ಧಾರವಾಡ: ಧಾರವಾಡ ಸಂಸ್ಕೃತಿಯ ಗುಣವನ್ನು ತಮ್ಮ ಜೀವಾಳವನ್ನಾಗಿ ಮಾಡಿಕೊಂಡು ಕಾವ್ಯ ರಚಿಸಿದವರು ಚೆನ್ನವೀರ ಕಣವಿ. ಅವರ ಮಾತು, ಕವಿತೆಯ ಸಾಲು ಮೃದುವಚನ ಮೂಲೋಕ ಗೆಲ್ಲುವದು ತಿಳಿಯ ಎಂಬಂತೆ ಅವರ ಜೀವನ ಮತ್ತು ಕಾವ್ಯವಾಗಿತ್ತೆಂದು ಚಿಂತಕ ಡಾ. ಕೃಷ್ಣ ಕಟ್ಟಿ ಹೇಳಿದರು.
ಜಿ.ಬಿ. ಜೋಶಿ ಟ್ರಸ್ಟ್ ಮತ್ತು ವಿದ್ಯಾರಣ್ಯ ಪಿಯು ಕಾಲೇಜು ಸಂಯುಕ್ತವಾಗಿ ಏರ್ಪಡಿಸಿದ್ದ ಚೆನ್ನವೀರ ಕಣವಿ ಜನ್ಮ ದಿನೋತ್ಸವದಲ್ಲಿ ಮಾತನಾಡಿದ ಅವರು, ನಿಸರ್ಗ ಪ್ರೀತಿ, ಸಾಂಸ್ಕ್ರತಿಕ ಕಾಳಜಿ, ಸಮಕಾಲಿನ ಪ್ರಜ್ಞೆ ಅವರ ಕಾವ್ಯಯಾನದಲ್ಲಿ ಎದ್ದು ಕಾಣುತ್ತವೆ. ಧಾರವಾಡದ ನಿಸರ್ಗವನ್ನು ಅತಿಯಾಗಿ ಪ್ರೀತಿಸಿ-ಅನುಭವಿಸಿ ರಚಿಸಿದ ಅವರ ಕವಿತೆಗಳನ್ನು ಅವರ ಎಲ್ಲ ಕವನ ಸಂಗ್ರಹಗಳಲ್ಲಿ ಕಾಣುತ್ತೇವೆ. ಅವರ ಕಾವ್ಯ ಜೀವನ ಅತ್ಯಂತ ಮೃದು ಸ್ವಭಾವದಿಂದ ಕೂಡಿತ್ತು. ಅವರ ಸಂಪರ್ಕಕ್ಕೆ ಬಂದವರಿಗೆ ಅವರ ಮೃದುತ್ವದ ಅನುಭವವಾಗಿರುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಕೆಇ ಬೋರ್ಡ್ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಹಾಗೂ ಅಧ್ಯಕ್ಷತೆ ವಹಿಸಿದ್ದ ಡಾ.ಶರಣಮ್ಮ ಗೊರೇಬಾಳ ಮಾತನಾಡಿದರು. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಪ್ರಚುರಗೊಳಿಸಲು ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಸಾಹಿತಿಗಳ ಬದುಕು-ಬರಹ ಕಾರ್ಯಕ್ರಮಗಳನ್ನು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳುತ್ತಿದೆ. ನಮ್ಮ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಮಹತ್ವವನ್ನು ಮಕ್ಕಳಿಗೆ ಕೊಟ್ಟು ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಾಗುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಡಾ. ಶಶಿಧರ ನರೇಂದ್ರ ಹೇಳಿದರು.
ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾವ್ಯ ವಾಚನ ಮತ್ತು ಗಾಯನ ಮಾಡಿದರು. ಕಣವಿ ಅವರ ಸೊಸೆ ಮಂಜುಳಾ ಕಣವಿ, ರಾಜು ಪಾಟೀಲ ಕುಲಕರ್ಣಿ, ಸಮೀರ ಜೋಶಿ, ಡಾ. ಶ್ರೀಧರ ಕಟ್ಟಿ, ಡಾ. ಅರವಿಂದ ಯಾಳಗಿ, ರಮೇಶ ನಾಡಗೀರ ಇದ್ದರು. ಡಾ. ಭರತ ನಾಯ್ಕ ಸ್ವಾಗತಿಸಿದರು, ಶ್ವೇತಾ ನಾಯಕ ವಂದಿಸಿದರು. ಸವಿತಾ ಕುಸುಗಲ್ ನಿರೂಪಿಸಿದರು.ಓದು ಚಟವಾಗಲಿ
ಮಕ್ಕಳು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರತಿ ನಿತ್ಯ ಕನಿಷ್ಠ ಒಂದು ಗಂಟೆಯಾದರು ಸಾಹಿತ್ಯದ ವಾಚನ ಮಾಡಬೇಕು. ಅದು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸಂವಹನಾ ಕೌಶಲ್ಯ ಅಭಿವೃದ್ಧಿಗೊಳಿಸುತ್ತದೆ. ಮಕ್ಕಳು ಸಂಸ್ಕಾರವಂತರಾಗಲು ಸಾಹಿತ್ಯದ ಜತೆ ಗೆಳೆತನ ಮಾಡಬೇಕು. ಪಾಲಕರು ನಿಮಗಾಗಿ ನೀಡಿದ ಪಾಕೇಟ್ ಮನಿ ದುಡ್ಡಿನಲ್ಲಿ ನಿಮಗೆ ಆಸಕ್ತಿ ಇರುವ ಪುಸ್ತಕ ಖರೀದಿಸಿ. ಮನೆಯಲ್ಲಿ ನಿಮ್ಮದೇ ಆದ ಒಂದು ಗ್ರಂಥಾಲಯ ರೂಪಿಸಿಕೊಳ್ಳಿ. ಓದು ನಿಮಗೆ ಒಂದು ಚಟವಾಗಿ ಬೆಳೆಯಲಿ ಎಂದು ಮುಖ್ಯ ಅತಿಥಿ ಡಾ ಕಟ್ಟಿ ಹೇಳಿದರು.