ಸಾರಾಂಶ
ಗದಗ: ಕಾವ್ಯವೆಂದರೆ ಕವಿ ತಮ್ಮ ದರ್ಶನವನ್ನು ರಸಾರ್ದ್ರವಾಗಿ ಓದುಗರೆದುರು ತೆರೆದಿಡುವುದು. ಒಂದು ಶಬ್ದವನ್ನೋ ಸಾಲನ್ನೋ ಹಿಡಿದುಕೊಂಡು ಅದನ್ನು ವಿಸ್ತರಿಸುತ್ತ ಹೋಗುವುದಲ್ಲ. ಕಾಡಿನಲ್ಲಿ ಹಾದಿ ತಪ್ಪಿ ನಡೆಯುವವನಿಗೂ ಬೆಳಕಿನ ಬೀಜವನ್ನು ಕಂಡು ಅದರತ್ತ ಸಾಗುವವನಿಗೂ ವ್ಯತ್ಯಾಸ ಇರುವ ಹಾಗೆ, ಅರ್ಥಪೂರ್ಣವಾಗಿ ಸಂಕೀರ್ಣವಾಗಿ ಕಟ್ಟಿಕೊಡುವುದೇ ಕಾವ್ಯವಾಗಿದೆಯೆಂದು ಕೊಪ್ಪಳದ ಹೆಸರಾಂತ ಸಾಹಿತಿ, ಕವಿಯಿತ್ರಿ ಅರುಣಾ ನರೇಂದ್ರ ಹೇಳಿದರು.
ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ ಸಂಕ್ರಾಂತಿ ಕವಿಗೋಷ್ಠಿಯ ಉದ್ಘಾಟಿಸಿ ಅವರು ಮಾತನಾಡಿದರು.ಕವಿತೆ ಎನ್ನುವುದು ರಸಘಟ್ಟಿ, ವಜ್ರದ ಹಾಗೆ ಬಹುಕಾಲ ನಿಲ್ಲಬೇಕು ಎಲ್ಲೂ ಸಡಿಲತೆ ಇರಬಾರದು. ಓದುಗನಿಗೆ ಅವರವರ ಭಾವಸಂಸ್ಕಾರ, ತಿಳಿವಳಿಕೆ, ಜ್ಞಾನ, ಓದಿನ ಹಿನ್ನೆಲೆ, ಸಂಸ್ಕೃತಿ ಸಹೃದಯತೆ ಇವುಗಳನ್ನು ಆಧರಿಸಿ ಅದು ಅರ್ಥಸ್ತರಗಳನ್ನು ಮತ್ತು ಅನುಭವವನ್ನು ಬಿಚ್ಚುತ್ತ ಹೋಗಬೇಕು ಅನುಭವವನ್ನು ಕಟ್ಟಿ ಕೊಡಬೇಕೇ ಹೊರತು ಸಪಾಟಾದ ಸಂಗತಿಗಳ ವಿವರಣೆಯನ್ನಲ್ಲ, ಒಳ್ಳೆಯ ವಸ್ತು, ಭಾವ, ಬಾಷೆ, ಶೈಲಿ, ರೂಪ ವಿನ್ಯಾಸ ಮತ್ತು ಮಂಡನಾಕ್ರಮ ಇಷ್ಟೆಲ್ಲವೂ ಕಾವ್ಯದ ಬಾಹ್ಯಕ್ಕೆ ಸಂಬಂಧಿಸಿದ ವಿಚಾರ ಕೊನೆಗೆ ಅದು ಕಟ್ಟಿಕೊಡುವ ಅನುಭವ, ಆನಂದ, ದರ್ಶನ, ಅದರ ಅಂತರ್ಯಾಮಿ ಇವೇ ಕವಿತೆಯ ಅಂತಿಮ ಫಲಿತವಾಗಿದೆ. ನಿರಂತರ ಪ್ರಯೋಗಶೀಲತೆಯೇ ಅದಕ್ಕಿರುವ ಹಾದಿಯಾಗಿದೆಯೆಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಪ್ರಕೃತಿಯಲ್ಲಿ ಮಣ್ಣು ಮತ್ತು ಸೂರ್ಯ ಮನುಷ್ಯನ ಎಲ್ಲ ಕಾರ್ಯಗಳಿಗೂ ಮೂಲವಾಗಿದ್ದಾನೆ. ಭೂಮಿಯ ವಸತಿಗೆ ಮೂಲ ಕಾರಣಕತೃ ಸೂರ್ಯನಾಗಿದ್ದಾನೆ. ತನ್ನ ಪಥವನ್ನು ಬದಲಿಸುವ ಸಂಕ್ರಮಣ ಕಾಲದಲ್ಲಿ ಮನುಷ್ಯ ಕೂಡಾ ತನ್ನ ಆಲೋಚನೆಗಳ ಮೂಲಕ, ಕಾರ್ಯಗಳ ಮೂಲಕ, ಗುಣಗಳ ಮೂಲಕ ಸಕಾರಾತ್ಮವಾಗಿ, ಜನಪರವಾಗಬೇಕು, ಜೀವಪರವಾಗಬೇಕು ಪ್ರತಿಕ್ಷಣ ನಾವು ಸಾವಿಗೆ ಸಮೀಪವಾಗುವ ಸಂದರ್ಭದಲ್ಲಿ ಸನ್ಮಾರ್ಗದ ಪಥವನ್ನು ಹಿಡಿಯುವ ಸಂಕೇತ ಸಂಕ್ರಮಣವಾಗಿದೆ ಎಂದರು.ಈ ವೇಳೆ ಸಂಗೀತ ಕಲಾವಿದೆ ಲತಾ ಮಾಂಡ್ರೆ ಅವರಿಂದ ಸಂಕ್ರಾಂತಿ ಗೀತೆಗಳ ಗಾಯನವಾಯಿತು.
ಶಿಲ್ಪಾ ಕುರಿ, ಡಾ.ರಾಜೇಂದ್ರ ಗಡಾದ, ಪದ್ಮಾ ಕಬಾಡಿ, ಈಶ್ವರ ಕುರಿ, ಬಿ.ಬಿ.ಹರ್ತಿ, ರಮಾ ಚಿಗಟೇರಿ, ಅಮೋಘವರ್ಷ.ಎ, ಮಂಜುಳಾ ವೆಂಕಟೇಶಯ್ಯ, ಚಂದ್ರಕಲಾ ಇಟಗಿಮಠ, ನೀಲಮ್ಮ ಅಂಗಡಿ, ಕೆ.ಜಿ.ಹೊನ್ನಾದೇವಿ, ಅಕ್ಕಮಹಾದೇವಿ ಕಮತ, ಎಸ್.ಎಸ್.ಸೂಳಿಕೇರಿ, ಭಾಗ್ಯಶ್ರೀ ಹುರಕಡ್ಲಿ, ಜ್ಯೋತಿ ವಂಕಲಕುಂಟಿ, ಹಿರಿಯರಾದ ಬಿ.ಎಸ್.ಹಿಂಡಿ ಹಾಗೂ ಆರ್.ಡಿ.ಕಪ್ಪಲಿ ಸಂಕ್ರಾಂತಿ ಕವನ ವಾಚನ ಮಾಡಿದರು.ನಿವೃತ್ತ ಉಪನ್ಯಾಸಕ ಎಂ.ಎಚ್.ಹುಲ್ಲೂರ, ಕಿಶೋರಬಾಬು ನಾಗರಕಟ್ಟಿ ಸಹಕಾರ್ಯದರ್ಶಿ ಶ್ರೀಕಾಂತ ಬಡ್ಡೂರ, ಪ್ರೊ ಕೆ.ಎಚ್.ಬೇಲೂರ, ಪ್ರೊ ಚಂದ್ರಶೇಖರ ವಸ್ತ್ರದ, ಮಲ್ಲಪ್ಪ ಡೋಣಿ, ಪ್ರೊ.ಅನ್ನದಾನಿ ಹಿರೇಮಠ, ಎಸ್.ಎಸ್.ಸೋಮಣ್ಣವರ, ಬಸವರಾಜ ಗಣಪ್ಪನವರ, ಆರ್.ಕೆ.ಮೋನೆ, ವನಮಾಲಾ ಮಾನಶೆಟ್ಟಿ, ಉಮಾದೇವಿ ಪಾಟೀಲ, ರತ್ನಾ ಪುರಂತರ ಸೇರಿ ಇತರರು ಇದ್ದರು. ಪ್ರೊ.ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ನಿರೂಪಿಸಿದರು. ಶ್ರೀಕಾಂತ ಬಡ್ಡೂರ ವಂದಿಸಿದರು.