ರಾಜ್ಯದ ಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಅವರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿ ನಾನಾ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಕಂಪ್ಲಿ: ರಾಜ್ಯದ ಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಅವರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿ, ಮಂಗಳವಾರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ. ಮಾಯಪ್ಪ ಅವರ ನೇತೃತ್ವದಲ್ಲಿ ನಾನಾ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಈ ವೇಳೆ, ಎಂ.ಸಿ. ಮಾಯಪ್ಪ ಮಾತನಾಡಿ, ಡಾ. ಜಿ. ಪರಮೇಶ್ವರ್ ಅವರು ಸರಳ, ಸಜ್ಜನಿಕೆಯುಳ್ಳ ಹಾಗೂ ಅಪಾರ ಆಡಳಿತಾನುಭವ ಹೊಂದಿದ ದಲಿತ ನಾಯಕರಾಗಿದ್ದಾರೆ. ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, 2013ರ ವಿಧಾನಸಭಾ ಚುನಾವಣೆಯಲ್ಲಿ ಅವರ ಅಧ್ಯಕ್ಷತೆಯಲ್ಲೇ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಇತಿಹಾಸ ನಿರ್ಮಿಸಿದೆ ಎಂದು ಸ್ಮರಿಸಿದರು.ಕಾಂಗ್ರೆಸ್ ಪಕ್ಷವನ್ನು ಆರಂಭದಿಂದಲೂ ದಲಿತ ಸಮುದಾಯ ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದು, ದಲಿತರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳಬಾರದು ಎಂದು ಅವರು ಕಿಡಿಕಾರಿದರು.
ಸಮಾಜದ ಹಿಂದುಳಿದ ವರ್ಗಗಳಿಗೆ ನಿಜವಾದ ನ್ಯಾಯ ಒದಗಿಸಬೇಕಾದರೆ, ಡಾ. ಜಿ. ಪರಮೇಶ್ವರ ಅವರಂತಹ ಅರ್ಹ ಮತ್ತು ಅನುಭವೀ ದಲಿತ ನಾಯಕನಿಗೆ ಮುಖ್ಯಮಂತ್ರಿ ಸ್ಥಾನಮಾನ ನೀಡುವ ಮೂಲಕ ದಲಿತರನ್ನು ಅಧಿಕಾರದ ಕೇಂದ್ರಕ್ಕೆ ತರಬೇಕಿದೆ. ಈ ಕುರಿತು ರಾಜ್ಯ ಹಾಗೂ ಕೇಂದ್ರ ಹೈಕಮಾಂಡ್ ಗಂಭೀರವಾಗಿ ಚಿಂತಿಸಬೇಕು. ದಲಿತ ಮುಖ್ಯಮಂತ್ರಿ ನೇಮಕ ಮಾಡುವ ಮೂಲಕ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಕಾಂಗ್ರೆಸ್ ಪಕ್ಷ ತೋರಿಸಬೇಕಿದೆ. ಈ ಬೇಡಿಕೆಯನ್ನು ಈಡೇರಿಸುವಂತೆ ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಪದಾಧಿಕಾರಿಗಳಾದ ಮರಿಸ್ವಾಮಿ ಸಣಾಪುರ, ರವಿ ಮಣ್ಣೂರು, ಎಸ್.ಬಸವರಾಜ, ಸಿ.ಬಸವರಾಜ, ಪಿ.ರಾಜ, ಸಿ.ದುರುಗಪ್ಪ, ಕೆ.ಹೊನ್ನೂರಪ್ಪ, ಎಚ್.ಬಸಪ್ಪ ಮೆಟ್ರಿ, ಸಿ.ರಾಮಪ್ಪ ರಾಮಸಾಗರ, ರಾಜಭಕ್ಷಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.