ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಫೆಬ್ರವರಿ ತಿಂಗಳ ಮೊದಲ ವಾರದಲ್ಲಿಯೇ ಹು-ಧಾ ಮಹಾನಗರದಲ್ಲಿ ಬಿಸಿಲ ಬೇಗೆಗೆ ಜನತೆ ಹೈರಾಣಾಗಿದ್ದಾರೆ. ಧಿಡೀರ್ ತಾಪಮಾನ ಏರಿಕೆಯಿಂದಾಗಿ ಮಕ್ಕಳು ಹಾಗೂ ವೃದ್ಧರು ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.ಫೆಬ್ರವರಿ ತಿಂಗಳಾಂತ್ಯಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಾಗುವುದು ಸಾಮಾನ್ಯ. ಆದರೆ, ಈ ಬಾರಿ ತಿಂಗಳ ಮೊದಲ ವಾರದಲ್ಲಿಯೇ ಬಿಸಿಲಿನ ಆರ್ಭಟ ಆರಂಭವಾಗಿರುವುದು ಜನತೆಯನ್ನು ಹೈರಾಣಾಗುವಂತೆ ಮಾಡಿದೆ.
ಕಣ್ಮರೆಯಾಗುತ್ತಿರುವ ಗಿಡಗಳುಹು-ಧಾ ಮಹಾನಗರದಲ್ಲಿ ಕಳೆದ 2-3 ವರ್ಷಗಳಲ್ಲಿ ಹೋಲಿಕೆ ಮಾಡಿದರೆ ಈಗ ನಗರದಾದ್ಯಂತ ಹಲವು ಕಡೆಗಳಲ್ಲಿ ಇದ್ದ ಬೃಹತ್ ಗಿಡ-ಮರಗಳನ್ನು ಕಡಿದು ಹಾಕಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿರುವುದರಿಂದಾಗಿ ರಸ್ತೆಗಳೆಲ್ಲ ಕಾದು ಕೆಂಡವಾಗುತ್ತಿವೆ. ಬೆಳಗ್ಗೆ 8 ಗಂಟೆಯಾದರೆ ಸಾಕು ದ್ವಿಚಕ್ರ ವಾಹನಗಳನ್ನು ರಸ್ತೆಗಿಳಿಸಲು ಯೋಚಿಸುವ ಸ್ಥಿತಿ ಇದೆ.
ಆರೋಗ್ಯ ಸಮಸ್ಯೆನಿರಂತರ ಬಿಸಿಲಿನಿಂದಾಗಿ ಮಕ್ಕಳು, ವಯೋವೃದ್ಧರಿಗೆ ಆರೋಗ್ಯ ಸಮಸ್ಯೆ ಕಂಡುಬರುತ್ತಿದೆ. ವೃದ್ಧರು ಮನೆಯಲ್ಲಿ ಕುಳಿತುಕೊಳ್ಳಲು ಆಗದಂತಹ ಸ್ಥಿತಿ ಉದ್ಭವವಾಗಿದೆ. ಹೊರಗಡೆ ಸಂಚರಿಸಿದರೆ ಬಿಸಿಲಿನ ಬೇಗೆ, ಮನೆಯಲ್ಲಿ ಕುಳಿತರೆ ಬೀಸುವ ಬಿಸಿಗಾಳಿಯಿಂದಾಗಿ ಇತ್ತ ಒಳಗೂ ಕೂಡದೇ, ಹೊರಗೂ ಹೋಗದೆ ಜನತೆ ಹೈರಾಣಾಗಿ ಹೋಗಿದ್ದಾರೆ.
ಇನ್ನೂ ಹೆಚ್ಚಾಗುವ ಸಂಭವಇದು ಫೆಬ್ರವರಿ, ಬೇಸಿಗೆ ಕಾಲದ ಆರಂಭ. ಈಗಲೇ 33 ರಿಂದ 35 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನು ಮಾರ್ಚ್, ಏಪ್ರಿಲ್ ತಿಂಗಳಲ್ಲಂತೂ ಬಿಸಿಲಿನ ಬೇಗೆ ಹೆಚ್ಚಾಗುವ ಆತಂಕವಿದೆ. ನಗರದಲ್ಲಿದ್ದ ಗಿಡಗಳನ್ನು ಕಡಿದು ಹಾಕಿ ಕಾಂಕ್ರಿಟ್ ರಸ್ತೆ ನಿರ್ಮಿಸಿರುವುದರಿಂದಾಗಿ ವರ್ಷಕ್ಕಿಂತ ವರ್ಷಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಳವಾಗುತ್ತಿದೆ ಎಂಬುದು ವೈದ್ಯರ, ಪರಿಸರ ಪ್ರೇಮಿಗಳ ಅಭಿಪ್ರಾಯ.
ಸಸಿ ನೆಡುವ ಕಾರ್ಯವಾಗಲಿಮಹಾನಗರದಲ್ಲಿ ರಸ್ತೆ ಅಗಲೀಕರಣ, ಮನೆಗಳ ನಿರ್ಮಾಣಕ್ಕಾಗಿ ಹಲವು ಭಾಗಗಳಲ್ಲಿ ನೂರಾರು ವರ್ಷಗಳ ಹಿನ್ನೆಲೆಯುಳ್ಳ ಬೃಹತ್ ಮರಗಳನ್ನು ತೆರವುಗೊಳಿಸಲಾಗಿದೆ. ಆದರೆ, ಅಲ್ಲಿ ಮತ್ತೆ ಹೊಸ ಸಸಿಗಳನ್ನು ನೆಡುವ ಕಾರ್ಯ ಮಾಡಿಲ್ಲ. ಎಲ್ಲೆಡೆಯೂ ಮರಗಳ ತೆರವು ಕಾರ್ಯ ಮಾಡಲಾಗುತ್ತಿದೆಯೇ ಹೊರತು ಎಲ್ಲಿಯೂ ಸಸಿ ನೆಡುವ ಕಾರ್ಯ ಮಾಡುತ್ತಿಲ್ಲ. ಇನ್ನು ಮುಂದಾದರೂ ಜನತೆ ತಮ್ಮ ಮನೆ, ಖಾಲಿ ಇರುವ ಜಾಗಗಳಲ್ಲಿ ಸಸಿ ನೆಡುವ ಕಾರ್ಯ ಕೈಗೊಂಡಲ್ಲಿ ಕೊಂಚ ಪ್ರಮಾಣದ ಬಿಸಿಲಿನ ಆರ್ಭಟ ತಗ್ಗಿಸಬಹುದು ಎಂಬುದು ಪರಿಸರ ಪ್ರೇಮಿಗಳ ಮಾತು.
ಪಾನೀಯ ಸೇವನೆ
ಕಳೆದ ಒಂದು ವಾರದಿಂದ ಬಿಸಿಲು ಹೆಚ್ಚಾಗಿದೆ. ಮಧ್ಯಾಹ್ನದ ವೇಳೆ ಹೊರಗೆ ಸಂಚರಿಸಲು ಆಗದಷ್ಟು ಪರಿಸ್ಥಿತಿ ನಿರ್ಮಾಣಾಗಿದೆ. ಈ ಬಿಸಿಲ ಬೇಗೆಯಿಂದ ಪಾರಾಗಲು ಏಳನೀರು, ಕಲ್ಲಂಗಡಿ, ತಂಪು ಪಾನೀಯ ಸೇವನೆ ಅನಿವಾರ್ಯವಾಗಿದೆ.ಅಮೃತಾ ಬಾಳಿಕಾಯಿ, ಸ್ಥಳಿಯ ನಿವಾಸಿಕಾಳಜಿ ವಹಿಸಿ
ಹು-ಧಾ ಮಹಾನಗರದಲ್ಲಿ ಪ್ರತಿವರ್ಷಕ್ಕಿಂತಲೂ ಈ ಬಾರಿ ಬಿಸಿಲಿನ ಪ್ರಖರತೆ ಕೊಂಚ ಹೆಚ್ಚಾಗಿದೆ. ಮಕ್ಕಳು, ವೃದ್ಧರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಮಧ್ಯಾಹ್ನದ ವೇಳೆ ಅನಿವಾರ್ಯತೆಯಿದ್ದರೆ ಮಾತ್ರ ಹೊರಗಡೆ ಸಂಚರಿಸಿ.ಶ್ರೀಧರ ದಂಡಪ್ಪನವರ, ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿಬಿಸಲಿನಿಂದ ರಕ್ಷಣೆಗೆ ಹೀಗೆ ಮಾಡಿ!
* ಬೇಸಿಗೆ ಕಾಲದಲ್ಲಿ ಸಡಿಲ, ತೆಳುವಾದ ಬಟ್ಟೆ ಧರಿಸಿ.* ಹೆಚ್ಚು ಮಸಾಲೆ, ಕೊಬ್ಬಿನಾಂಶವುಳ್ಳಿ ಆಹಾರ ಸೇವನೆ ಕಡಿಮೆ ಮಾಡಿ.
* ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಸಂಚರಿಸುವುದನ್ನು ಆದಷ್ಟು ಕಡಿಮೆ ಮಾಡಿ.* ಹೊರಗೆ ಹೋಗುವಾಗ ಕಡ್ಡಾಯವಾಗಿ ಕೊಡೆ ಬಳಸಿ
* ದೇಹದಲ್ಲಿ ನಿರ್ಜಲೀಕರಣ ಆಗದಂತೆ ಎಚ್ಚರ ವಹಿಸಿ* ಪ್ರತಿ ಎರಡು ಗಂಟೆಗಳಿಗೊಮ್ಮೆ ನೀರು ಕುಡಿಯಿರಿ
* ಮನೆಯಿಂದ ಹೊರಗೆ ಹೋಗುವಾಗ ಕಡ್ಡಾಯವಾಗಿ ನೀರಿನ ಬಾಟಲಿ ಇಟ್ಟುಕೊಳ್ಳಿ* ಬಿಸಿಲಿಗೆ ಹೋದರೆ ತಲೆಯನ್ನು ಮುಚ್ಚಿಕೊಳ್ಳಿ, ಹೆಚ್ಚಾಗಿ ಕನ್ನಡಕ ಧರಿಸಿ
* ಕಲ್ಲಂಗಡಿ, ಎಳನೀರು ಸೇರಿದಂತೆ ನೀರಿನಾಂಶವಿರುವ ಪದಾರ್ಥ ಸೇವಿಸಿ.