ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ನಿಯಮ ಗಾಳಿಗೆ ತೂರಿ ಹಾಕಿರುವ ಆರೋಪ
ರಾಜಕೀಯ ಸೇರಿ ಎಲ್ಲ ರೀತಿಯ ಫ್ಲೆಕ್ಸ್ ಅಳವಡಿಸಲು ಅನುಮತಿ ಕಡ್ಡಾಯ: ಮುಖ್ಯಾಧಿಕಾರಿ---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪುರಸಭಾ ವ್ಯಾಪ್ತಿಯ ಮಸೂರು-ಊಟಿ ರಸ್ತೆಯ ಸೂರ್ಯ ಬೇಕರಿ ಕಟ್ಟಡದ ಮೇಲೆ ಇಂಗ್ಲಿಷ್‌ನ ಬೃಹತ್ ಜಾಹೀರಾತು ಫಲಕವನ್ನು ಪುರಸಭೆ ಮುಖ್ಯಾಧಿಕಾರಿ ಎಸ್. ಸರವಣ ತೆರವುಗೊಳಿಸಿದ್ದಾರೆ.ಕನ್ನಡ ಸಂಘಟನೆಗಳ ಹಾಗೂ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಪುರಸಭೆ ಮುಖ್ಯಾಧಿಕಾರಿಗಳು ಶನಿವಾರ ಬೆಳಗ್ಗೆ ಸಿಬ್ಬಂದಿಗಳ ಮೂಲಕ ಫಲಕ ತೆರವುಗೊಳಿಸಿದ್ದಾರೆ.
ಜೊತೆಗೆ ಎಲ್ಲ ಜಾಹೀರಾತು ಏಜೆನ್ಸಿಗಳು, ವ್ಯಾಪಾರಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಭಾಷಾ ನೀತಿ ಕಡ್ಡಾಯ:ಸರ್ಕಾರದ ಅಧಿಕೃತ ಸುತ್ತೋಲೆ ಪ್ರಕಾರ ಯಾವುದೇ ಜಾಹೀರಾತು ಫಲಕ ಅಥವಾ ನಾಮಫಲಕಗಳ ಮೇಲ್ಭಾಗದ ಮೊದಲ ಸಾಲಿನಲ್ಲಿ ಕಡ್ಡಾಯವಾಗಿ ಶೇ.೬೦ರಷ್ಟು ಕನ್ನಡ ಭಾಷೆ ಇರಬೇಕು ಹಾಗೂ ಅದರ ಕೆಳಭಾಗದಲ್ಲಿ ಶೇ.೪೦ರಷ್ಟು ಇಂಗ್ಲಿಷ್ ಅಥವಾ ಇತರ ಭಾಷೆಯನ್ನು ಬಳಸಲು ಅವಕಾಶವಿದೆ ಎಂದರು.ಅನುಮತಿ ಕಡ್ಡಾಯ:ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ 1964 ಸೆಕ್ಷನ್ 133ರ ಪ್ರಕಾರ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಜಾಹೀರಾತು ಬೋರ್ಡ್ ಅಥವಾ ನಾಮಫಲಕ ಅಳವಡಿಸುವ ಮುನ್ನ ಪುರಸಭೆಯಿಂದ ಕಡ್ಡಾಯವಾಗಿ ಲಿಖಿತ ಅನುಮತಿ ಪಡೆದು, ನಿಗದಿತ ಶುಲ್ಕ ಪಾವತಿಸಬೇಕು ಎಂದರು.ಮುನ್ಸೂಚನೆ ಇಲ್ಲದೆ ತೆರವು:ಅನುಮತಿ ಪಡೆಯದೆ ಅಥವಾ ಸರ್ಕಾರದ ಭಾಷಾ ನಿಯಮ ಗಾಳಿಗೆ ತೂರಿ ನಿಯಮ ಬಾಹಿರ ಬೋರ್ಡ್ ಅಳವಡಿಸಿದರೆ, ಸೆಕ್ಷನ್ 136 ಅಡಿಯಲ್ಲಿ ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.15 ದಿನ ಕಾಲಾವಕಾಶ:ಇದುವರೆಗೆ ಅನುಮತಿ ಪಡೆಯದ ಅಥವಾ ಶುಲ್ಕ ಪಾವತಿಸದ ಎಲ್ಲಾ ಬೋರ್ಡ್ ಮಾಲೀಕರಿಗೆ ಇನ್ನೂ 15 ದಿನಗಳ ಅಂತಿಮ ಗಡುವು ನೀಡಲಾಗಿದೆ. ಈ ಅವಧಿಯೊಳಗೆ ಪುರಸಭೆ ಕಚೇರಿ ಸಂಪರ್ಕಿಸಿ ಅಧಿಕೃತ ಲಿಖಿತ ಅನುಮತಿ ಪಡೆದುಕೊಳ್ಳಬೇಕು ಎಂದರು.ಫ್ಲೆಕ್ಸ್ ಬ್ಯಾನರ್‌ಗೂ ಅನ್ವಯ:ಕೇವಲ ವಾಣಿಜ್ಯ ಜಾಹೀರಾತು ಮಾತ್ರವಲ್ಲದೆ, ಪಟ್ಟಣದಲ್ಲಿ ಹುಟ್ಟು ಹಬ್ಬದ ಹಾರೈಕೆ, ರಾಜಕೀಯ ಸಮಾವೇಶ ಅಥವಾ ಇನ್ನಿತರ ಶುಭ ಕಾರ್ಯಗಳಿಗೆ ಅಳವಡಿಸುವ ತಾತ್ಕಾಲಿಕ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳಿಗೂ ಪುರಸಭೆಯಿಂದ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯ ಎಂದರು.