ರೌಡಿಗಳ ಮನೆಗಳಿಗೆ ದಿಢೀರ್‌ ದಾಳಿ, ಬಿಸಿ ಮುಟ್ಟಿಸಿದ ಪೊಲೀಸ್‌

| Published : Sep 21 2025, 02:00 AM IST

ಸಾರಾಂಶ

ಇತ್ತೀಚೆಗೆ ಅಪರಾಧ ಚಟುವಟಿಕೆಗಳ ಹೆಚ್ಚಳ ಆರೋಪ ಬೆನ್ನಲ್ಲೇ ಎಚ್ಚೆತ್ತು ರಾಜಧಾನಿಯಲ್ಲಿ ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಅಪರಾಧ ಚಟುವಟಿಕೆಗಳ ಹೆಚ್ಚಳ ಆರೋಪ ಬೆನ್ನಲ್ಲೇ ಎಚ್ಚೆತ್ತು ರಾಜಧಾನಿಯಲ್ಲಿ ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ನಗರದಲ್ಲಿ ಸುಮಾರು 1478 ರೌಡಿಗಳ ವಿರುದ್ಧ ದಕ್ಷಿಣ, ಪೂರ್ವ, ಉತ್ತರ, ಪಶ್ಚಿಮ, ಆಗ್ನೇಯ, ಈಶಾನ್ಯ, ಎಲೆಕ್ಟ್ರಾನಿಕ್ ಸಿಟಿ, ಕೇಂದ್ರ, ವಾಯುವ್ಯ, ವೈಟ್‌ಫೀಲ್ಡ್ ಹಾಗೂ ಸಿಸಿಬಿ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ರೌಡಿಗಳಿಗೆ ಅಪರಾಧ ಕೃತ್ಯಗಳಲ್ಲಿ ತೊಡಗಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ. ಇನ್ನು ರೌಡಿಗಳ ಅಡ್ಡೆ ಎನ್ನಲಾದ ಕೆಲ ಬಾರ್‌ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಸಹ ಶುಕ್ರವಾರ ರಾತ್ರಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಬಸವೇಶ್ವರ ನಗರದ ಬಾರ್‌ನಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್ ಹಾಗೂ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದಾಗ ರೌಡಿ ಪ್ರಶಾಂತ್ ಸಿಕ್ಕಿಬಿದ್ದಿದ್ದಾನೆ. ಹಳೇ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಆತನ ಮೇಲೆ ವಾರೆಂಟ್ ಜಾರಿಗೊಂಡಿತ್ತು. ಕೂಡಲೇ ಪ್ರಶಾಂತ್ ನನ್ನು ವಾರೆಂಟ್ ಆಧರಿಸಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ರೌಡಿಸಂ ಹಾಗೂ ಡ್ರಗ್ಸ್ ಮಾಫಿಯಾ ದಂಧೆ ಚಟುವಟಿಕೆ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಸಚಿವರ ಅತೃಪ್ತಿ ಬೆನ್ನಲ್ಲೇ ರೌಡಿಗಳಿಗೆ ಲಗಾಮು ಹಾಕಲು ಪೊಲೀಸರು ದಾಳಿ ನಡೆಸಿದ್ದಾರೆ.

ಎಲ್ಲೆಲ್ಲೆ ಎಷ್ಟು ರೌಡಿಗಳು?

ಈಶಾನ್ಯ-169, ಉತ್ತರ-179, ಪೂರ್ವ-247, ಪಶ್ಚಿಮ-222. ಎಲೆಕ್ಟ್ರಾನಿಕ್ಸ್‌ ಸಿಟಿ-100, ಆಗ್ನೇಯ-120, ಕೇಂದ್ರ-20, ವಾಯುವ್ಯ-102, ವೈಟ್‌ಫೀಲ್ಡ್‌-140 ಹಾಗೂ ಸಿಸಿಬಿ-179 ಸೇರಿದಂತೆ ಒಟ್ಟು 1478 ರೌಡಿಗಳ ಮನೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ಹಳೇ ಪ್ರಕರಣಗಳಲ್ಲಿ ವಾರೆಂಟ್ ಜಾರಿಗೊಂಡರು ತಪ್ಪಿಸಿಕೊಂಡಿದ್ದ 7 ರೌಡಿಗಳು ಸಿಕ್ಕಿಬಿದ್ದಿದ್ದಾರೆ. ಈ ದಾಳಿ ವೇಳೆ ಯಾವುದೇ ಶಸ್ತ್ರಾಸ್ತ್ರಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.