ಮೆರವಣಿಗೆ, ಮನರಂಜನಾ ಕಾರ್ಯಕ್ರಮಕ್ಕೆ ಸಮಯ ನಿಗದಿ

| Published : Aug 31 2024, 01:31 AM IST

ಸಾರಾಂಶ

ನರಸಿಂಹರಾಜಪುರ, ಗಣೇಶೋತ್ಸವ ವಿಸರ್ಜನಾ ಮೆರವಣಿಗೆ, ಮನರಂಜನಾ ಕಾರ್ಯಕ್ರಮವನ್ನು ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಆನಂತರ ಧ್ವನಿವರ್ಧಕ ಬಳಸಬಾರದು ಎಂದು ಪೊಲೀಸ್‌ ಠಾಣಾಧಿಕಾರಿ ಬಿ.ಎಸ್.ನಿರಂಜನ್‌ಗೌಡ ಸೂಚನೆ ನೀಡಿದರು.

- ಗಣೇಶ, ಈದ್ ಮಿಲಾದ್ ಹಬ್ಬದ ನಿಮಿತ್ತ ಶಾಂತಿ ಸಭೆಯಲ್ಲಿ ಬಿ.ಎಸ್.ನಿರಂಜನ್‌ಗೌಡ ತಾಕೀತು

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಗಣೇಶೋತ್ಸವ ವಿಸರ್ಜನಾ ಮೆರವಣಿಗೆ, ಮನರಂಜನಾ ಕಾರ್ಯಕ್ರಮವನ್ನು ರಾತ್ರಿ 10 ಗಂಟೆಯೊಳಗೆ ಮುಗಿಸಬೇಕು. ಆನಂತರ ಧ್ವನಿವರ್ಧಕ ಬಳಸಬಾರದು ಎಂದು ಪೊಲೀಸ್‌ ಠಾಣಾಧಿಕಾರಿ ಬಿ.ಎಸ್.ನಿರಂಜನ್‌ಗೌಡ ಸೂಚನೆ ನೀಡಿದರು.

ಶುಕ್ರವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ನಿಮಿತ್ತ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ಎನ್.ಆರ್.ಪುರ ಶಾಂತಿಯ ಊರಾಗಿದೆ. ಇಲ್ಲಿ ಎಲ್ಲಾ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದ ಯುತವಾಗಿ ಆಚರಿಸುತ್ತಾ ಬರಲಾಗುತ್ತಿದೆ. ಹಾಗೆಯೇ ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ಗಣೇಶನ ವಿಗ್ರಹಕ್ಕೆ ಬೆಲೆ ಬಾಳುವ ಚಿನ್ನಾಭರಣ ಹಾಕುತ್ತಿದ್ದರೆ ಪೆಂಡಾಲ್‌ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಪೆಂಡಾಲ್‌ನಲ್ಲಿ ರಾತ್ರಿ ಕಾವಲುಗಾರರನ್ನು ನೇಮಿಸಿಕೊಳ್ಳಬೇಕು. ಈ ಬಾರಿ ಪಟ್ಟಣ ವ್ಯಾಪ್ತಿಯ ಎಲ್ಲಾ ಗಣೇಶ ವಿಗ್ರಹಗಳನ್ನು ಮೆಣಸೂರು ಭದ್ರಾ ಹಿನ್ನೀರಿನಲ್ಲಿ ವಿಸರ್ಜಿಸಲು ನಿರ್ಧರಿಸಲಾಗಿದೆ. ಪಟ್ಟಣ ವ್ಯಾಪ್ತಿಯ ಎಲ್ಲ ಗಣೇಶ ಸಮಿತಿಯವರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ವಿಸರ್ಜನಾ ಸ್ಥಳದಲ್ಲಿ ಮೆಸ್ಕಾಂ ಇಲಾಖೆಯಿಂದ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ವ್ಯಾಟ್ಸಪ್ ಗ್ರೂಪ್‌ ಮಾಡಲಾಗಿದ್ದು ಅದರಲ್ಲಿ ಹಬ್ಬದ ಆಚರಣೆ ಹಾಗೂ ಇಲಾಖೆ ಆದೇಶ, ಸೂಚನೆಗಳನ್ನು ಹಾಕಲಾಗುವುದು ಎಂದರು.

ಮಸೀದಿ ಮುಖ್ಯಸ್ಥ ಸೈಯದ್ ಸಾಧಿಕ್ ಬಾಷಾ ಮಾತನಾಡಿ, ನಮ್ಮ ಸಮೂದಾಯವರು ಸೆ.16 ರಂದು ಈದ್ ಮಿಲಾದ್ ಆಚರಿಸುತ್ತೇವೆ. ರಾತ್ರಿ 9 ರಿಂದ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಗುವುದು. ಮೆರವಣಿಗೆ ಇನ್ನಿತರೆ ಕಾರ್ಯಕ್ರಮ ಆಯೋಜಿಸಿದರೆ ಪೊಲೀಸ್ ಇಲಾಖೆ ಗಮನಕ್ಕೆ ತರಲಾಗುವುದು. ಗಣೇಶೋತ್ಸವಕ್ಕೆ ನಮ್ಮ ಶುಭಾಶಯಗಳು. ಎಲ್ಲರೂ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸೋಣ ಎಂದರು.

ಮೆಸ್ಕಾಂ ಇಲಾಖೆ ಜೆಇ ಸುರೇಶ್ ಮಾತನಾಡಿ, ಗಣೇಶನ ಪೆಂಡಾಲ್ಗೆ ಹಾಕುವ ವಿದ್ಯುತ್ ಅಲಂಕಾರದ ವೈರ್ಗಳು ಉತ್ತಮ ಗುಣಮಟ್ಟಗಳದ್ದೇ ಆಗಿರಬೇಕು. ವಿದ್ಯುತ್ ತಂತಿ ಹಾದು ಹೋಗಿರುವ ಕೆಳಗೆ ಪೆಂಡಾಲ್ ನಿರ್ಮಾಣ ಮಾಡಬಾರದು ಎಂದರು.

ತಾಪಂ ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಗಣಪತಿ ಪೆಂಡಾಲ್ ಆವರಣದಲ್ಲಿ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ, ಗ್ರಾಮದ ಸ್ವಚ್ಛತೆಗೆ ಗ್ರಾಪಂ ಸಿಬ್ಬಂದಿಯೊಂದಿಗೆ ಸಹಕರಿಸ ಬೇಕು ಎಂದು ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ತನುಜಾ.ಟಿ. ಸವದತ್ತಿ ಮಾತನಾಡಿ, ಸರ್ಕಾರದ ಆದೇಶ ಹಾಗೂ ಮಾರ್ಗಸೂಚಿ ಯಂತೆ ಹಬ್ಬಗಳನ್ನು ಆಚರಿಸಬೇಕು. ಶಾಂತಿ ಭಂಗ ತರುವಂತಹ ಘಟನೆಗಳಿಗೆ ಆಸ್ಪದ ನೀಡಬೇಡಿ. ಎಲ್ಲರೂ ಒಗ್ಗೂಡಿ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಿ ಎಂದರು.

ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಆರ್.ವಿ. ಮಂಜುನಾಥ್, ತಾಲೂಕಿನ ವಿವಿಧ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಮಸೀದಿಗಳ ಮುಖ್ಯಸ್ಥರು, ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು, ಗ್ರಾ.ಪಂ. ಪಿಡಿಓಗಳು ಉಪಸ್ಥಿತರಿದ್ದರು.