ಸಾರಾಂಶ
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣ ಮತ್ತು ತಾಲೂಕಿನ ವಿವಿಧೆಡೆ ದಾಳಿ ನಡೆಸಿದ ಪೊಲೀಸರು ಪಟಾಕಿ ಅಂಗಡಿಗಳು ಹಾಗೂ ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಸುಮಾರು ₹1.41 ಕೋಟಿ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬಳ್ಳಾರಿ
ಜಿಲ್ಲೆಯ ಸಿರುಗುಪ್ಪ ಪಟ್ಟಣ ಮತ್ತು ತಾಲೂಕಿನ ವಿವಿಧೆಡೆ ದಾಳಿ ನಡೆಸಿದ ಪೊಲೀಸರು ಪಟಾಕಿ ಅಂಗಡಿಗಳು ಹಾಗೂ ಗೋದಾಮುಗಳಲ್ಲಿ ಸಂಗ್ರಹಿಸಿದ್ದ ಸುಮಾರು ₹1.41 ಕೋಟಿ ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.ಸಿರುಗುಪ್ಪದ ಹಳೆ ಎಸ್‌ಬಿಐ ಎದುರುಗಿನ ಅಂಗಡಿಯಲ್ಲಿ ₹2.50 ಲಕ್ಷ, ಎಪಿಎಂಸಿ ಆವರಣದ ಗೋದಾಮಿನಲ್ಲಿ ₹6 ಲಕ್ಷ, ಪ್ಯಾಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ₹1.85 ಲಕ್ಷ, ಬಸ್ ನಿಲ್ದಾಣದ ಬಳಿಯ ಪಾರ್ವತಿ ಏಜೆನ್ಸಿ ಗೋದಾಮಿನಲ್ಲಿ ₹33.61 ಲಕ್ಷ, ತೆಕ್ಕಲಕೋಟೆಯ ಡಿ. ಸಣ್ಣ ಶೇಕಣ್ಣನ ಮಳಿಗೆಯಲ್ಲಿ ₹1.62 ಲಕ್ಷ, ಸಿರಿಗೇರಿಯ ನಾಗನಾಥ ದೇವಸ್ಥಾನದ ಬಳಿ ₹9,245, ಸಿರಿಗೇರಿಯ ಮರೇಗೌಡರ ಮಳಿಗೆಯಲ್ಲಿ ಸಂಗ್ರಹಿಸಿಟ್ಟಿದ್ದ ₹35,540 ಮೌಲ್ಯದ ಪಟಾಕಿಗಳು ಸೇರಿದಂತೆ ವಿವಿಧೆಡೆಯಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿಗಳನ್ನು ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಆದೇಶದ ಮೇರೆಗೆ ಡಿವೈಎಸ್‌ಪಿ ಎಸ್.ಟಿ. ಒಡೆಯರ್ ಮಾರ್ಗದರ್ಶನದಲ್ಲಿ ಪ್ರೊಬೇಷನರಿ ಡಿವೈಎಸ್‌ಪಿ ಉಮಾರಾಣಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಕಡೆ ನಡೆದ ದಾಳಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.