ಚಿತ್ತಾಕುಲ ಗ್ರಾಪಂ ಸದಸ್ಯರ ಮೇಲೆ ಪೊಲೀಸರ ದೌರ್ಜನ್ಯ: ಕ್ರಮಕ್ಕೆ ಆಗ್ರಹ

| Published : Sep 20 2024, 01:45 AM IST

ಸಾರಾಂಶ

ದಿಲೀಪ ಅವರನ್ನು ಅಮಾನವೀಯವಾಗಿ ಹಿಂಸಿಸಿದ ಪಿಎಸ್ಐ ಮಹಾಂತೇಶ ಹಾಗೂ ಸಿಬ್ಬಂದಿ ಹಾಗೂ ಸುಳ್ಳು ವೈದ್ಯಕೀಯ ವರದಿ ನೀಡಿದ ವೈದ್ಯರನ್ನು ಕೂಡಲೇ ಅಮಾನತು ಮಾಡಿ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಕಾರವಾರ: ಗ್ರಾಮ ಪಂಚಾಯಿತಿ ಸದಸ್ಯರೂ, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರೂ ಆದ ದಿಲೀಪ ಗಜೀನಕರ ಅವರನ್ನು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಅಮಾನವೀಯವಾಗಿ ಹಿಂಸಿಸಿ, ದೌರ್ಜನ್ಯ ನಡೆಸಿರುವ ಪಿಎಸ್‌ಐ ಮಹಾಂತೇಶ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ, ಪಕ್ಷದ ಮಂಡಲದ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು, ಚಿತ್ತಾಕುಲ ಗ್ರಾಪಂ ಸದಸ್ಯರು, ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿದ್ದಾರೆ.ಮಂಗಳವಾರ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ವಿನಾಕಾರಣ ಪಿಎಸ್ಐ ಮಹಾಂತೇಶ್ ಕಿರಿಕಿರಿ ಮಾಡಿದ್ದಾರೆ. ಬಿಜೆಪಿಯ ದಿಲೀಪ ಗಜಿನಕರ ಮೇಲೆ ರೇಗಾಡಿದ್ದಾರೆ. ಬುಧವಾರ ನಸುಕಿನ ಜಾವ ಅವರನ್ನು ಮನೆಯಿಂದ ಬಂಧಿಸಿ ಪೊಲೀಸ್ ಠಾಣೆಗೆ ಕರೆತಂದು ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸಿದ್ದಾರೆ.

ಈ ದೌರ್ಜನ್ಯದಿಂದ ದಿಲೀಪ ಗಜೀನಕರ ಅವರಿಗೆ ನಡೆಯಲು ಸಾಧ್ಯವಾಗದೆ ವೀಲ್ ಚೇರ್‌ನಲ್ಲಿಯೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ದಿಲೀಪ ಅವರನ್ನು ಅಮಾನವೀಯವಾಗಿ ಹಿಂಸಿಸಿದ ಪಿಎಸ್ಐ ಮಹಾಂತೇಶ ಹಾಗೂ ಸಿಬ್ಬಂದಿ ಹಾಗೂ ಸುಳ್ಳು ವೈದ್ಯಕೀಯ ವರದಿ ನೀಡಿದ ವೈದ್ಯರನ್ನು ಕೂಡಲೇ ಅಮಾನತು ಮಾಡಿ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಮುಂದೆ ಇಂತಹ ಕ್ರಮಕ್ಕೆ ಅವಕಾಶ ಮಾಡಿಕೊಡಬಾರದು ಎಂದು ವಿನಂತಿಸಿದ್ದಾರೆ. ಕ್ರಮ ಕೈಗೊಳ್ಳದೆ ಇದ್ದಲ್ಲಿ ಪಕ್ಷದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದೂ ರೂಪಾಲಿ ಎಸ್. ನಾಯ್ಕ ತಿಳಿಸಿದ್ದಾರೆ. ರೂಪಾಲಿ ನಾಯ್ಕ ವಾಗ್ದಾಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಮಾಯಕರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಮಹಿಳೆಯರ ಹತ್ಯೆಯಂತಹ ಘಟನೆಗಳು ಹೆಚ್ಚುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ನಡೆಸಲಾಗುತ್ತಿದೆ. ಆ ಮೂಲಕ ಸಾರ್ವಜನಿಕರ ಬದುಕು ನರಕವಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ಚಿತ್ರಹಿಂಸೆ ನೀಡಿ ಕಾರ್ಯಕರ್ತರ ಮನೋಸ್ಥೈರ್ಯವನ್ನು ಹಾಳುಗೆಡವಲು ಯತ್ನಿಸುತ್ತಿರುವ ಪಿಎಸ್‌ಐ ಮಹಾಂತೇಶ ವಿರುದ್ಧ ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇನೆ. ಈ ಪ್ರಕರಣದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ, ಅವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಬಂಧಿತರ ಭೇಟಿ: ಪೊಲೀಸರಿಂದ ಹಲ್ಲೆಗೊಳಗಾಗಿ ಬಂಧಿತರಾಗಿರುವ ದಿಲೀಪ ಗಜೀನಕರ ಅವರನ್ನು ಕಾರವಾರ ಜೈಲಿನಲ್ಲಿ ಭೇಟಿ ಮಾಡಿ, ಯೋಗಕ್ಷೇಮವನ್ನು ರೂಪಾಲಿ ಎಸ್. ನಾಯ್ಕ, ಮಂಡಲದ ಅಧ್ಯಕ್ಷರು, ನಗರಸಭೆ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು ವಿಚಾರಿಸಿದರು. ಕಾನೂನು ಹೋರಾಟದಲ್ಲಿ ಎಲ್ಲ ನೆರವು ನೀಡುವುದಾಗಿ, ನಿಮ್ಮೊಂದಿಗೆ ತಾವು ಹಾಗೂ ಪಕ್ಷ ಇರುವುದಾಗಿ ಭರವಸೆ ನೀಡಿದರು.