ವಿಶ್ವವೇ ಭಾರತದತ್ತ ತಿರುಗಿನೋಡುವಂತೆ ಮಾಡಿದ ಕೀರ್ತಿ ಪ್ರಧಾನಿ ಮೋದಿಗೆ । ಪ್ರಧಾನಿಗಳಿಂದ ಭಾರತಕ್ಕೆ ಅಪಾರ ಗೌರವ: ರಘು ಕೌಟಿಲ್ಯ
---ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಂವಿಧಾನದ ಆಶಯದ ಜೊತೆಗೆ ದೇಶದ ಪ್ರಧಾನಿಯಾಗಿ ಸತತ ೧೨ ವರ್ಷ ಪೂರೈಸಿರುವ ನರೇಂದ್ರ ಮೋದಿ ಅವರು ತಮ್ಮ ಆಡಳಿತದ ಅವಧಿಯಲ್ಲಿ ವಿಕಸಿತ ಭಾರತದ ರೂವಾರಿಯಾಗಿ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದಲ್ಲಿ ಅನೇಕ ಪ್ರಧಾನಿಗಳು ಆಡಳಿತ ನಡೆಸಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಯ ಜೊತೆಗೆ ಪ್ರಧಾನ ಪಾತ್ರವನ್ನು ವಹಿಸಿದ್ದಾರೆ ಎಂದರು.
ಅತ್ಯಂತ ದೀರ್ಘಾವಧಿಯ ಪ್ರಧಾನಿಯಾಗಿ ನೆಹರು ದಾಖಲೆಯನ್ನು ಮುರಿಯುವುದಲ್ಲದೇ, ಜಗತ್ತಿನಲ್ಲೇ ದೇಶಕ್ಕೆ ವಿಶೇಷ ಗೌರವವನ್ನು ತಂದುಕೊಟ್ಟಿದ್ದಾರೆ. ವಿಶ್ವ ನಾಯಕತ್ವದ ಗುಣವನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ವಿಶ್ವದ ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿದ್ದ ಹಲವಾರು ರಾಷ್ಟ್ರಗಳನ್ನು ಹಿಂದಿಕ್ಕಿ ದೇಶಕ್ಕೆ ಸದೃಢ ಆರ್ಥಿಕತೆಯನ್ನು ನಿರ್ಮಿಸಿದ್ದಾರೆ. ಕಳೆದ ೧೨ ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕಡಿಮೆ ಇಲ್ಲದಂತೆ ದೇಶ ಕಟ್ಟಿದ್ದಾರೆ ಎಂದರು.
ವಿಶ್ವದಲ್ಲಿಯೇ ಭಾರತ ಆರ್ಥಿಕವಾಗಿ ಮುಂಚೂಣಿಯಲ್ಲಿದ್ದು ೬ನೇ ಸ್ಥಾನ ಪಡೆದಿದೆ. ಕಾಂಗ್ರೆಸ್ಸಿಗರು ಕಳೆದ ೫೫ ವರ್ಷಗಳ ಆಳ್ವಿಕೆಯಲ್ಲಿ ಮತ ಬ್ಯಾಂಕ್ ಆಧರಿತವಾಗಿ ಕಾಲ ಕಳೆದರು ಎಂದು ಆರೋಪಿಸಿದರು.ಬಿಜೆಪಿಯ ಆಡಳಿತದ ಅವಧಿಯಲ್ಲಿ ಎಪಿಜೆ ಅಬ್ದುಲ್ ಕಲಾಂ, ರಾಮನಾಥ್ ಗೋವಿಂದ್, ದ್ರೌಪತಿ ಮುರ್ಮ ಅವರನ್ನು ರಾಷ್ಟ್ರಪತಿ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಸಾಬೀತು ಮಾಡಿದೆ. ವಿಕಸಿತ ಭಾರತದ ಕಲ್ಪನೆಯನ್ನು ಸಕಾರಗೊಳಸಬೇಕು. ಸ್ವಾವಲಂಬಿ ಭಾರತವನ್ನು ನಿರ್ಮಾಣ ಮಾಡಬೇಕು ಎಂಬ ಪರಿಕಲ್ಪನೆ ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಯೋಜನೆ, ಉಜ್ವಲ ಯೋಜನೆ, ಮುದ್ರಾ ಯೋಜನೆ ಇನ್ನಿತರೆ ನೂರಾರು ಯೋಜನೆಗಳು ೧೨ ವರ್ಷಗಳ ಮೋದಿಯವರ ಸಾಧನೆಯನ್ನು ಸಾರುತ್ತದೆ. ದೇಶದ ಸಮಗ್ರ ಅಭಿವೃದ್ಧಿ ಮತ್ತು ಭಾರತೀಯರಲ್ಲಿ ಸ್ವಾಭಿಮಾನದ ಹೆಜ್ಜೆಯನ್ನು ನರೇಂದ್ರ ಮೋದಿ ಅವರು ಗುರುತಿಸಿದ್ದಾರೆ ಎಂದರು.ರಾಜ್ಯದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಿಗೂ ಚೈತನ್ಯ ತುಂಬುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ದೇಶದಲ್ಲಿದ್ದ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೆಸೆದರು. ಕಾಶ್ಮೀರದಲ್ಲಿದ್ದ ೩೭೦ ಕಾಯ್ದೆಯನ್ನು ಕಿತ್ತೊಗೆದರು ಎಂದರು.
ನರೇಂದ್ರ ಮೋದಿ ಅವರು ಜಾರಿಗೊಳಿಸಿದ ಅನೇಕ ಯೋಜನೆಗಳನ್ನು ದೇಶದ ೮೦ ಕೋಟಿ ಜನರು ಲಾಭ ಪಡೆಯುತ್ತಿದ್ದಾರೆ. ಇದರಿಂದಾಗಿ ದೇಶದ ಜನರ ತಲಾದಾಯ ಏರಿಕೆಯಾಗಿದೆ. ಅಲ್ಲದೇ ದೇಶದ ಪ್ರತಿಯೊಬ್ಬರಿಗೂ ತಂತ್ರಜ್ಞಾನ ಸ್ಪರ್ಶವಾಗಿದೆ ಎಂದು ತಿಳಿಸಿದರು.ನರೇಂದ್ರ ಮೋದಿ ಅವರು ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಲ್ಲದೇ ಎಸ್ಸಿ, ಎಸ್ಟಿ ವರ್ಗಗಳಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಉಳಿದಂತೆ ನಗರೀಕರಣ, ರೈಲ್ವೆ, ವಿಮಾನ ಸೇವೆ, ಉದ್ಯೋಗ, ಕುಡಿಯುವ ನೀರು, ಉಜ್ವಲ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ, ಮೈತ್ರಿ ಅಭ್ಯರ್ಥಿ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ ಕುಮಾರ್, ಮಾಜಿ ಶಾಸಕ ಎಸ್. ಬಾಲರಾಜ್, ಮಾಜಿ ಎಂಎಲ್‌ಸಿ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಮುಖಂಡ ಎಂ. ರಾಮಚಂದ್ರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವ ಸ್ವಾಮಿ, ವಕ್ತಾರ ಮನೋಜ್ ಪಟೇಲ್ ಇದ್ದರು.