ಸಾರಾಂಶ
ಉಡುಪಿ: ರಾಜ್ಯ ಸರ್ಕಾರ ಆಯೋಜಿಸಿರುವ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ - 2025ರಲ್ಲಿ ಕರ್ನಾಟಕದಲ್ಲಿ ವಾಸಿತ್ತಿರುವ ಕ್ಷತ್ರಿಯ ಮರಾಠ ಸಮುದಾಯದವರು ತಮ್ಮ ಜಾತಿಯ ಹೆಸರನ್ನು ‘ಮರಾಠ’ ಎಂದು ಕಡ್ಡಾಯವಾಗಿ ನಮೂದಿಸುವಂತೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತು ನಿರ್ಣಯ ಕೈಗೊಂಡಿದೆ.
ಈ ಬಗ್ಗೆ ಕ.ಮ.ಕ್ಷ. ಪರಿಷತ್ತಿನ ಉಡುಪಿ ಜಿಲ್ಲಾ ಅಧ್ಯಕ್ಷ ಪ್ರಕಾಶ್ ರಾವ್ ಕವಡೆ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ತಮ್ಮ ಸಮುದಾಯದ ನಾಯಕ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮರಾಠ ಸಮಾಜದ ನಾಯಕರ, ಜನಪ್ರತಿನಿಧಿಗಳ, ಸಂಘಸಂಸ್ಥೆಗಳ ಮುಖಂಡರ ಉಪಸ್ಥಿತಿಯಲ್ಲಿ ಇನ್ನು ಮುಂದೆ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ತಮ್ಮ ಸಮುದಾಯವನ್ನು ‘ಮರಾಠ’ಎಂದು ಗುರುತಿಸಲ್ಪಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ತಮ್ಮ ಸಮುದಾಯವನ್ನು ಸರ್ಕಾರ ವಿವಿಧ ದಾಖಲೆಗಳಲ್ಲಿ ಮರಾಠ, ಆರ್ಯ ಮರಾಠ, ಮರಾಠ ಕ್ಷತ್ರೀಯ ಇತ್ಯಾದಿ ಹೆಸರುಗಳಿಂದ ಗುರುತಿುಸಲಾಗುತ್ತಿದ್ದು ಗೊಂದಲಕ್ಕೆ ಕಾರಣವಾಗಿದೆ. ತಮ್ಮ ಸಮುದಾಯವು ಪ್ರಸ್ತುತ ಇತರ ಹಿಂದುಳಿದ ಜಾತಿ (ಓಬಿಸಿ) ಮೀಸಲಾತಿಯಲ್ಲಿದ್ದು, ಬೇರೆ ಬೇರೆ ಹೆಸರುಗಳ ಕಾರಣದಿಂದ ಈ ಮೀಸಲಾತಿಯ ಲಾಭ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಒಂದೇ ಹೆಸರಿನಿಂದ ಎಲ್ಲರೂ ಗುರುತಿಸಲ್ಪಡಬೇಕು, ಆದ್ದರಿಂದ ಈ ಸಾಮಾಜಿಕ - ಶೈಕ್ಷಣಿಕ ಗಣತಿಯಲ್ಲಿ ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಮರಾಠ, ಉಪಜಾತಿ ಕಾಲಂನಲ್ಲಿ ಕುಣಬಿ, ಮಾತೃಭಾಷೆ ಕಾಲಂನಲ್ಲಿ ಮರಾಠಿ ಎಂದು ಎಲ್ಲರೂ ಕಡ್ಡಾಯವಾಗಿ ನಮೂದಿಸಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಪರಿಷತ್ ಗೌರವ ಸಲಹೆಗಾರ ಕೇಶವ ರಾವ್ ಮಾನೆ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಕಾರ್ಕಳ ತಾಲೂಕು ಕೋಶಾಧಿಕಾರಿ ಸತೀಶ್ ರಾವ್ ಕವಡೆ, ಜಿಲ್ಲಾ ಸಂಘಟನಾ ಕಾರ್ಯದ್‌ಶಿ ಮಧ್ವೇಶ್ ರಾವ್ ಮತ್ತು ವಿಘ್ನೇಶ್ ರಾವ್ ಉಪಸ್ಥಿತರಿದ್ದರು.