ಬಿಸಿಯೂಟ ಕಾರ್ಮಿಕರ ಗೌರವಧನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

| Published : Sep 20 2024, 01:44 AM IST

ಬಿಸಿಯೂಟ ಕಾರ್ಮಿಕರ ಗೌರವಧನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಏಪ್ರಿಲ್-ಮೇ ತಿಂಗಳ ಗೌರವಧನ ಈವರೆಗೆ ನೀಡಿಲ್ಲ.

ಬಳ್ಳಾರಿ: ಬಾಕಿ ಇರುವ ಬಿಸಿಯೂಟ ಕಾರ್ಮಿಕರ ಏಪ್ರಿಲ್ ಮತ್ತು ಮೇ ತಿಂಗಳ ಗೌರವಧನ ಕೂಡಲೇ ಪಾವತಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ನಗರದ ಜಿಪಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್.ಎನ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿಷ್ಠಿತ ಮಧ್ಯಾಹ್ನ ಬಿಸಿ ಊಟ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುವ ಬಿಸಿಯೂಟ ಕಾರ್ಮಿಕರಿಗೆ ₹3600 ಗೌರವಧನ ನೀಡಲಾಗುತ್ತಿದೆ. ಇದನ್ನು ಸಹ ಪ್ರತಿ ತಿಂಗಳು ನೀಡುವುದಿಲ್ಲ. ಕಳೆದ ಏಪ್ರಿಲ್-ಮೇ ತಿಂಗಳ ಗೌರವಧನ ಈವರೆಗೆ ನೀಡಿಲ್ಲ. ಮೊಟ್ಟೆಗಳನ್ನು ಸುಲಿದ ಕೂಲಿಯನ್ನು ಸಹ ಹಲವು ವರ್ಷಗಳಿಂದ ನೀಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ 1 ಸಾವಿರ ರು. ಗೌರವಧನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಜಾರಿಯಾಗಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಸಹ ದುಡಿವ ಜನರ ಹಿತ ಕಾಯುವ ಯಾವುದೇ ಕಾಳಜಿ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾ ಸಲಹೆಗಾರರಾದ ಎಸ್‌.ಜಿ.ನಾಗರತ್ನ ಅವರು ಮಾತನಾಡಿದರು. ಎಐಯುಟಿಯುಸಿ ಜಿಲ್ಲಾ ಜಂಟಿ ಕಾರ್ಯದರ್ಶಿ ಜಿ.ಸುರೇಶ್, ಉಪಕಾರ್ಯದರ್ಶಿ ಗಿರಿಜಾ ಶಂಕರ್ , ಮಂಜುಳಾ, ಅನುಸೂಯಮ್ಮ, ನಾಗಮ್ಮ ಅಂಬಮ್ಮ, ಶಾಂತಮ್ಮ ಅಂಬುಜಾ, ನೀಲಮ್ಮ ಸೇರಿದಂತೆ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಸಮಿತಿಯ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾಕಾರರ ಮನವಿ ಆಲಿಸಿದ ಬಿಸಿಯೂಟ ಯೋಜನೆ ಕಾರ್ಯನಿರ್ವಾಹಕ ಅಧಿಕಾರಿ ಕಸ್ತೂರಿ ಅವರು, ಇನ್ನು ಹತ್ತು ದಿನಗಳಲ್ಲಿ ಗೌರವಧನ ಪಾವತಿಸಲಾಗುವುದು. ಬಿಸಿಯೂಟ ಕಾರ್ಮಿಕರ ಸಮಸ್ಯೆಗಳನ್ನು ಚರ್ಚಿಸಲು ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ಕರೆಯುವುದಾಗಿ ಭರವಸೆ ನೀಡಿದರು.

ಬಾಕಿ ಇರುವ ಬಿಸಿಯೂಟ ನೌಕರರ ಗೌರವಧನ ಪಾವತಿಸಬೇಕು ಎಂದು ಆಗ್ರಹಿಸಿ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಬಳ್ಳಾರಿಯ ಜಿಪಂ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.