ಪರಿಸರ ಮಾರಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ತಡೆಹಿಡಿಯುವಂತೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ ಕಮಿಟಿಯು (ಸಿಇಸಿ) ಸ್ಥಳೀಯರಿಗೆ ಗೊತ್ತಾಗದ ರೀತಿಯಲ್ಲಿ ಯೋಜನಾ ಪ್ರದೇಶಕ್ಕೆ ಸಮೀಕ್ಷೆಗೆಂದು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಒಳ್ಳೆ ಬೆಳವಣಿಗೆಯಲ್ಲ ಎಂದು ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಗುಡುಗಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪರಿಸರ ಮಾರಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ತಡೆಹಿಡಿಯುವಂತೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಕೇಂದ್ರ ಸರ್ಕಾರದ ಸೆಂಟ್ರಲ್ ಎಂಪವರ್ಡ್ ಕಮಿಟಿಯು (ಸಿಇಸಿ) ಸ್ಥಳೀಯರಿಗೆ ಗೊತ್ತಾಗದ ರೀತಿಯಲ್ಲಿ ಯೋಜನಾ ಪ್ರದೇಶಕ್ಕೆ ಸಮೀಕ್ಷೆಗೆಂದು ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದು ಒಳ್ಳೆ ಬೆಳವಣಿಗೆಯಲ್ಲ ಎಂದು ರಾಷ್ಟ್ರಭಕ್ತರ ಬಳಗದ ಮುಖ್ಯಸ್ಥ ಕೆ.ಎಸ್.ಈಶ್ವರಪ್ಪ ಗುಡುಗಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಸರ ಮಾರಕ ಯೋಜನೆಯ ವಿರುದ್ಧ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ಅಲ್ಲದೆ ಕೇಂದ್ರ ಸರ್ಕಾರದ ಪರಿಸರ ಮತ್ತು ಹವಾಮಾನ ಇಲಾಖೆಯ ಸಂಶೋಧನಾ ಮುಖ್ಯಸ್ಥರಾದ ಪ್ರಣೀತಾ ಕೌರ್ ಹಾಗೂ ಇತರ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದ ಮುಖ್ಯಸ್ಥರೇ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಶರಾವತಿ ಕಣಿವೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು ಎಂಬ ಸ್ಪಷ್ಟ ಅಭಿಪ್ರಾಯ ನೀಡಿದ್ದಾರೆ ಎಂದು ಹೇಳಿದರು.

ಅಲ್ಲದೆ, ರಾಜ್ಯ ಉಚ್ಛ ನ್ಯಾಯಾಲಯವು ಕೂಡ ಈ ಯೋಜನೆಗೆ ತಡೆಯಾಜ್ಞೆ ನೀಡಿದೆ. ಆದಾಗ್ಯೂ ಸಿಇಸಿ ಕಮಿಟಿಯವರು ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆಪಿಸಿಎಲ್ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸುವುದು ಎಂದು ಮೇ 18ರಂದು ಹೊರಡಿಸಿದ ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದ ಪತ್ರವೊಂದರಲ್ಲಿ ತಿಳಿಸಲಾಗಿದೆ. ಇದು ಉಚ್ಚ ನ್ಯಾಯಾಲಯದ ಸ್ಪಷ್ಟ ನಿಂದನೆಯಾಗಿದೆ ಎಂದು ಕಿಡಿಕಾರಿದರು.

ಒಂದು ಸಾಂವಿಧಾನಿಕ, ಸ್ವಾಯತ್ತ ಸಂಸ್ಥೆ ಸ್ಥಳೀಯ ಯೋಜನಾ ಪ್ರದೇಶಕ್ಕೆ ಬರುವ ಸಂದರ್ಭದಲ್ಲಿ ಯೋಜನೆಯ ವಿರುದ್ಧ ಜನಾಭಿಪ್ರಾಯ, ಉಗ್ರ ಹೋರಾಟ ಮಾಡುತ್ತಿರುವ ಸಂಘಟನೆಗಳನ್ನೇ ನಿರ್ಲಕ್ಷಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಈ ಸಮಿತಿಯ ಇಲ್ಲಿಗೆ ಬರುವಾಗ ಸಾರ್ವಜನಿಕರಿಗೆ ಮಾಹಿತಿ ಕೊಡದಿರಲು ಕಾರಣವೇನು, ಇದರ ಹಿಂದೆ ಯಾವುದೋ ಕಾಣದ ಕೈಗಳು ಷಡ್ಯಂತ್ರ ನಡೆಸುತ್ತಿವೆ ಎಂಬ ಅನುಮಾನ ಗಾಢವಾಗಿದೆ. ಅಲ್ಲದೆ ಮೂಕಾಂಬಿಕ ಸಂರಕ್ಷಿತ ಅರಣ್ಯ ಪ್ರದೇಶದ ೪೦೦೦ ಮೆಗಾ ವ್ಯಾಟ್ ಸಾಮರ್ಥ್ಯದ ವರಾಹಿ ಪಂಪ್ಡ್ ಸ್ಟೋರೇಜ್ ಯೋಜನೆಗೂ ತಾಂತ್ರಿಕ ಅನುಮೋದನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಶರಾವತಿ ಪಂಪ್ಡ್ ಸ್ಟೋರೇಜ್ ವಿರುದ್ಧ 75 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇಂತಹದ್ದರಲ್ಲಿ ಸಿಇಸಿ ಸೌಜನ್ಯಕ್ಕಾದರೂ ಇಲ್ಲಿಯ ಭೇಟಿಯ ಮಾಹಿತಿಯನ್ನು ನಮಗೆ ನೀಡಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.ಜೂನ್ 2 ರಂದು ಸಂಜೆ 4 ಗಂಟೆಗೆ ಸಿಇಸಿ ಇಲ್ಲಿಯ ಶ್ರೀಗಂಧದ ಕೋಠಿಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಲಿದೆ. ನಮ್ಮ ಸಮಿತಿಯ ಪದಾಧಿಕಾರಿಗಳು ಸಿಇಸಿ ಮುಖ್ಯಸ್ಥರನ್ನು, ಸದಸ್ಯರನ್ನು ಭೇಟಿ ಮಾಡಿ ಯೋಜನೆಯ ವಿರುದ್ಧ ತಾವು ಹಮ್ಮಿಕೊಂಡ ಹೋರಾಟದ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಜತೆಗೆ ನ್ಯಾಯಾಲಯದ ಅನುಮತಿ ಇಲ್ಲದೆ ಪರಿಶೀಲನೆಗೆ ಬಂದಿರುವುದು ನ್ಯಾಯಾಲಯದ ನಿಂದನೆಯಾಗುತ್ತಿದ್ದು, ಈ ಬಗ್ಗೆ ಅವರಿಗೆ ರಾಷ್ಟ್ರಭಕ್ತರ ಬಳಗ ಪ್ರಶ್ನಿಸಲಿದೆ ಎಂದು ತಿಳಿಸಿದರು.

ರಾಷ್ಟ್ರಭಕ್ತ ಬಳಗದ ಪ್ರಮುಖರಾದ ಶ್ರೀಕಾಂತ್, ಮಹಾದೇವ ಸ್ವಾಮಿ, ಸುಬ್ಬಣ್ಣ, ದಿಲೀಪ್ ನಾಡಿಗ್, ವಿ.ರಾಜು, ಪರಿಸರ ರಮೇಶ್, ಎಸ್.ಬಿ.ಅಶೋಕ್‌ಕುಮಾರ್ ಮತ್ತಿತರರು ಇದ್ದರು.