ಸಾರಾಂಶ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳತುಂಗಭದ್ರಾ ಜಲಾಶಯಕ್ಕೆ ಹಿಂಗಾರು ಹಂಗಾಮಿನಲ್ಲಿ ಒಳಹರಿವು ಬಾರದಂತೆ ಆಗಿರುವುದರಿಂದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ ರೈತರ ಮುಂಗಾರು ಬೆಳೆ ಕಾಪಾಡಿಕೊಳ್ಳಲು ಕಾರ್ಖಾನೆಗಳಿಗೆ ನೀರು ಪೂರೈಕೆಯನ್ನೇ ಸ್ಥಗಿತ ಮಾಡಲಾಗಿದೆ. ಆಂಧ್ರ, ತೆಲಂಗಾಣ ಕೋಟಾದಲ್ಲಿಯೇ ನೀರು ಉಳಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.ಈಗಾಗಲೇ ಜಿಲ್ಲೆಯ ಕೈಗಾರಿಕೆಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸುವ ಮೂಲಕ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ದಿಟ್ಟ ನಿರ್ಧಾರ ತೆಗೆದುಕೊಂಡಿದೆ.
ಈ ಮೂಲಕ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರ ಬೆಳೆ ಕಾಪಾಡಿಕೊಳ್ಳಲು ಮಹತ್ವದ ನಿರ್ಧಾರ ತೆಗೆದುಕೊಂಡಂತೆ ಆಗಿದೆ.ಆಂಧ್ರ, ತೆಲಂಗಾಣಕ್ಕೆ ಮನವಿ: ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಬೆಳೆ ಕಾಪಾಡಿಕೊಳ್ಳುವುದೇ ಸಾಹಸವಾಗಿದೆ. ಅದರಲ್ಲೂ ಆಂಧ್ರ, ತೆಲಂಗಾಣ ಬಲದಂಡೆ ಕಾಲುವೆಯಲ್ಲಿ ಬಲದಂಡೆ ಮೇಲ್ಮಟ್ಟದ ಕಾಲುವೆಯ ಬಳ್ಳಾರಿ ಜಿಲ್ಲೆಯ ರೈತರ ಬೆಳೆ ಕಾಪಾಡಿಕೊಳ್ಳಲು ಆಂಧ್ರ ಮತ್ತು ತೆಲಂಗಾಣ ರಾಜ್ಯದ ಸಹಕಾರ ಕೋರಲು ಚಿಂತನೆ ನಡೆಸಿದೆ.
ಆಂಧ್ರ, ತೆಲಂಗಾಣದವರು ಈಗ ನವೆಂಬರ್ 15ವರೆಗೂ ಮಾತ್ರ ನೀರು ಪಡೆಯುತ್ತಿದ್ದಾರೆ. ಅಷ್ಟರೊಳಗಾಗಿ ಅವರ ಕೋಟಾ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಂತರ ಈ ಕಾಲುವೆಯಲ್ಲಿ ನೀರು ಬಳಕೆ ಅಸಾಧ್ಯವಾಗುತ್ತದೆ. ಹೀಗಾಗಿ, ಇಲ್ಲಿಯ ರೈತರಿಗೆ ಸಮಸ್ಯೆಯಾಗುತ್ತದೆ. ಈ ಸಮಸ್ಯೆ ನೀಗಿಸಲು ಆಂಧ್ರ, ತೆಲಂಗಾಣ ರಾಜ್ಯಗಳ ಮೊರೆ ಹೋಗಿ, ನೀರು ಬಳಕೆಯನ್ನು ನ.30ರವರೆಗೂ ಕಾಯ್ದುಕೊಳ್ಳುವಂತೆ ವಿನಂತಿ ಮಾಡಲು ಚಿಂತನೆ ನಡೆಸಲಾಗಿದೆ.ಶೀಘ್ರ ಸಭೆ: ಈ ಕುರಿತು ಆಂಧ್ರ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದು ಮತ್ತು ನಾನಾ ರೀತಿಯ ಕ್ರಮಗಳ ಮೂಲಕ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಬೆಳೆಗಳನ್ನು ಕಾಪಾಡಿಕೊಳ್ಳಲು ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅಧ್ಯಕ್ಷತೆಯಲ್ಲಿ ಒಂದೆರಡು ದಿನಗಳೊಳಗಾಗಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಈಗಾಗಲೇ ಉಪಮುಖ್ಯಮಂತ್ರಿಯನ್ನು ಭೇಟಿಯಾಗಿ ಇದರ ತುರ್ತು ಅಗತ್ಯ ಮನವರಿಕೆ ಮಾಡಿಕೊಟ್ಟಿರುವುದರಿಂದ ಡಿಸಿಎಂ ಸಮ್ಮತಿ ನೀಡಿದ್ದು, ಇನ್ನೇನು ದಿನಾಂಕ, ಸಮಯ ನಿಗದಿಯಾಗಬೇಕಾಗಿದೆ.ನೀರು ಉಳಿಸಿಕೊಳ್ಳಲು ಮನವಿ: ರಾಜ್ಯದ ರೈತರ ಬೆಳೆ ಕಾಪಾಡಿಕೊಳ್ಳಲು ಈ ಬಾರಿ ಭದ್ರಾ ಜಲಾಶಯದಲ್ಲೂ ನೀರು ಹೆಚ್ಚೇನಿಲ್ಲ. ಪ್ರತಿ ಬಾರಿಯೂ ಇಲ್ಲಿಂದ ಒಂದೆರಡು ಟಿಎಂಸಿ ನೀರು ಬಿಡಿಸಿಕೊಳ್ಳಲಾಗುತ್ತಿತ್ತು. ಆದರೆ, ಈಗ ಅದು ಸಾಧ್ಯವಿಲ್ಲದಿರುವುದರಿಂದ ಆಂಧ್ರ, ತೆಲಂಗಾಣ ಕೋಟಾದಲ್ಲಿಯೇ ಕೆಲವೊಂದಿಷ್ಟು ನೀರು ಉಳಿಸಿಕೊಳ್ಳಲು ಮನವಿ ಮಾಡಲಾಗುತ್ತದೆ. ಡಿಸಿಎಂ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.ರೈತರಲ್ಲಿ ಮನವಿ: ಜಲಾಶಯದಲ್ಲಿ ನೀರು ಅಭಾವ ಇರುವುದರಿಂದ ನೀರು ಬಳಕೆಯಲ್ಲಿ ಒಂದಿಷ್ಟು ಸುಧಾರಣಾ ಕ್ರಮಗಳನ್ನು ಅನುಸರಿಸಬೇಕು. ನೀರು ವ್ಯಯ ಮಾಡದೇ ಇತರ ರೈತರಿಗೂ ನೀರು ದೊರೆಯುವಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆಯೂ ರೈತರಲ್ಲೂ ಮನವಿ ಮಾಡುವ ಸಂಬಂಧ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ.ಅಂಚು ಪ್ರದೇಶದ ರೈತರಿಗೆ ನೀರು ತಲುಪುವುದೇ ಇಲ್ಲ ಎನ್ನುವ ಆರೋಪವಿದೆ. ಈ ದಿಸೆಯಲ್ಲಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎದೆಭಾಗದ ರೈತರು ನೀರು ಬಳಕೆಯಲ್ಲಿ ಮಿತ ವ್ಯಯ ಮಾಡುವುದು ಅಗತ್ಯ ಎನ್ನಲಾಗಿದೆ.
ರೈತರ ಹಿತದೃಷ್ಟಿಯಿಂದ ಕೈಗಾರಿಕೆಗಳಿಗೆ ಈಗಾಗಲೇ ನೀರು ಪೂರೈಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಬಲದಂಡೆ ಮೇಲ್ಮಟ್ಟದ ಕಾಲುವೆಯ ರಾಜ್ಯದ ರೈತರಿಗೆ ನೀರಿನ ಅಭಾವ ಎದುರಾಗುತ್ತಿರುವುದರಿಂದ ಆಂಧ್ರ, ತೆಲಂಗಾಣ ಮುಖ್ಯಮಂತ್ರಿಯಲ್ಲಿ ಮನವಿ ಮಾಡಿಕೊಳ್ಳಲಾಗುತ್ತದೆ. ಈ ಕುರಿತು ಡಿಸಿಎಂ ಅಧ್ಯಕ್ಷತೆಯಲ್ಲಿ ಒಂದೆರಡು ದಿನಗಳಲ್ಲಿ ಸಭೆ ನಡೆಯಲಿದೆ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ.