ಕುರುಬ ಸಮಾಜ ಎಸ್ಟಿಗೆ ಸೇರಿಸಲು ಮುಂದಾಗಿರುವುದು ಎಷ್ಟು ಸರಿ?: ಲೀಲಾದೇವಿ ಆರ್.ಪ್ರಸಾದ್ ಪ್ರಶ್ನೆ

| Published : Sep 19 2025, 01:00 AM IST

ಕುರುಬ ಸಮಾಜ ಎಸ್ಟಿಗೆ ಸೇರಿಸಲು ಮುಂದಾಗಿರುವುದು ಎಷ್ಟು ಸರಿ?: ಲೀಲಾದೇವಿ ಆರ್.ಪ್ರಸಾದ್ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೊರಟಿರುವುದು ಎಷ್ಟು ಸರಿ.

ಜಂಗಮರ ಜಾಗೃತ ಸಮಾವೇಶಕ್ಕೆ ಚಾಲನೆ । ಮಾಜಿ ಸಚಿವೆ

ವೀರಶೈವರು ಹಾಗೂ ಲಿಂಗಾಯತರು ಒಂದೇ

ಸಮುದಾಯ ಒಡೆಯುವ ಹುನ್ನಾರಕ್ಕೆ ಕಿವಿಗೊಡಬೇಡಿಕನ್ನಡಪ್ರಭ ವಾರ್ತೆ ಬಳ್ಳಾರಿ

ವೀರಶೈವ ಲಿಂಗಾಯತ ಸಮುದಾಯದ ಅನೇಕರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಆದರೆ, ಯಾರೂ ಸಹ ವೀರಶೈವ ಲಿಂಗಾಯತರಿಗೆ ಸರ್ಕಾರದ ಅನುಕೂಲಗಳು ಸಿಗಲಿ ಎಂಬ ಕಾರಣಕ್ಕಾಗಿ ಬೇರೆ ಸಮುದಾಯಕ್ಕೆ ಸೇರಿಸುವ ಹುನ್ನಾರ ನಡೆಸಲಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೊರಟಿರುವುದು ಎಷ್ಟು ಸರಿ? ಎಂದು ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್ ಪ್ರಶ್ನಿಸಿದರು.

ನಗರದ ರಾಘವ ಕಲಾಮಂದಿರದಲ್ಲಿ ಗುರುವಾರ ಜರುಗಿದ ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್‌ನ ಉದ್ಘಾಟನಾ ಸಮಾರಂಭ ಹಾಗೂ ಜಂಗಮರ ಜಾಗೃತ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.

ವೀರಶೈವರು ಲಿಂಗಾಯತರು ಬೇರೆ ಬೇರೆ ಅಲ್ಲ. ಇಬ್ಬರೂ ಒಂದೇ. ಲಿಂಗಧಾರಣೆ ಮಾಡಿ, ವಿಭೂತಿ ಧರಿಸಿ ಸಂಸ್ಕಾರ ಪಡೆದವರು ವೀರಶೈವ ಲಿಂಗಾಯತರು ಎನಿಸಿಕೊಳ್ಳುತ್ತಾರೆ. ವಿನಾಕಾರಣ ಸಮುದಾಯದಲ್ಲಿ ಕಂದಕ ಸೃಷ್ಟಿಸುವ ಹುನ್ನಾರಗಳು ಕೆಲ ರಾಜಕೀಯ ಶಕ್ತಿಗಳಿಂದ ನಡೆದಿದ್ದು, ವೀರಶೈವ ಲಿಂಗಾಯತರು ಹಾಗೂ ಗುರುಗಳ ಸ್ಥಾನದಲ್ಲಿ ಜಂಗಮರು ಇದನ್ನು ಅರ್ಥ ಮಾಡಿಕೊಳ್ಳಬೇಕು. ವೀರಶೈವ ಲಿಂಗಾಯತರು ಹಾಗೂ ಜಂಗಮರು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಅರಿಯದಿದ್ದರೆ ಸಮುದಾಯದ ಬೆಳವಣಿಗೆ ಸಾಧ್ಯವಿಲ್ಲ ಎಂದರು.

ಪ್ರಾಸ್ತಾವಿಕ ಮಾತನಾಡಿದ ಜಂಗಮ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ವೀರಶೈವ ಜಂಗಮರು ಮೂಲ ಪರಂಪರೆ ಬಿಡಬಾರದು. ವೀರಶೈವ ಜಂಗಮರು ಬೇಡ ಜಂಗಮರಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ವೀರಶೈವ ಜಂಗಮರು ಸಹ ಹಿಂದುಳಿದ ವರ್ಗದ 3ಬಿಯಲ್ಲಿ ಬರುತ್ತಿದ್ದು, ಇದರ ಜೊತೆಗೆ ಆರ್ಥಿಕ ದುರ್ಬಲ ವಲಯಕ್ಕೆ (ಇಡಬ್ಲ್ಯೂಸಿ) ಸಿಕ್ಕಿರುವ ಮೀಸಲಾತಿಯನ್ನೇ ಬಳಸಿಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವ ಕಾರ್ಯದಲ್ಲಿ ನಿರತರಾಗಬೇಕು ಎಂದು ಸಲಹೆ ನೀಡಿದರಲ್ಲದೆ, ಹುಬ್ಬಳ್ಳಿಯಲ್ಲಿ ಸೆ.19ರಂದು ಜರುಗುವ ವೀರಶೈವ ಲಿಂಗಾಯತ ಸಮಾವೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು.

ಮಾಜಿ ಶಾಸಕ ಚಂದ್ರಶೇಖರಯ್ಯಸ್ವಾಮಿ, ವೀವಿ ಸಂಘದ ಮಾಜಿ ಅಧ್ಯಕ್ಷ ಗುರುಸಿದ್ಧಯ್ಯಸ್ವಾಮಿ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಪಲ್ಲೇದ ಪಂಪಾಪತೆಪ್ಪ, ಸಿರುಗುಪ್ಪದ ವಕೀಲ ಮಲ್ಲಿಕಾರ್ಜುನಸ್ವಾಮಿ ಮಾತನಾಡಿದರು.

ಹರಗಿನಡೋಣಿ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವೀರಶೈವ ಸಮಾಜದ ಹಿರಿಯ ಮುಖಂಡರಾದ ಮಲ್ಲನಗೌಡ, ಸೋಮಲಿಂಗನಗೌಡ, ದರೂರು ಪುರುಷೋತ್ತಮಗೌಡ, ಜಂಗಮ ಪರಿಷತ್‌ನ ವಿ.ಎಸ್. ಪ್ರಭಯ್ಯಸ್ವಾಮಿ, ಎಚ್‌.ಕೆ. ಗೌರಿಶಂಕರ ಸ್ವಾಮಿ, ಎರಿಸ್ವಾಮಿ ಬೂದಿಹಾಳು ಮಠ, ಪ್ರಭುದೇವ ಕಪ್ಪಗಲ್ಲು, ಸಿದ್ಧರಾಮ ಕಲ್ಮಠ, ಮಠಂ ಗುರುಪ್ರಸಾದ್, ಸಿ.ಎಂ. ಗುರುಬಸವರಾಜ್, ಬಿಚ್ಚುಗಲ್ಲು ಪಂಚಾಕ್ಷರಪ್ಪ, ಕೆ.ಎಂ.ಶಿವಮೂರ್ತಿ, ಎಚ್.ಎಂ. ಕಿರಣ್ ಕುಮಾರ್, ಷಡಾಕ್ಷರಯ್ಯಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮೃತ್ಯುಂಜಯಸ್ವಾಮಿ ಬಂಡ್ರಾಳು ಹಾಗೂ ಕೆ.ಎಂ. ಕೊಟ್ರೇಶ್ ಕಾರ್ಯಕ್ರಮ ನಿರ್ವಹಿಸಿದರು. ಬುಧವಾರ ನಿಧನರಾದ ಸಮಾಜಸೇವಕಿ ಕೋಳೂರು ಪಾರ್ವತಮ್ಮ ಅವರಿಗೆ ಸಮಾರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲೆಯ ವಿವಿಧೆಡೆಗಳಿಂದ ವೀರಶೈವ ಲಿಂಗಾಯತರು ಹಾಗೂ ಜಂಗಮರು ಸಮಾರಂಭದಲ್ಲಿ ಭಾಗವಹಿಸಿದ್ದರು.

ನನ್ನ ಜಾತಿ ಬಗ್ಗೆ ಈವರೆಗೂ ಗೊತ್ತಿರಲಿಲ್ಲನಾನು ಜಂಗಮ ಸಮುದಾಯಕ್ಕೆ ಸೇರಿದವಳು ಎಂದು ಬಹುತೇಕರಿಗೆ ಗೊತ್ತಿರಲಿಲ್ಲ. ಬಳ್ಳಾರಿಯಲ್ಲಿ ನಡೆಯುತ್ತಿರುವ ಜಂಗಮ ಪರಿಷತ್‌ನ ಉದ್ಘಾಟನಾ ಸಮಾರಂಭಕ್ಕೆ ಬಂದ ಬಳಿಕ ನಾನೂ ಸಹ ಜಂಗಮಳು ಎಂದು ಎಲ್ಲರಿಗೂ ಗೊತ್ತಾಯಿತು. ರಾಜಕೀಯವಾಗಿ ಬೆಳೆಯಲು ಈ ಹಿಂದೆ ಜಾತಿ, ಧರ್ಮಗಳು ಅಡ್ಡಿಯಾಗುತ್ತಿದ್ದವು. ಈಗ ಅವೇ ಅಸ್ತ್ರಗಳಾಗಿವೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ತಿಳಿಸಿದರು.

ನನಗೀಗ 93 ವರ್ಷ. 23 ವರ್ಷಕ್ಕೆ ರಾಜಕೀಯ ಬಂದೆ. 10 ಚುನಾವಣೆ ಎದುರಿಸಿದ್ದೇನೆ. ನನ್ನ ಜಾತಿ, ಆಸ್ತಿ, ಮನೆತನ ಗೊತ್ತಿರಲಿಲ್ಲ. ಆಗಿನ ಕಾಲವೇ ಬೇರೆ. ಆಗ ರಾಜಕೀಯದಲ್ಲಿ ಬಹಳ ಸೂಕ್ಷ್ಮತೆಗಳಿದ್ದವು. ರಾಜಕೀಯ ಷಡ್ಯಂತ್ರ್ಯ ರೂಪಿಸಲು ಕೆಲವರು ನನ್ನ ಹಾಗೂ ಎಂ.ಪಿ. ಪ್ರಕಾಶ್‌ ಅವರ ಬಗ್ಗೆ ಬೇರೆಯೇ ಅರ್ಥ ಕಲ್ಪಿಸಿದರು ಎಂದು ಬೇಸರ ವ್ಯಕ್ತಪಡಿಸಿದರು. ಬದುಕಿನಲ್ಲಿ ಸಂಸ್ಕಾರ ಬಹಳ ಮುಖ್ಯ. ಸಂಸ್ಕಾರ ರೂಪಿಸಿಕೊಂಡವರ ಬದುಕು ಮಾತ್ರ ಸಾರ್ಥಕ ಎನಿಸಿಕೊಳ್ಳುತ್ತದೆ ಎಂದು ಲೀಲಾದೇವಿ ಆರ್‌.ಪ್ರಸಾದ್ ತಿಳಿಸಿದರು.