ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇಸ್ರೇಲ್‌ನವರ ಮೇಲೆ ದಾಳಿ ಹಿನ್ನೆಲೆ ಇಲ್ಲಿನ ಓಂ ಬೀಚ್‌ನಲ್ಲಿ ತಂಗಿರುವ ಇಸ್ರೇಲ್ ಪ್ರವಾಸಿಗರ ಹನುಕ್ಕಾ ಹಬ್ಬದ ಆಚರಣೆಗೆ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಕನ್ನಡಪ್ರಭ ವಾರ್ತೆ ಗೋಕರ್ಣ
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇಸ್ರೇಲ್‌ನವರ ಮೇಲೆ ದಾಳಿ ಹಿನ್ನೆಲೆ ಇಲ್ಲಿನ ಓಂ ಬೀಚ್‌ನಲ್ಲಿ ತಂಗಿರುವ ಇಸ್ರೇಲ್ ಪ್ರವಾಸಿಗರ ಹನುಕ್ಕಾ ಹಬ್ಬದ ಆಚರಣೆಗೆ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.ಪ್ರತಿ ವರ್ಷ ಇಲ್ಲಿಗೆ ಬರುವ ಇಸ್ರೇಲ್ ಪ್ರಜೆಗಳಲ್ಲಿ ಓರ್ವ ದಂಪತಿಗಳು ಇಲ್ಲಿನ ಓಂ ಕಡಲತೀರದ ಬಳಿಯ ವಸತಿ ಗೃಹದಲ್ಲಿ ವಾಸವಿರುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಬರುವ ಈ ಸಮುದಾಯದವರ ಹಬ್ಬವನ್ನ ವಿಜೃಂಭಣೆಯಿಂದ ಆಚರಿಸುವುದು ವಾಡಿಕೆಯಾಗಿದ್ದು, ಇಸ್ರೇಲ್‌ನಿಂದ ಬಂದು ಈ ಭಾಗದ ವಿವಿಧ ವಸತಿ ಗೃಹದಲ್ಲಿ ಉಳಿದುಕೊಂಡಿರುವವರು ಈ ಸಮಯದಲ್ಲಿ ಒಂದಾಗುತ್ತಾರೆ. ಸಂಜೆ 8 ಗಂಟೆಯಿಂದ 9ರವರೆಗೆ ಪೂಜೆ, ಪ್ರಾರ್ಥನೆ ನಂತರ ಉಪಹಾರ ನಡೆಯುತ್ತದೆ. ನಮ್ಮಲ್ಲಿಯ ಹಬ್ಬ ಆಚರಿಸುವಾಗ ಸಂಬಂಧಿಕರು ಬಂದಂತೆ ಇಸ್ರೇಲ್‌ನಿಂದ ಪ್ರವಾಸಿಗರು ಇಲ್ಲಿ ಒಟ್ಟಾಗುವುದು ವಿಶೇಷವಾಗಿದೆ. ಈ ವೇಳೆ ಯಾವುದೇ ಅಹಿತರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಆ ದೇಶದ ರಾಯಭಾರಿ ಕಚೇರಿಯ ಸೂಚನೆಯಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಹಿಳಾ ಸಿಬ್ಬಂದಿ, ಕಾರವಾರದ ಪೊಲೀಸ್ ಮೀಸಲು ಪಡೆ ಸಹ ನಿಯೋಜಿಸಲಾಗಿದೆ. ಒಟ್ಟು 9 ದಿನ ಇವರ ಆಚರಣೆ ನಡೆಯಲಿದ್ದು, ಅಲ್ಲಿಯವರೆಗೂ ಆ ಸಮಯದಲ್ಲಿ ಪೊಲೀಸ್ ಕಾವಲು ಇರಲಿದೆ.
ಡಿವೈಎಸ್ಪಿ ಭೇಟಿ:ಮಂಗಳವಾರ ಸಂಜೆ ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ. ಭೇಟಿ ನೀಡಿದ್ದು, ಎಷ್ಟು ಜನ ವಿದೇಶಿಗರು ಭಾಗವಹಿಸುತ್ತಿದ್ದಾರೆ ಹಾಗೂ ಯಾವ ಕಡೆಯಿಂದ ಬರುತ್ತಾರೆ. ಭದ್ರತಾ ಕ್ರಮ ಮತ್ತಿತರ ಮಾಹಿತಿ ಪಡೆದು ಸೂಕ್ತ ಸಲಹೆ-ಸೂಚನೆ ನೀಡಿದ್ದಾರೆ. ಈ ವೇಳೆ ಪಿಎಸ್‌ಐ ಖಾದರ್ ಬಾಷಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.