ಸಾರಾಂಶ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಜಾತಿ ಗಣತಿ ಸಮೀಕ್ಷೆಗೆ ಮುಂದಾಗಿರುವುದು ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಗಲಿದೆ.
ಕನ್ನಡಪ್ರಭ ವಾರ್ತೆ ಹೊಸಪೇಟೆ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಜಾತಿ ಗಣತಿ ಸಮೀಕ್ಷೆಗೆ ಮುಂದಾಗಿರುವುದು ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಮಾಜಿ ಎಮ್ಮೆಲ್ಸಿ, ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1931ರಲ್ಲಿ ನಡೆದಿದ್ದ ಈ ರೀತಿಯ ಜಾತಿ ಸಮೀಕ್ಷೆಯೇ ಕೊನೆ. ಸ್ವಾತಂತ್ರ್ಯ ಭಾರತದಲ್ಲಿ ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿ ಗಣತಿ ನಡೆಯಬೇಕು ಎಂಬುದನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾಂತರಾಜ್ ಅರಸು ಆಯೋಗ ರಚಿಸಿದ್ದರು. ಆದರೆ, ಆ ವರದಿ ಸಾಕಷ್ಟು ವಿಳಂಬವಾಗಿದ್ದರಿಂದ ಅದು ಈಗ ಅಪ್ರಸ್ತುತ. ಹಾಗಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಮತ್ತೊಮ್ಮೆ ಸಮೀಕ್ಷೆಗೆ ಮುಂದಾಗಿದೆ ಎಂದರು.
ಇದರಿಂದ ಶೋಷಿತ, ಅತಿ ಹಿಂದುಳಿದ ಸವಿತಾ, ಹಡಪದ, ಮಡಿವಾಳ, ಯಾದವ್, ಈಡಿಗ, ಕಂಬಾರ ಸೇರಿದಂತೆ ನೂರಾರು ಸಮುದಾಯಗಳ ಅಭಿವೃದ್ಧಿಗೆ ಈ ಸಮೀಕ್ಷೆ ಅನುಕೂಲವಾಗಲಿದೆ. ಸಮೀಕ್ಷೆಯ ವರದಿಯ ನಂತರ ಆಗಬಹುದಾದ ಸಣ್ಣ, ಪುಟ್ಟ ಗೊಂದಲ ಸರಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮ್ಮತಿಸಿದ್ದಾರೆ ಎಂದರು.ಸವಿತಾ ಸಮಾಜ ಸೇರಿದಂತೆ ಶ್ರಮಿಕ ಸಮುದಾಯಗಳಿಗೆ ಶೇ.4ರಷ್ಟು ಪ್ರತ್ಯೇಕ ಮೀಸಲಾತಿ ಒದಗಿಸಬೇಕು. ಶ್ರಮಿಕ ವರ್ಗಗಳಿಗೆ ನಗರ, ಪಟ್ಟಣಗಳಲ್ಲಿ ನಿವೇಶನ ನೀಡಿ ಕಾಲನಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಎಲ್ಲಾ ಸಮುದಾಯಗಳ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಸಹಕಾರಿಯಾಗಲಿದೆ. ಎಲ್ಲಾ ವರ್ಗದಲ್ಲಿ ಕಡುಬಡವರು ಇದ್ದು, ಎಲ್ಲರೂ ಪ್ರಗತಿ ಸಾಧಿಸಲು ಜಾತಿ ಗಣತಿ ಸಹಕಾರಿಯಾಗಲಿದೆ. ಸೆ.22 ರಿಂದ ಅ.7ರ ವರೆಗೆ ಸಮೀಕ್ಷೆ ನಡೆಯಲಿದೆ. ಸಮೀಕ್ಷೆದಾರರಿಗೆ ಸಹಕಾರ ನೀಡಬೇಕು ಎಂದು ಕೋರಿದರು.ನಗರಸಭೆಯ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಮುಖಂಡರಾದ ಬಸವರಾಜ್, ಚಂದ್ರಣ್ಣ ಮತ್ತಿತರರಿದ್ದರು.