ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಕಡ್ಡಾಯ: ಕಾವ್ಯಾರಾಣಿ

| Published : Aug 31 2024, 01:31 AM IST

ಸಾರಾಂಶ

ಸಾರ್ವಜನಿಕ ರಸ್ತೆಯಲ್ಲಿ ಗಣೇಶ ಮಂಟಪ ನಿರ್ಮಿಸುವಂತಿಲ್ಲ. ಅಗ್ನಿ ಅವಘಡ ಉಂಟಾಗದಂತೆ ಆಯಾ ಗಣೇಶ ಮಂಡಳಿಯು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಎಸಿ ಕಾವ್ಯಾರಾಣಿ ತಿಳಿಸಿದರು.

ಶಿರಸಿ: ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಮಿತಿಯವರು ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಗಸೂಚಿ ಪ್ರಕಾರ ಪೊಲೀಸ್, ಅಗ್ನಿಶಾಮಕ, ಹೆಸ್ಕಾಂ ಹಾಗೂ ಸ್ಥಳೀಯಾಡಳಿತದ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ತಿಳಿಸಿದರು.ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವವರು ನಗರಸಭೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಗಣೇಶಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವವರು ಆಯಾ ಗ್ರಾಪಂ ಅನುಮತಿ ಪಡೆಯುವುದರ ಜತೆ ನಿರಪೇಕ್ಷಣಾ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕಾಗಿದೆ.ಸಾರ್ವಜನಿಕ ರಸ್ತೆಯಲ್ಲಿ ಗಣೇಶ ಮಂಟಪ ನಿರ್ಮಿಸುವಂತಿಲ್ಲ. ಅಗ್ನಿ ಅವಘಡ ಉಂಟಾಗದಂತೆ ಆಯಾ ಗಣೇಶ ಮಂಡಳಿಯು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಧ್ವನಿವರ್ಧಕಕ್ಕೆ ಆಯಾ ಪೊಲೀಸ್ ಠಾಣೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೬ ಗಂಟೆಯವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ಭಾವೈಕ್ಯತೆಗೆ ಧಕ್ಕೆ ತರುವಂತಹ ಭಾಷಣ ಹಾಗೂ ಪ್ರಚೋದನಾಕಾರಿ ಹೇಳಿಕೆ ನೀಡುವಂತಿಲ್ಲ ಎಂದರು.ಅಧಿಕೃತ ಪಟಾಕಿ ಮಾರಾಟಗಾರರು ಮಾತ್ರ ಮಾರಾಟಕ್ಕೆ ಅವಕಾಶವಿದ್ದು, ಗ್ರಾಮೀಣ ಭಾಗಗಳ ಅಂಗಡಿಗಳಲ್ಲಿ ಅನಧಿಕೃತ ಪಟಾಕಿ ಮಾರಾಟ ಮಾಡುವ ದೂರು ಕೇಳಿಬಂದಿದೆ. ಅನಧಿಕೃತ ಪಟಾಕಿ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಪೊಲೀಸ್ ಇಲಾಖೆ ಹಾಗೂ ಆಯಾ ಗ್ರಾಪಂ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಡಿಎಸ್‌ಪಿ ಕೆ.ಎಲ್. ಗಣೇಶ, ಸಿಪಿಐ ಶಶಿಕಾಂತ ವರ್ಮಾ, ಗ್ರಾಮೀಣ ಠಾಣೆ ಪಿ.ಐ. ಸೀತಾರಾಮ ಪಿ., ನಗರಸಭೆ ಪೌರಾಯುಕ್ತ ಕಾಂತರಾಜು, ನಗರ ಠಾಣೆ ಪಿಎಸ್‌ಐ ನಾಗಪ್ಪ ಬಿ., ಹೊಸ ಮಾರುಕಟ್ಟೆ ಠಾಣೆ ಪಿಎಸ್‌ಐ ರತ್ನಾ ಕೆ. ಮತ್ತಿತರರು ಇದ್ದರು.ತಾತ್ಕಾಲಿಕವಾಗಿ ರಸ್ತೆ ದುರಸ್ತಿ

ನಗರ ವ್ಯಾಪ್ತಿಯಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ- ಗುಂಡಿಗಳಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳ ಮಾತಿಗೆ ಬೆಲೆ ನೀಡುತ್ತಿಲ್ಲ. ದುರಸ್ತಿಯು ಯಾರ ಹೊಣೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಹಾಯಕ ಆಯುಕ್ತೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆ ಕಂಪನಿಯನ್ನು ಸಂಪರ್ಕಿಸಿ, ಚೌತಿ ಮೊದಲು ತಾತ್ಕಾಲಿಕ ದುರಸ್ತಿಗೆ ಆದೇಶ ಮಾಡಲಾಗುತ್ತದೆ ಎಂದರು.