ಹರೀಶ್ ವಿರುದ್ಧ ರಾಜಕೀಯ ದುರುದ್ದೇಶದ ಕೇಸ್

| Published : Sep 10 2025, 01:03 AM IST

ಸಾರಾಂಶ

ರಾಜಕೀಯ ನಾಯಕರ ಮನೆ ಕಾಯುವುದರಿಂದ ಸಾರ್ವಜನಿಕರ ಆಡಳಿತ ವ್ಯವಸ್ಥೆಯ ಮೇಲೆ ಜನರಿಗೆ ಅನುಮಾನ ಬರಬಾರೆಂಬ ಸದುದ್ದೇಶದಿಂದ ಹರಿಹರ ಶಾಸಕ ಬಿ.ಪಿ.ಹರೀಶರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ಕೇಸ್ ದಾಖಲಿಸಿದ್ದು ಸರಿಯಲ್ಲ ಎಂದು ಹರಿಹರ ತಾಲೂಕಿನ ವಿವಿಧ ಪಕ್ಷ, ಗ್ರಾಮಗಳ ಮುಖಂಡರು ಆಕ್ಷೇಪಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜಕೀಯ ನಾಯಕರ ಮನೆ ಕಾಯುವುದರಿಂದ ಸಾರ್ವಜನಿಕರ ಆಡಳಿತ ವ್ಯವಸ್ಥೆಯ ಮೇಲೆ ಜನರಿಗೆ ಅನುಮಾನ ಬರಬಾರೆಂಬ ಸದುದ್ದೇಶದಿಂದ ಹರಿಹರ ಶಾಸಕ ಬಿ.ಪಿ.ಹರೀಶರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ಕೇಸ್ ದಾಖಲಿಸಿದ್ದು ಸರಿಯಲ್ಲ ಎಂದು ಹರಿಹರ ತಾಲೂಕಿನ ವಿವಿಧ ಪಕ್ಷ, ಗ್ರಾಮಗಳ ಮುಖಂಡರು ಆಕ್ಷೇಪಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಪಾಮೇನಹಳ್ಳಿ ಆಕಾಶ್ ಬಣಕಾರ್‌, ದೀಟೂರು ಮಲ್ಲಿಕಾರ್ಜುನ ಜಕ್ಕಣ್ಣನವರ್, ಜಿಲ್ಲೆಯಲ್ಲಿ ಕಾರ್ಯಾಂಗ, ಅರೆ ನ್ಯಾಯಾಂಗದ ನಂತರದ ಸ್ಥಾನದಲ್ಲಿರುವ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್‌ ತಮ್ಮ ಬಗ್ಗೆ ಸದುದ್ದೇಶದಿಂದ ಶಾಸಕರು ನೀಡಿದ ಹೇಳಿಕೆಯನ್ನೇ ತಪ್ಪಾಗಿ ಗ್ರಹಿಸಿ, ಕೇಸ್ ಮಾಡಿರುವುದು ಸರಿಯಲ್ಲ ಎಂದರು.

ಸಾರ್ವಜನಿಕರಿಗೆ ಆಡಳಿತ ವ್ಯವಸ್ಥೆಯ ಮೇಲೆ ಅನುಮಾನ ಬರಬಾರದೆಂಬುದೇ ಶಾಸಕರ ಮಾತಿನ ಹಿಂದಿನ ಕಾಳಜಿಯಾಗಿದೆ. ಜಿಲ್ಲೆಯಲ್ಲಿ ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ಸಾಗಾಟ ಜೋರಾಗಿದೆ. ದುಶ್ಚಟಗಳಿಗೆ ಯುವ ಸಮುದಾಯ ಬಲಿಯಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳೂ ಹೆಚ್ಚುತ್ತಿವೆ. ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣ ವರದಿಯಾಗುತ್ತಿದೆ. ಇಂತಹದ್ದನ್ನೆಲ್ಲಾ ನಿಗ್ರಹಿಸಲು ಜಿಲ್ಲೆಯಲ್ಲಿ ಐಪಿಎಸ್, ಐಎಎಸ್‌ ಅಧಿಕಾರಿಗಳಿಗೆ ಸಮಯದ ಅಭಾವ ಇರುತ್ತದೆ ಎಂದು ತಿಳಿಸಿದರು.

ಉನ್ನತ ಹುದ್ದೆಯ ಅಧಿಕಾರಿಗಳ ಘನತೆಗೆ ಧಕ್ಕೆ ಆಗದಿರಲೆಂದು ಅಂತಹ ಪದ ಬಳಸಿದ್ದಾರೆಯೇ ಹೊರತು, ಯಾರನ್ನೂ ವೈಯಕ್ತಿಕವಾಗಿ ನಿಂದಿಸಿಲ್ಲ. ಅಲ್ಲದೇ, ಜಿಲ್ಲಾಡಳಿತದ ವ್ಯವಸ್ಥೆ ತುಕ್ಕು ಹಿಡಿದಿದ್ದು, ಯಾವುದೇ ಅಧಿಕಾರಿಗಳೂ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಅಧಿಕಾರಿಗಳು ರಾತ್ರಿ 11 ಗಂಟೆ, 12 ಗಂಟೆಗೆ ಸರ್ಕಾರಿ ಕಚೇರಿಗಳ ಕಡತ ಹಿಡಿದು ಸಚಿವರ ಮಿಲ್‌ ಗೇಟ್‌ ಕಾಯುವುದನ್ನು ಸಾರ್ವಜನಿಕರು ಗಮನಿಸಿದ್ದೇವೆ. ಇದು ಜಿಲ್ಲೆಯ ಆಡಳಿತ ವ್ಯವಸ್ಥೆಯಾಗಿದ್ದು, ಇದು ಸಾರ್ವಜನಿಕರಿಗೆ ಮಾಡುವ ಅವಮಾನವಾಗಿದೆ. ಹಾಗಾಗಿ ಶಾಸಕರು ಈ ಬಗ್ಗೆ ಪ್ರಶ್ನಿಸಿದ್ದಾರೆಯೇ ಹೊರತು ಯಾವುದೇ ವ್ಯಕ್ತಿಯ ವೈಯಕ್ತಿಕ ಟೀಕೆಗೆ ಅಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೇ ಉನ್ನತಾಧಿಕಾರಿಯಾಗಿದ್ದರೂ ಪಕ್ಷಪಾತಿ ಧೋರಣೆ, ತಾವೇ ಉನ್ನತವೆಂಬ ಭಾವನೆ ಬಿಟ್ಟು, ಪ್ರಜೆಗಳಿಂದ ಆಯ್ಕೆಯಾದ ಎಲ್ಲಾ ಜನ ಪ್ರತಿನಿಧಿಗಳನ್ನು ಗೌರವದಿಂದ ಕಾಣಬೇಕು. ಇದು ಐಎಎಸ್, ಐಪಿಎಸ್ ಅಧಿಕಾರಿಗಳ ಕರ್ತವ್ಯವಾಗಿದೆ. ಪರಿಶಿಷ್ಟ ಜಾತಿ-ಪಂಗಡಗಳು, ಬಡ ರೈತರು, ಮಹಿಳಾ ರೈತರಿಗೆ ನ್ಯಾಯ ಕೊಡಿಸಲು ಹೋರಾಟ ನಡೆಸಿರುವ ನಮ್ಮ ಹರಿಹರ ಶಾಸಕ ಬಿ.ಪಿ.ಹರೀಶರನ್ನು ಪೊಲೀಸ್ ಇಲಾಖೆಯು ಕೇಸ್ ದಾಖಲಿಸುವ ಮೂಲಕ ಬೆದರಿಸುವ ಕೆಲಸಕ್ಕೆ ಕೈ ಹಾಕಿದ್ದು, ಅದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು.

ಹರಿಹರ ತಾಲೂಕು ಮುಖಂಡರಾದ ಎಂ.ಅಂಜಿನಪ್ಪ ನಾಗೇನಹಳ್ಳಿ, ಪಾಮೇನಹಳ್ಳಿ ಎನ್.ಬಿ.ಕುಮಾರ, ಐ.ಮಹೇಶ್ವರಪ್ಪ ಕುಮಾರನಹಳ್ಳಿ ಇತರರು ಇದ್ದರು.

ಶಿವಮೊಗ್ಗ-ಮರಿಯಮ್ಮನಹಳ್ಳಿ ರಸ್ತೆ ಅಭಿವೃದ್ಧಿಗೆ ಸಚಿವರು, ಸಂಸದರು ಮುಂದಾಗಬೇಕು. ಸಂಸದರ ಬಳಿ ಯಾರಾದರೂ ಏನೇ ಕೇಳಿಕೊಂಡು ಹೋದರೆ ಯಾವ ಊರು, ಏರಿಯಾ, ನಿಮ್ಮ ಭಾಗದ ಮುಖಂಡರ ಪತ್ರ ತಂದಿದ್ದೀರಾ ಅಂತಾ ಪ್ರಶ್ನಿಸುತ್ತಾರೆ. ನಿಮ್ಮ ವಾರ್ಡ್‌, ನಿಮ್ಮ ಊರಿನಲ್ಲಿ ನಮಗೆ ಎಷ್ಟು ಮತ ಬಿದ್ದಿವೆಯೆಂದು ಕೇಳುತ್ತಾರೆಯೇ ಹೊರತು, ಸಮಸ್ಯೆ ಪರಿಹರಿಸುವ ಬಗ್ಗೆ ಆಲೋಚಿಸುವುದಿಲ್ಲ.

ಹರಿಹರ ತಾಲೂಕಿನ ಮುಖಂಡರು.