ಸಾರಾಂಶ
ಯಲ್ಲಾಪುರ: ಯಲ್ಲಾಪುರಕ್ಕೆ ಬೈಪಾಸ್ ರಸ್ತೆ ಹಾಗೂ ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗ ತೀರಾ ಅಗತ್ಯವಾಗಿದೆ. ಅಂದಾಗ ಮಾತ್ರ ಈ ಭಾಗದ ಸಮಗ್ರ ಅಭಿವೃದ್ಧಿ ಸಾಧ್ಯ. ಆ ಹಿನ್ನೆಲೆಯಲ್ಲಿ ಕಾನೂನಾತ್ಮಕ ತೊಂದರೆಗಳೆಲ್ಲ ನಿವಾರಣೆಯಾಗಿದೆ. ರೈಲ್ವೆಯ ದ್ವಿಪಥ ಮಾರ್ಗದ ಕಾರ್ಯ ಪ್ರಗತಿಯಲ್ಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಸೆ. 19ರಂದು ಪಟ್ಟಣದ ಅಡಿಕೆ ಭವನದಲ್ಲಿ ಅಡಿಕೆ ವ್ಯವಹಾರಸ್ಥರ ಸಂಘ ಮತ್ತು ವಿವಿಧ ಸಂಘ- ಸಂಸ್ಥೆಗಳು ನೀಡಿದ ಮನವಿ ಸ್ವೀಕರಿಸಿ, ತಮಗಿತ್ತ ಸನ್ಮಾನ ಸ್ವೀಕರಿಸಿ, ಮಾತನಾಡಿದರು.ಎಪಿಎಂಸಿ, ಉದ್ಯಮ ಪ್ರದೇಶದ ಅಭಿವೃದ್ಧಿ ಆಗಬೇಕಿದೆ. ಅಗತ್ಯವಾದ ಸ್ಥಳವನ್ನು ಮಂಜೂರಿ ಮಾಡಬೇಕಾಗಿದೆ. ಆ ಹಿನ್ನೆಲೆ ಕೇಂದ್ರದಿಂದ ಮಾಡಬಹುದಾದ ಎಲ್ಲ ಪ್ರಯತ್ನ ಕೈಗೊಳ್ಳಲಾಗುವುದು.
ಅಂಕೋಲಾ- ಹುಬ್ಬಳ್ಳಿ ರೈಲು ಯೋಜನೆಗೆ ಭಾವನಾತ್ಮಕ ಸಂಬಂಧವಿದೆ. ಪ್ರಧಾನಿಯಾಗಿದ್ದ ವಾಜಪೇಯಿಯವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಕೇಂದ್ರದ ಮೇಲೆ ಒತ್ತಡ ತಂದು ಸರ್ವ ಪ್ರಯತ್ನ ಮಾಡಲಾಗುವುದು. ಅಂತೆಯೇ ಅಗತ್ಯವಾದ ಬೈಪಾಸ್ ರಸ್ತೆ ನಿರ್ಮಾಣಕ್ಕೂ ಪ್ರಯತ್ನ ಮಾಡುತ್ತೇನೆ ಎಂದ ಅವರು, ರಾಜಕೀಯದಲ್ಲಿ ಉತ್ತಮ ಸ್ಥಾನಮಾನ ದೊರೆತಿದ್ದರೆ ಅದಕ್ಕೆ ಯಲ್ಲಾಪುರದ ಜನತೆ ಕಾರಣ. ದೇಶಪೂರ್ತಿ ನೆಟ್‌ವರ್ಕ್ ಇರಬೇಕು ಎನ್ನುವುದು ಪ್ರಧಾನಿ ಮೋದಿ ಕನಸು. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ೨೫೦ಕ್ಕೂ ಅಧಿಕ ಟವರ್ ಮಂಜೂರಿಯಾಗಿದೆ. ಅದಕ್ಕೆ ಬೇಕಾದ ವೇಗ ಪಡೆದುಕೊಳ್ಳಲು ಜಿಲ್ಲೆಗೆ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ ಎಂದರು.
ಅಡಕೆ ಬೆಳೆಗಾರರು ಆತಂಕದಲ್ಲಿದ್ದಾರೆ. ವಿದೇಶದಿಂದ ಅಡಕೆ ಕಾನೂನುಬದ್ಧವಾಗಿ ಬರಬೇಕಾದದ್ದು ಸಹಜ. ಆದರೆ, ಕದ್ದು ಅಡಕೆ ಬರುತ್ತಿರುವುದನ್ನು ತಡೆಗಟ್ಟದಿದ್ದರೆ, ತೀವ್ರ ತೊಂದರೆಯಾಗುತ್ತದೆ. ಕಳ್ಳ ಸಾಗಾಣಿಕೆ ಅಡಕೆ ಸೇರಿದಂತೆ ಇನ್ನಿತರ ವಸ್ತುಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ. ಹೊರಗಿನಿಂದ ಅಡಕೆ ತಂದು ನಮ್ಮ ಅಡಕೆ ಮಾನ ಹರಾಜು ಹಾಕುವವರ ವಿರುದ್ಧ ಧ್ವನಿ ಎತ್ತುವ ಕಾರ್ಯ ಆಗಬೇಕಿದೆ ಎಂದರು.
ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಮಲೆನಾಡು ಕೃಷಿ ಸಹಕಾರ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಹೆಗಡೆ, ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಸಹ್ಯಾದ್ರಿ ಸೇವಾ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಉಪಸ್ಥಿತರಿದ್ದರು. ಅಡಿಕೆ ವರ್ತಕರ ಸಂಘದ ಕಾರ್ಯದರ್ಶಿ ಮಾರುತಿ ಘಟ್ಟಿ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.