ಸಾರಾಂಶ
ರಾಜ್ಯದಲ್ಲಿ ಸೆ.22ರಿಂದ ನಡೆಯಲಿರುವ ಜಾತಿ ಗಣತಿ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹುಬ್ಬಳ್ಳಿಯಲ್ಲಿ ಸೆ.19ರಂದು ‘ವೀರಶೈವ ಲಿಂಗಾಯತ ಏಕತಾ ಸಮಾವೇಶ’ ಆಯೋಜಿಸಲಾಗಿದ್ದು, ಸಾವಿರಾರು ಸ್ವಾಮೀಜಿಗಳು ವೀರಶೈವ-ಲಿಂಗಾಯತ ಬೇರೆ ಅಲ್ಲ ಎರಡೂ ಒಂದೇ ಎಂಬ ಸಂದೇಶ ಸಾರಲಿದ್ದಾರೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ರಾಜ್ಯದಲ್ಲಿ ಸೆ.22ರಿಂದ ನಡೆಯಲಿರುವ ಜಾತಿ ಗಣತಿ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹುಬ್ಬಳ್ಳಿಯಲ್ಲಿ ಸೆ.19ರಂದು ‘ವೀರಶೈವ ಲಿಂಗಾಯತ ಏಕತಾ ಸಮಾವೇಶ’ ಆಯೋಜಿಸಲಾಗಿದ್ದು, ಸಾವಿರಾರು ಸ್ವಾಮೀಜಿಗಳು ವೀರಶೈವ-ಲಿಂಗಾಯತ ಬೇರೆ ಅಲ್ಲ ಎರಡೂ ಒಂದೇ ಎಂಬ ಸಂದೇಶ ಸಾರಲಿದ್ದಾರೆ.ನಗರದ ನೆಹರೂ ಮೈದಾನ ಸಮಾವೇಶಕ್ಕೆ ಸಜ್ಜುಗೊಂಡಿದ್ದು, ಕಾರ್ಯಕ್ರಮದಲ್ಲಿ 1000ಕ್ಕೂ ಅಧಿಕ ಮಠಾಧೀಶರು ಹಾಗೂ 1 ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ. ಜಾತಿ ಗಣತಿಯಲ್ಲಿ ಏನೆಂದು ನಮೂದಿಸಬೇಕು ಎಂಬುದರ ಕುರಿತು ಸಮುದಾಯದ ವಿವಿಧ ಪಂಗಡದವರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸಮಾವೇಶ ಹಮ್ಮಿಕೊಂಡಿದ್ದು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್, ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ವಿವಿಧ ಪಕ್ಷಗಳ ಮಾಜಿ ಸಚಿವರು, ಶಾಸಕರು, ಸಂಸದರು, ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಮಹರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳನಾಡು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಅನೇಕ ಮಠಾಧೀಶರು ಮೂರುಸಾವಿರ ಮಠದಿಂದ ಪಾದಯಾತ್ರೆ ಮೂಲಕ ನೆಹರೂ ಮೈದಾನಕ್ಕೆ ಆಗಮಿಸುವರು. ಧಾರವಾಡ, ಬಾಗಲಕೋಟೆ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ, ದಾವಣಗೆರೆ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದೆ. ಆಯೋಜಕರೊಂದಿಗೆ ಹು-ಧಾ ಪೊಲೀಸ್ ಕಮಿಷನರೇಟ್‌ನ ಡಿಸಿಪಿ ಮಹಾನಿಂಗ ನಂದಗಾವಿ ಸಭೆ ನಡೆಸಿದ್ದು, ವಾಹನಗಳ ಸಂಚಾರ, ಪಾರ್ಕಿಂಗ್ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.ಸಮಾವೇಶದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಮುಂಜಾಗ್ರತಾ ಕ್ರಮವಹಿಸಲು ಮತ್ತು ವೇದಿಕೆ ನಿರ್ಹವಣೆ, ಊಟ, ಮೇಲ್ವಿಚಾರಣೆ ಹಿತದೃಷ್ಟಿಯಿಂದ 200 ಸ್ವಯಂ ಸೇವಕರನ್ನು ನೇಮಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.