ಮೂರು ವರ್ಷದಲ್ಲಿ ಸರ್ಕಾರಿ ಶಾಲೆಗಳು ಬಹುತೇಕ ಸುಸ್ಥಿತಿಗೆ: ಮಧು ಬಂಗಾರಪ್ಪ

| Published : Aug 31 2024, 01:31 AM IST

ಮೂರು ವರ್ಷದಲ್ಲಿ ಸರ್ಕಾರಿ ಶಾಲೆಗಳು ಬಹುತೇಕ ಸುಸ್ಥಿತಿಗೆ: ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಒಂಬತ್ತೂವರೆ ತಿಂಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 8200 ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇನ್ನೂ 1500 ಹೊಸ ಕೊಠಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಮಳೆಯಿಂದಾಗಿ ಕರಾವಳಿ ಭಾಗದಲ್ಲಿ ಸಾಕಷ್ಟು ಶಾಲಾ ಕೊಠಡಿಗಳು ಕುಸಿದಿವೆ. ಈ ಭಾಗದಲ್ಲೂ ಶಾಲಾ ಕೊಠಡಿಗಳು ಕುಸಿತಕ್ಕೊಳಗಾಗಿವೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಸರ್ಕಾರಿ ಶಾಲೆಗಳನ್ನು ಬಹುತೇಕ ಸುಸ್ಥಿತಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ನಿಡಘಟ್ಟ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಾಲಿ ದುಸ್ಥಿತಿಯಲ್ಲಿರುವ ಶಾಲೆಗಳನ್ನು ಶೇ.೪೦ರಷ್ಟು ಸುಸ್ಥಿತಿಗೆ ತಂದಿದ್ದೇವೆ. ಮೂರು ವರ್ಷಗಳಲ್ಲಿ ಶೇ.90ರಷ್ಟು ಸುಸ್ಥಿತಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಕಳೆದ ಒಂಬತ್ತೂವರೆ ತಿಂಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 8200 ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇನ್ನೂ 1500 ಹೊಸ ಕೊಠಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಮಳೆಯಿಂದಾಗಿ ಕರಾವಳಿ ಭಾಗದಲ್ಲಿ ಸಾಕಷ್ಟು ಶಾಲಾ ಕೊಠಡಿಗಳು ಕುಸಿದಿವೆ. ಈ ಭಾಗದಲ್ಲೂ ಶಾಲಾ ಕೊಠಡಿಗಳು ಕುಸಿತಕ್ಕೊಳಗಾಗಿವೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ 46 ಸಾವಿರ ಶಾಲೆಗಳ ಅಭಿವೃದ್ಧಿಗೆ ಅನುದಾನದ ಅಗತ್ಯವೂ ಇದೆ. ಇದೀಗ 68 ಕೋಟಿ ರು. ವೆಚ್ಚದಲ್ಲಿ 2500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಶಿಕ್ಷಣವನ್ನು ನೀಡಲಾಗುವುದು. ಶಿಕ್ಷಕರಿಗೆ ಕೊರತೆ ಎದುರಾಗದಂತೆ ಎಚ್ಚರವಹಿಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲಾಗುವುದು ಎಂದು ನುಡಿದರು.

ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಇರುವುದು ನಿಜ. ಶಿಕ್ಷಕರ ಹುದ್ದೆ ಖಾಲಿ ಇರುವ ಜಾಗಕ್ಕೆ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ 42 ಸಾವಿರ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಹಿಂದಿನ ಸರ್ಕಾರ ಮೂರೂವರೆ ವರ್ಷದಲ್ಲಿ 4,400 ಕಾಯಂ ಶಿಕ್ಷಕರನ್ನು ನೇಮಕ ಮಾಡಿತ್ತು. ನಾವು ಅಧಿಕಾರಕ್ಕೆ ಬಂದ ಒಂಬತ್ತೂವರೆ ತಿಂಗಳಲ್ಲಿ 42 ಸಾವಿರ ಕಾಯಂ ಶಿಕ್ಷಕರನ್ನು ನೇಮಿಸಲಾಗಿದೆ. ಇನ್ನೂ 10 ಸಾವಿರ ಶಿಕ್ಷಕರ ಅಗತ್ಯವಿದೆ ಎಂದು ಸರ್ಕಾರದ ಗಮನ ಸೆಳೆದಿದ್ದೇನೆ. ಬಜೆಟ್‌ನಲ್ಲಿ ಮಂಜೂರು ಮಾಡುವ ಭರವಸೆ ಇದೆ. ಅದೇ ರೀತಿ ಅನುದಾನಿತ ಶಾಲೆಗಳಿಗೆ ಐದು ವರ್ಷಗಳ ಅವಧಿಗೆ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ತಾಲೂಕಿನ ನಿಡಘಟ್ಟ ಶಾಲೆಗೆ 11 ಕೊಠಡಿಗಳ ಅಗತ್ಯವಿರುವುದಾಗಿ ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ದುರಸ್ತಿಮಾಡುವ ಬದಲು ಸಂಪೂರ್ಣವಾಗಿ ಕೆಡವಿ ಹೊಸದಾಗಿ ನಿರ್ಮಿಸುವುದೇ ಒಳ್ಳೆಯದು. ಅದಕ್ಕಾಗಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ನನ್ನ ಇಲಾಖೆಯಿಂದ ಶೀಘ್ರ ಮಂಜೂರಾತಿ ದೊರಕಿಸಿಕೊಡುವುದಾಗಿ ತಿಳಿಸಿದರು.

ಶಾಸಕರಾದ ಕೆ.ಎಂ.ಉದಯ್ , ಪಿ.ರವಿಕುಮಾರ್ , ಡಿಡಿಪಿಐ ಎಚ್ .ಶಿವರಾಮೇಗೌಡ, ಡಯಟ್ ನ ಪುರುಷೋತ್ತಮ್ , ಬಿಇಒ ಕಾಳೀರಯ್ಯ ಇದ್ದರು.