ಜಾತಿ ಗಣತಿ ನಮೂನೆಯಿಂದ 33 ಕ್ರಿಶ್ಚಿಯನ್‌ ಜಾತಿಗೆ ಕೊಕ್‌

| Published : Sep 21 2025, 02:00 AM IST

ಸಾರಾಂಶ

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್‌.. ಹೀಗೆ 46 ಹಿಂದೂ ಜಾತಿಗಳ ಹೆಸರನ್ನು ಕ್ರಿಶ್ಚಿಯನ್‌ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆನ್‌ಲೈನ್‌ ಸಮೀಕ್ಷಾ ನಮೂನೆಯಿಂದ 33 ಜಾತಿಗಳ ಹೆಸರು ಕೈಬಿಡಲು ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದೆ.

ತೀವ್ರ ವಿರೋಧಕ್ಕೆ ಮಣಿದ ಹಿಂದುಳಿದ ವರ್ಗಗಳ ಆಯೋಗ

===

ಯಾವ್ಯಾವ ಜಾತಿ ಡಿಲೀಟ್‌?

46 ಹಿಂದೂ ಜಾತಿಗಳ ಹೆಸರನ್ನು ಕ್ರಿಶ್ಚಿಯನ್‌ ಜತೆ ತಳಕುಹಾಕಿ ಜಾತಿಗಳ ಪಟ್ಟಿಗೆ ಸಿದ್ಧಪಡಿಸಲಾಗಿತ್ತು. ಅದಕ್ಕೆ ವಿರೋಧ ವ್ಯಕ್ತವಾದ ಕಾರಣ ಬ್ರಾಹ್ಮಣ ಕ್ರಿಶ್ಚಿಯನ್‌, ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌ ಹೀಗೆ ವಿವಾದಕ್ಕೆ ಕಾರಣವಾಗಿರುವ 33 ಜಾತಿಗಳ ಹೆಸರು ಕೈ ಬಿಡಲಾಗಿದೆ.

--

ಬ್ರಾಹ್ಮಣ ಮುಸ್ಲಿಂ, ಜೈನ

ಬ್ರಾಹ್ಮಣ ಮುಂದುವರಿಕೆ

ಕ್ರಿಶ್ಚಿಯನ್‌ ಧರ್ಮದ ಜತೆಗಿರುವ ಜಾತಿಗಳನ್ನು ಕೈಬಿಡಲಾಗುತ್ತಿದ್ದರೂ ಮುಸ್ಲಿಂ ಹಾಗೂ ಜೈನ ಧರ್ಮದ ಜತೆಗೂ ಹಿಂದು ಜಾತಿಗಳ ಹೆಸರು ಪಟ್ಟಿ ಎಂದಿನಂತೆಯೇ ಮುಂದುವರೆಯಲಿದೆ. ಮುಸ್ಲಿಮರಲ್ಲಿ ಬ್ರಾಹ್ಮಣ ಮುಜಾವರ ಮುಸ್ಲಿಂ, ಬಗವಾನ್‌ ಮುಸ್ಲಿಂ ಹೀಗೆ ಕೆಲ ಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಇನ್ನು ಜೈನ ಧರ್ಮದಲ್ಲಿ ಜೈನ ಬ್ರಾಹ್ಮಣ, ಜೈನ ಬಣಜಿಗ, ಜೈನ ಬಿಲ್ಲವ, ಜೈನ ಹೂಗಾರ್‌, ಜೈನ ಬಂಟರು ಹೀಗೆ ಹಲವು ಜಾತಿಗಳು ಇವೆ. ಅವುಗಳನ್ನು ಜಾತಿ ನಮೂನೆಯಿಂದ ಕೈಬಿಟ್ಟಿಲ್ಲ ಎಂದು ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ.--

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್‌.. ಹೀಗೆ 46 ಹಿಂದೂ ಜಾತಿಗಳ ಹೆಸರನ್ನು ಕ್ರಿಶ್ಚಿಯನ್‌ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆನ್‌ಲೈನ್‌ ಸಮೀಕ್ಷಾ ನಮೂನೆಯಿಂದ 33 ಜಾತಿಗಳ ಹೆಸರು ಕೈಬಿಡಲು ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದೆ.

ಆದರೆ, ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿರುವವರು ಬಯಸಿದರೆ ತಮ್ಮ ಮೂಲ ಜಾತಿ ಹೆಸರನ್ನು ಇತರೆ ಕಾಲಂನಲ್ಲಿ ನಮೂದಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.

ನಮೂನೆಯಿಂದ 33 ಜಾತಿ ಮಾತ್ರ ಡಿಲೀಟ್‌:

ಕ್ರಿಶ್ಚಿಯನ್‌ ಹೆಸರಿನ ಹಿಂದೂ ಜಾತಿಗಳ ಬಗ್ಗೆ ವಿವಿಧ ಜಾತಿಗಳು ಹಾಗೂ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ರಾಜ್ಯಪಾಲರು ಸಹ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಹೀಗಾಗಿ ಮುಖ್ಯಮಂತ್ರಿಗಳು ನೀಡಿರುವ ಸೂಚನೆ ಅನ್ವಯ ಆಯೋಗ ಕೆಲ ಪರಿಷ್ಕರಣೆ ಮಾಡಿದೆ. ಆದರೆ ಕ್ರಿಶ್ಚಿಯನ್‌ ಜಾತಿಗಳೊಂದಿಗಿನ 46 ಹೆಸರುಗಳಲ್ಲಿ 33 ಜಾತಿಗಳ ಹೆಸರನ್ನಷ್ಟೇ ನಮೂನೆಯಿಂದ ಡಿಲೀಟ್‌ ಮಾಡಲು ತೀರ್ಮಾನಿಸಲಾಗಿದೆ. ಏಕೆಂದರೆ, ಈ 46 ಜಾತಿಗಳಲ್ಲಿ 13 ಜಾತಿಯವರು ಪರಿಶಿಷ್ಟ ವರ್ಗದ ಮೀಸಲಾತಿ ಪಡೆಯುತ್ತಿದ್ದಾರೆ.

ಒಂದು ವೇಳೆ ಅವರು ತಮ್ಮ ಜಾತಿ ಹೆಸರು ಬರೆಸದಿದ್ದರೆ ಕ್ರಿಶ್ಚಿಯನ್‌ ಧರ್ಮದ ಅಡಿ 3-ಬಿ ಮೀಸಲಾತಿಗೆ ವರ್ಗಾವಣೆಗೊಳ್ಳುತ್ತಾರೆ. ಆಗ ಹಿಂದೂ ಧರ್ಮದ ಪರಿಶಿಷ್ಟ ಜಾತಿ ಅಥವಾ ವರ್ಗದಡಿ ಬರುತ್ತಿದ್ದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಹೀಗಾಗಿ ಈ 13 ಜಾತಿಗಳ ಹೆಸರನ್ನು ಜಾತಿ ಕಾಲಂನಲ್ಲಿ ಉಳಿಸಿಕೊಳ್ಳಲಾಗಿದೆ.

ಉಳಿದಂತೆ ಬ್ರಾಹ್ಮಣ ಕ್ರಿಶ್ಚಿಯನ್‌, ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌ ಹೀಗೆ ವಿವಾದಕ್ಕೆ ಕಾರಣವಾಗಿರುವ 33 ಜಾತಿಗಳ ಹೆಸರು ಕೈ ಬಿಡಲಾಗಿದೆ. ಆ ಜಾತಿಗಳವರೂ ಮೂಲ ಜಾತಿ ಉಲ್ಲೇಖಿಸಲು ಇಚ್ಛಿಸಿದರೆ ಇತರೆ ಕಾಲಂನಲ್ಲಿ ಉಲ್ಲೇಖಿಸಬಹುದು. ಏಕೆಂದರೆ, ಅವರವರ ಮೂಲ ಜಾತಿ ಹೇಳಿಕೊಳ್ಳುವ ಹಕ್ಕು ಕಸಿಯಲು ಸಾಧ್ಯವಿಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮೂಲಗಳು ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿವೆ.

ನಾಳೆಯಿಂದಲೇ ಮನೆ ಮನೆ ಭೇಟಿ:

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಂತೆ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಅ.7ರವರೆಗೆ ಜಾತಿ ಗಣತಿ ನಡೆಸಲಿದೆ. ಹೀಗಾಗಿ ಸೋಮವಾರದಿಂದ ಮನೆ-ಮನೆಗೆ ಗಣತಿದಾರರು ಬರಲಿದ್ದಾರೆ.

ಪ್ರತಿಯೊಬ್ಬರೂ ಈ ಮೊದಲೇ ಕೈಸೇರಿರುವ ಮಾದರಿ ಪ್ರಶ್ನಾವಳಿಗಳ ನೆರವಿನೊಂದಿಗೆ ಗಣತಿದಾರರ ಎಲ್ಲ 60 ಪ್ರಶ್ನೆಗಳಿಗೆ ಪೂರಕ ಮಾಹಿತಿ ಒದಗಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೂಚಿಸಿದೆ.

ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಕಾರ್ಯನಿರ್ವಹಣಾಧಿಕಾರಿಗಳು ಈಗಾಗಲೇ ಸಮೀಕ್ಷಾದಾರರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಗತ್ಯ ತರಬೇತಿ ನೀಡಿದ್ದಾರೆ. ಸಾರ್ವಜನಿಕರಿಗೂ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದರೊಂದಿಗೆ ಗಣತಿದಾರರು ಏಕಕಾಲದಲ್ಲಿ ಮನೆ-ಮನೆ ಭೇಟಿ ನೀಡಲಿದ್ದಾರೆ ಎಂದು ಸರ್ಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ.

===

ಬ್ರಾಹ್ಮಣ ಮುಸ್ಲಿಂ, ಜೈನ ಬ್ರಾಹ್ಮಣ ಮುಂದುವರಿಕೆ

ಕ್ರಿಶ್ಚಿಯನ್‌ ಧರ್ಮದ ಜತೆಗಿರುವ ಜಾತಿಗಳನ್ನು ಕೈಬಿಡಲಾಗುತ್ತಿದ್ದರೂ ಮುಸ್ಲಿಂ ಹಾಗೂ ಜೈನ ಧರ್ಮದ ಜತೆಗೂ ಹಿಂದು ಜಾತಿಗಳ ಹೆಸರು ಪಟ್ಟಿ ಎಂದಿನಂತೆಯೇ ಮುಂದುವರೆಯಲಿದೆ.

ಉದಾ: ಮುಸ್ಲಿಮರಲ್ಲಿ ಬ್ರಾಹ್ಮಣ ಮುಜಾವರ ಮುಸ್ಲಿಂ, ಬಗವಾನ್‌ ಮುಸ್ಲಿಂ ಹೀಗೆ ಕೆಲ ಜಾತಿಗಳನ್ನು ಪಟ್ಟಿ ಮಾಡಲಾಗಿದೆ. ಇನ್ನು ಜೈನ ಧರ್ಮದಲ್ಲಿ ಜೈನ ಬ್ರಾಹ್ಮಣ, ಜೈನ ಬಣಜಿಗ, ಜೈನ ಬಿಲ್ಲವ, ಜೈನ ಹೂಗಾರ್‌, ಜೈನ ಬಂಟರು ಹೀಗೆ ಹಲವು ಜಾತಿಗಳು ಇವೆ. ಅವುಗಳನ್ನು ಜಾತಿ ನಮೂನೆಯಿಂದ ಕೈಬಿಟ್ಟಿಲ್ಲ ಎಂದು ಆಯೋಗದ ಮೂಲಗಳು ಸ್ಪಷ್ಟಪಡಿಸಿವೆ.ಮುಂದುವರೆದ ಜಾತಿ, ಧರ್ಮಗಳ ಗೊಂದಲ:

ಧರ್ಮದ ಕಾಲಂನಲ್ಲಿ ಲಿಂಗಾಯತ, ವೀರಶೈವ ಲಿಂಗಾಯತ ಆಯ್ಕೆಯಿಲ್ಲ. ಇದರಿಂದ ಲಿಂಗಾಯತರಲ್ಲಿ ಗೊಂದಲ ಮುಂದುವರೆದಿದೆ. ಧರ್ಮದ ಕಾಲಂನಲ್ಲಿ ಇತರೆ ಎಂಬ ಆಯ್ಕೆ ನೀಡಲಾಗಿದೆ. ಅಲ್ಲೇ ಅವರು ಅನುಸರಿಸುವ ಧರ್ಮದ ಹೆಸರು ನೀಡಬೇಕು ಎಂದು ಸ್ಪಷ್ಟಪಡಿಸಿದೆ.