಕ್ಕೊರಲ ತೀರ್ಮಾನವಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಕಾರ್ಯಾನುಷ್ಠಾನಕ್ಕೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ, ಹತ್ತಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಫೆ.9 ರಂದು ಚಳ್ಳಕೆರೆ ತಾಲ್ಲೂಕಿನಾದ್ಯಂತ ಸ್ವಯಂ ಪ್ರೇರಿತ ಬಂದ್‌ಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಯಿತು.

ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಸಭೆಯಲ್ಲಿ ಬಂದ್‌ ಕುರಿತು ಒಕ್ಕೊರಲ ತೀರ್ಮಾನ ಕೈಗೊಂಡು, ಮುಂದುವರಿದು ಹೋರಾಟದ ರೂಪುರೇಷೆಗಳ ಬಗ್ಗೆ ವಿವಿಧ ರೈತ ಸಂಘಟನೆಗಳ ಹೋರಾಟಗಾರರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿದರು.

ಸಭೆಯಲ್ಲಿ ಮಾತನಾಡಿದ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಸಭೆಯ ಒಮ್ಮತದ ನಿರ್ಧಾರದಂತೆ ಫೆ.೯ರಂದು ಸ್ವಯಂ ಪ್ರೇರಿತ ಬಂದ್‌ಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ಬಣ) ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ನೀರು ಎಲ್ಲರಿಗೂ ಅವಶ್ಯಕವಾಗಿ ಬೇಕಿದೆ. ಕಳೆದ ಹಲವಾರು ವರ್ಷಗಳಿಂದ ರೈತ ಸಂಘಟನೆಗಳೂ ಸಹ ಈ ವಿಚಾರವಾಗಿ ನಿರಂತರ ಹೋರಾಟ ನಡೆಸಿ ಸರ್ಕಾರವನ್ನು ಜಾಗೃತಿಗೊಳಿಸುವ ಕಾರ್ಯ ಮಾಡುತ್ತಾ ಬಂದಿದೆ. ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿಯ ನಿರ್ದೇಶನದಂತೆ ೯ರಂದು ಬಂದ್‌ಗೆ ಎಲ್ಲಾ ರೈತರು ಕೈಜೋಡಿಸೋಣವೆಂದರು.

ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿ ರೈತರು ಮತ್ತು ಕಾರ್ಮಿಕರ ಹಿತದೃಷ್ಠಿಯಿಂದ ಸ್ವಯಂ ಪ್ರೇರಿತ ಬಂದ್ ಆಚರಿಸುವಂತೆ ಕರೆ ನೀಡಿದ್ದು, ರೈತರೂ ಸಹ ಪೂರ್ಣಪ್ರಮಾಣದಲ್ಲಿ ಇದನ್ನು ಬೆಂಬಲಿಸಬೇಕು ಎಂದರು.

ಜಿಲ್ಲಾ ನೀರಾವರಿ ಅನುಷ್ಠಾನ ಸಮಿತಿಯ ಜಿ.ಯಾದವರೆಡ್ಡಿ ಮಾತನಾಡಿ, ನೀರು ಇಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರತಿವರ್ಷವೂ ಸಕಾಲದಲ್ಲಿ ಮಳೆಯಾಗದೇ ರೈತರು ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಭದ್ರಾ ನೀರು ಈ ಭಾಗದಲ್ಲಿ ಹರಿದರೆ ಮಾತ್ರ ರೈತರಿಗೆ ಉಪಯೋಗವಾಗುತ್ತದೆ ಎಂದರು.

ಜಿಲ್ಲಾ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ೧೯೯೭ರಲ್ಲಿ ಸಮಿತಿಯಿಂದ ಈ ಹೋರಾಟವನ್ನು ಆರಂಭಿಸಲಾಗಿದೆ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್ ಮಂಡನೆಗೆ ಸಿದ್ಧವಾಗಿವೆ. ರಾಜ್ಯದ ಬಜೆಟ್ ಫೆ.೧೬ರಂದು ಪ್ರಕಟವಾಗಲಿದ್ದು, ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ಮೇಲೆ ಒತ್ತಡ ಹೇರಬೇಕು. ನೀರು ಇಲ್ಲದೆ ಯಾರಿಗೂ ಬದುಕಿಲ್ಲ. ಆದ್ದರಿಂದ ಭವಿಷ್ಯದ ದಿನಗಳಲ್ಲಿ ನಮ್ಮೆಲ್ಲರ ಬದುಕು ನೀರಿಯಿಂದಲೇ ಸಾಗ ಬೇಕು. ಈ ಹಿನ್ನೆಲೆಯಲ್ಲಿ ಎಲ್ಲರೂ ಹೋರಾಟ ಅನುಷ್ಠಾನ ಸಮಿತಿಯೊಂದಿಗೆ ಸಹಕರಿಸಬೇಕು. ನಿಮ್ಮ ಸಹಕಾರ, ಸಲಹೆಗಳಿಂದ ಹೋರಾಟ ಸಮಿತಿ ಇನ್ನೂ ಹೆಚ್ಚಿನ ಶಕ್ತಿ ಲಭ್ಯವಾಗುವುದು ಎಂದರು.

ಎಐಟಿಯುಸಿ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ, ಸಮಾಜ ಸೇವಕ ಎಚ್.ಎಸ್.ಸೈಯದ್, ಅನ್ವರ್ ಮಾಸ್ಟರ್, ಆರ್.ಪ್ರಸನ್ನಕುಮಾರ್, ಸಿಐಟಿಯು ಜಿಲ್ಲಾ ಸಂಚಾಲಕ ಟಿ.ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷ ಟಿ.ನಿಂಗಣ್ಣ, ಎಂ.ಚೇತನ್‌ಕುಮಾರ್, ಛೇಂಬರ್‌ನ ಕೃಷ್ಣಮೂರ್ತಿ, ಕೆ.ಎಂ.ಕೋಟ್ರೇಶ್, ಶ್ರೀನಿವಾಸಲು, ನೇತಾಜಿ ಪ್ರಸನ್ನ, ಬಸವರೆಡ್ಡಿ, ತಿಪ್ಪೇಸ್ವಾಮಿ, ಚನ್ನಕೇಶವ, ಹಂಪಣ್ಣ, ತಳಕು ನಾಗರಾಜು ಮುಂತಾದವರು ಉಪಸ್ಥಿತರಿದ್ದರು.