ಲಕ್ಷ್ಮಣತೀರ್ಥ ನದಿಯ ನಡುವೆ ಪ್ರಾಚೀನ ಅಂಜನೇಯ ಮೂರ್ತಿಶಿಲ್ಪ ಪತ್ತೆ

| Published : Jan 15 2024, 01:46 AM IST

ಲಕ್ಷ್ಮಣತೀರ್ಥ ನದಿಯ ನಡುವೆ ಪ್ರಾಚೀನ ಅಂಜನೇಯ ಮೂರ್ತಿಶಿಲ್ಪ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು, ಪ್ರಾಚೀನ ಆಂಜನೇಯಮೂರ್ತಿಯ ಶಿಲ್ಪ ಪತ್ತೆ

ಕನ್ನಡಪ್ರಭ ವಾರ್ತೆ ಮೈಸೂರು

ಹುಣಸೂರು ತಾಲೂಕು ಮರದೂರು ಗ್ರಾಮದಲ್ಲಿ ಲಕ್ಷ್ಮಣತೀರ್ಥ ನದಿ ಮಧ್ಯಭಾಗದಲ್ಲಿ ಸುಮಾರು 15 ರಿಂದ 16ನೇ ಶತಮಾನದ ಪ್ರಾಚೀನ ಆಂಜನೇಯಮೂರ್ತಿಯ ಶಿಲ್ಪವನ್ನು ಗ್ರಾಮಸ್ಥರ ಸಹಕಾರದೊಡನೆ ಸಂಶೋಧಕ ಡಾ.ಎಸ್.ಜಿ. ರಾಮದಾಸರೆಡ್ಡಿ ಶೋಧಿಸಿದ್ದಾರೆ.

ದನಕಾಯುವ ಹುಡುಗರು ದನಗಳಿಗೆ ನೀರು ಕುಡಿಸಲು ನದಿಯ ಮಧ್ಯಭಾಗಕ್ಕೆ ಹೋದಾಗ ಅಂಜನೇಯ ಮೂರ್ತಿ ಶಿಲ್ಪವೊಂದು ಇರುವುದನ್ನು ನೋಡಿ ಗ್ರಾಮಸ್ಥರ ಗಮನಕ್ಕೆ ತಂದಿದ್ದಾರೆ. ನಂತರ ಗ್ರಾಮದ ಮುಖಂಡ ಅಶೋಕ ಅವರು ಇತಿಹಾಸ ಸಂಶೋಧಕ ಡಾ.ಎಸ್.ಜಿ. ರಾಮದಾಸರೆಡ್ಡಿ ಅವರ ಗಮನಕ್ಕೆ ತಂದರು.

ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ್, ಮುಖಂಡರಾದ ರಾಮಶೆಟ್ಟಿ, ಚೌಡನಾಯಕ ಹಾಗೂ ಗ್ರಾಮಸ್ಥರ ಸಹಕಾರದೊಡನೆ ನದಿಯಲ್ಲಿ ಸಂಚರಿಸಿ ಶಿಲ್ಪವನ್ನು ನೋಡಿ ಇದು ಪ್ರಾಚೀನ ಅಂಜನೇಯ ಮೂರ್ತಿ ಶಿಲ್ಪ ಎಂದು ತಿಳಿಸಿದರು.

ಇದು ಸುಮಾರು 15 ರಿಂದ 16ನೇ ಶತಮಾನದ ಪ್ರಾಚೀನ ಅಂಜನೇಯ ಮೂರ್ತಿ ಎಂದು ಅಭಿಪ್ರಾಯಪಟ್ಟರು. ಎಲ್ಲರ ಸಹಕಾರದೊಂದಿಗೆ ಅಂಜನೇಯ ಮೂರ್ತಿ ಶಿಲ್ಪವನ್ನು ಗ್ರಾಮದ ಲಕ್ಷ್ಮಣತೀರ್ಥ ನದಿಯ ದಡದ ಮೇಲಿನ ಮಂಟಪದಲ್ಲಿ ಇಟ್ಟು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಟಪದಲ್ಲಿ ಗರ್ಭಗುಡಿ, ವರಾಂಡ ಇದೆ. ಈ ಮಂಟಪವನ್ನು ಹಿಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕರು ಸಂರಕ್ಷಿಸಿದ್ದರು. ಗರ್ಭಗುಡಿಯಲ್ಲಿ ಪಾಣಿ ಪೀಠವಿದ್ದು, ಈ ಪೀಠದ ಮೇಲೆ ಯಾವ ಮೂರ್ತಿ ಶಿಲ್ಪವಿತ್ತು ಎಂಬ ಸಂದೇಹವಿತ್ತು. ಈ ಪ್ರಾಚೀನ ಅಂಜನೇಯ ಮೂರ್ತಿಶಿಲ್ಪ ದೊರಕಿದ ಮೇಲೆ ಈ ಮಂಟಪದ ಒಳಗಡೆ ಇರುವ ಪಾಣಿಪೀಠ ಅಂಜನೇಯ ಮೂರ್ತಿಶಿಲ್ಪದ್ದೆಂದು ಹಾಗೂ ಈ ಮಂಟಪ ಅಂಜನೇಯನ ದೇವಾಲಯವಾಗಿತ್ತೇಂದು ತಿಳಿಯಲು ಹೆಚ್ಚಿನ ಅಧ್ಯಯನದ ಅಗತ್ಯವಿದೆ.

ಅಂಜನೇಯ ಮೂರ್ತಿಶಿಲ್ಪದ ಎತ್ತರ ಪಾಣಿಪೀಠದಿಂದ ಮೂರುವರೇ ಅಡಿ, ಅಗಲ ಎರಡು ಕಾಲು ಅಡಿ, ಶಿಲ್ಪದ ದಪ್ಪ ಕಾಲು ಅಡಿ, ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿದೆ. ಅಂಜನೇಯ ಮೂರ್ತಿ ಶಿಲ್ಪದ ಬಲಭಾಗದ ಕೈ ಮೇಲೆ ಎತ್ತಿದ್ದು ಆಭಯ ಹಸ್ತ, ಎಡ ಭಾಗದ ಕೈ ಸೊಂಟದ ಮೇಲೆ ಇದೆ. ಕೊರಳಿಗೆ ಕಂಠಾಹಾರ, ತಲೆಗೆ ಕಿರೀಟ, ಮುಂಗೈಗಳಿಗೆ ಕಡಗ, ವೀರಗಚ್ಚೆ ಧರಿಸಿದ್ದಾನೆ.

ಅಂಜನೇಯನ ಬಾಲ ಬಲ ಭಾಗದ ಮೂಲಕ ತಲೆಯ ಮೇಲೆ ಭಾಗಿದೆ. ಸ್ಪಷ್ಟತೆ ಇಲ್ಲ. ಶಿಲ್ಪದ ಎಡಭಾಗದ ಮೇಲೆ ಸ್ಪಲ್ಪ ಪ್ರಕಟವಾಗಿದೆ. ಈ ಶಿಲ್ಪ ಶೈಲಿಯನ್ನು ನೋಡಿದರೆ ವಿಜಯನಗರ ಸಾಮ್ರಾಜ್ಯದ ಕಾಲದ ವ್ಯಾಸತೀರ್ಥರ ಪ್ರತಿಷ್ಠಾನ ಆಗಿದೆ. ಅಂದರೆ 15-16 ನೇ ಶತಮಾನದ ಶಿಲ್ಪವಾಗಿದೆ.

ಲಕ್ಷ್ಮಣ ತೀರ್ಥ ನದಿಯ ಮಧ್ಯ ಭಾಗಕ್ಕೆ ಮೂರ್ತಿಶಿಲ್ಪ ಹೇಗೆ ಬಂದಿತು ಎಂದು ಗ್ರಾಮದ ಯಜಮಾನರಾದ ಚೌಡನಾಯಕ, ಪುಟ್ಟನಾಯಕ, ರಾಮಶೆಟ್ಟಿ ಅವರನ್ನು ಕೇಳಿದಾಗ ನಮಗೆ 70 ವರ್ಷ ವಯಸ್ಸಾಗಿದೆ. ಇಲ್ಲಿಯವರೆಗೂ ನದಿ ಬತ್ತಿಹೋಗಿರವುದನ್ನು ನಾವು ನೋಡಿರಲಿಲ್ಲ. ಈಗ ನದಿ ಒಣಗಿ ಹೋಗಿ ಈ ಶಿಲ್ಪ ಪತ್ತೆಯಾಗಿ ನಮಗೆ ಅಚ್ಚರಿ ತಂದಿದೆ. ಆದರೂ ಗ್ರಾಮದಲ್ಲಿ ಮೂರ್ತಿಶಿಲ್ಪಗಳಿಲ್ಲದ ದೇವಾಲಯಗಳಿವೆ. ಆ ದೇವಾಲಯಗಳಲ್ಲಿ ಯಾವುದೋ ಒಂದು ದೇವಾಲಯದ ಶಿಲ್ಪ ಇದಾಗಿರಬಹುದು ಎಂದು ಅಭಿಪ್ರಾಯಪಟ್ಟರು.

ಗ್ರಾಮಸ್ಥರ ಸಹಕಾರದೊಂದಿಗೆ ಈ ಅಂಜನೇಯ ಮೂರ್ತಿಶಿಲ್ಪವನ್ನು ಲಕ್ಷ್ಮಣತೀರ್ಥ ನದಿ ದಡದ ಮೇಲಿರುವ ಮಂಟಪದಲ್ಲಿ ಸಂರಕ್ಷಿಸಲಾಗಿದೆ. ಮುಂದೆ ಈ ಶಿಲ್ಪವನ್ನು ಸಂರಕ್ಷಿಸುವ ಕಾರ್ಯ ಸಂಬಂಧಪಟ್ಟ ಇಲಾಖೆ ಹಾಗೂ ಪೂಜಾ ಕಾರ್ಯಗಳನ್ನು ಮಾಡುವ ಕಾರ್ಯ ಗ್ರಾಮಸ್ಥರು ಮಾಡ ಬೇಕಿದೆ.