ಡೆಂಘೀ ನಿಯಂತ್ರಣಕ್ಕೆ ಸಹಕರಿಸದಿದ್ದವರಿಗೆ ದಂಡ ವಿಧಿಸಿ: ಡಾ.ಕುಮಾರ

| Published : Sep 19 2025, 01:00 AM IST

ಡೆಂಘೀ ನಿಯಂತ್ರಣಕ್ಕೆ ಸಹಕರಿಸದಿದ್ದವರಿಗೆ ದಂಡ ವಿಧಿಸಿ: ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಇಲಾಖಾ ಅಧಿಕಾರಿಗಳು ವಲಸಿಗರಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಲಸಿಗರಿಗೆ ಸರಿಯಾದ ಮೂಲಭೂತ ಸೌಕರ್ಯ ನೀಡದಿರುವ ಕಾರ್ಖಾನೆಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ. ಜಿಲ್ಲೆಯಲ್ಲಿ ಡೆಂಘಿನಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ,

ಕನ್ನಡಪ್ರಭ ವಾರ್ತೆ ಮಂಡ್ಯ

ಡೆಂಘೀ ಒಂದು ಸಾಂಕ್ರಾಮಿಕ ರೋಗ. ಡೆಂಘೀ ನಿಯಂತ್ರಣ ಮಾಡಲು ಸಹಕರಿಸದಿದ್ದರೆ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಡೆಂಘೀ ನಿಯಂತ್ರಣಕ್ಕೆ ಸಹಕರಿಸದವರಿಗೆ ದಂಡ ವಿಧಿಸುವ ಕುರಿತು ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನೆ, ವಾಣಿಜ್ಯ ಸಂಸ್ಥೆಗಳು, ಶಾಲಾ-ಕಾಲೇಜು, ಹೋಟೆಲ್, ಕಟ್ಟಡ ನಿರ್ಮಾಣ ಕಾರ್ಯ, ಪಾಳು ಬಿದ್ದ ನಿವೇಶನ, ಖಾಲಿ ನಿವೇಶನಗಳಿಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಎಲ್ಲಾದರೂ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇರುವ ಜಾಗಗಳು ಇದ್ದಲ್ಲಿ ಮಾಲೀಕರಿಗೆ ಸೊಳ್ಳೆಗಳ ನಿಯಂತ್ರಣ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ನೋಟಿಸ್ ಜಾರಿಗೊಳಿಸಿ ಎಂದು ಹೇಳಿದರು.

ನೋಟಿಸ್ ಜಾರಿ ಮಾಡಿದ ನಂತರವೂ ನಿರ್ದಿಷ್ಟ ಸಮಯದೊಳಗೆ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಅಂತಹ ಮಾಲೀಕರಿಗೆ ದಂಡ ವಿಧಿಸಲಾಗುವುದು. ಮನೆಗಳ ಹೊರಾಂಗಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಕಂಡು ಬಂದರೆ ನಗರ ಪ್ರದೇಶದಲ್ಲಿ 800 ರು., ಗ್ರಾಮೀಣ ಪ್ರದೇಶದಲ್ಲಿ 400 ರು., ವಾಣಿಜ್ಯ ಸಂಸ್ಥೆಗಳು ಹಾಗೂ ಕಚೇರಿಗಳಲ್ಲಿ ಕಂಡು ಬಂದರೆ ನಗರ ಪ್ರದೇಶದಲ್ಲಿ 2000 ರು., ಗ್ರಾಮೀಣ ಪ್ರದೇಶದಲ್ಲಿ 1000 ರು., ನಿರ್ಮಾಣ ಕಾರ್ಯದಲ್ಲಿ ಕಂಡು ಬಂದರೆ ನಗರ ಪ್ರದೇಶದಲ್ಲಿ 4000 ರು., ಗ್ರಾಮೀಣ ಪ್ರದೇಶದಲ್ಲಿ 2000 ರು. ದಂಡ ವಿಧಿಸಲಾಗುವುದು. ಆದಾಗ್ಯೂ ದಂಡದ ಮೊತ್ತ ಪಾವತಿಸದಿದಲ್ಲಿ ಪ್ರತಿ ದಿನಕ್ಕೆ ಶೇ .50 ಹೆಚ್ಚುವರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ 103 ಡೆಂಘೀ, ಚಿಕೂನ್‌ ಗುನ್ಯಾ 11 ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕ ರೋಗಗಳು ಹೆಚ್ಚು ಕಂಡುಬರುತ್ತಿವೆ. ಕಬ್ಬು ಕಟಾವಿಗೆ ಮಾಡಲು ಸರಿಸುಮಾರು 25 ಸಾವಿರಕ್ಕೂ ಹೆಚ್ಚಿನ ಜನರು ಜಿಲ್ಲೆಗೆ ಆಗಮಿಸಿದ್ದಾರೆ. ಅವರೆಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸೊಳ್ಳೆ ಪರದೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಈಗಾಗಲೇ ಸಂಬಂಧ ಪಟ್ಟ ಕಾರ್ಖಾನೆಗಳಿಗೆ ಸೂಚಿಸಲಾಗಿದೆ ಎಂದರು.

ಆರೋಗ್ಯ ಇಲಾಖಾ ಅಧಿಕಾರಿಗಳು ವಲಸಿಗರಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಲಸಿಗರಿಗೆ ಸರಿಯಾದ ಮೂಲಭೂತ ಸೌಕರ್ಯ ನೀಡದಿರುವ ಕಾರ್ಖಾನೆಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ. ಜಿಲ್ಲೆಯಲ್ಲಿ ಡೆಂಘಿನಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ, ವಿಶೇಷ ಶಿಬಿರಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಕೆ.ಮೋಹನ್, ಸರ್ವೇಕ್ಷಣಾ ಧಿಕಾರಿ ಡಾ.ಕುಮಾರ, ಡಿ.ವಿ.ಬಿ.ಡಿ.ಸಿ ಅಧಿಕಾರಿ ಕಾಂತರಾಜು, ಆರ್.ಸಿ.ಎಚ್ ಅಧಿಕಾರಿ ಡಾ.ಕೆ.ಪಿ.ಅಶ್ವಥ್‌, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಸೋಮಶೇಖರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಬೆಟ್ಟಸ್ವಾಮಿ, ನಿವೃತ್ತ ಡಿ ಎಚ್‌ಒ ಡಾ.ಟಿ.ಎನ್ ಮರೀಗೌಡ ಇತರರಿದ್ದರು.