ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮತಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಕಾರಣ ಮಾಡುವುದಿಲ್ಲ ಎಂದು ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಗುರುವಾರ ಸುಮಾರು ₹5 ಕೋಟಿಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಳಿಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಗಣದಲ್ಲಿ ₹5 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಹಾಗೂ ಮುಖ್ಯ ದ್ವಾರ ಬಾಗಿಲು, ಕಾಂಪೌಂಡ್‌, ಓವರ್‌ ಹೆಡ್ ಟ್ಯಾಂಕ್, ಮೂತ್ರಾಲಯ ನಿರ್ಮಾಣ, ಆಡಳಿತ ಕಚೇರಿ ಸುಧಾರಣೆ ಕೆಲಸ ನಡೆಯಲಿದೆ. ಓವರ್ ಹೆಡ್‌ ಟ್ಯಾಂಕ್ , ಮೂತ್ರಾಲಯ ಹಾಗೂ ನಾಲತವಾಡ ಮಾರುಕಟ್ಟೆಯಲ್ಲಿ ಹೊಸ ಶೀಟ್ ಜೋಡಣೆ ಕಾರ್ಯ ಒಳಗೊಂಡು ₹1.70 ಕೋಟಿ ಬಿಡುಗಡೆಗೊಳಿಸಲಾಗಿದೆ. ಇನ್ನೂ ₹5 ಕೋಟಿ ವೆಚ್ಚದಲ್ಲಿ ನಬಾರ್ಡ ಯೋಜನೆಯಡಿ ಕಾಮಗಾರಿಗಳು ಶೀಘ್ರದಲ್ಲಿ ಪ್ರಾರಂಭಗೊಳ್ಳಲಿವೆ ಎಂದು ಹೇಳಿದರು.

ತಾಳಿಕೋಟೆ ಎಪಿಎಂಸಿ ಹಾಗೂ ಮುದ್ದೇಬಿಹಾಳ, ನಾಲತವಾಡ ಎಪಿಎಂಸಿಗಳನ್ನು ವಿಂಗಡಿಸಲಾಗಿದ್ದು, ತಾಳಿಕೋಟೆ ತಾಲೂಕು ಕೇಂದ್ರವಾಗಿದ್ದರಿಂದ ವಿಂಗಡಿಸಲಾಗಿದೆ. ಮುಖ್ಯ ಕಚೇರಿ ಈ ಹಿಂದೆ ತಾಳಿಕೋಟೆಯೇ ಆಗಿತ್ತು. ತಾಳಿಕೋಟೆ ಪಿಎಂಸಿಯಿಂದ ಹೆಚ್ಚಿನ ಸೆಸ್ ಶೇಖರಣೆಯಾಗುತ್ತಿತ್ತು. ಈಗ ಮುದ್ದೇಬಿಹಾಳ ಬೇರ್ಪಡಿಸಿ ಮುದ್ದೇಬಿಹಾಳಕ್ಕೆ ಸೆಸ್ ಶೇಖರಣೆಗೆ ಹೆಚ್ಚಿನ ಕೆಲಸ ವಹಿಸಿದಂತಾಗಿದೆ. ತಾಳಿಕೋಟೆಯಲ್ಲಿಯ ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ ತಾಳಿಕೋಟೆ ಎಪಿಎಂಸಿ ವರ್ತಕರ ಧನಸಹಾಯವೇ ಕಾರಣವಾಗಿದೆ. ಏನೇ ಇರಲಿ ಅಭಿವೃದ್ಧಿಯೇ ನನ್ನ ಮೂಲವಾಗಿದೆ ಎಂದು ಶಾಸಕ ನಾಡಗೌಡ ಹೇಳಿದರು.ಎಪಿಎಂಸಿ ಕಾರ್ಯದರ್ಶಿ ರಾಜು ಎಸ್ ರಾಠೋಡ ಮಾತನಾಡಿ, ಸರ್ವಾಂಗೀಣ ಅಭಿವೃದ್ಧಿಯಾಗುವಂತಹ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇನ್ನೂ ನಡೆಯಬೇಕಾದ ಕೆಲವು ಕಾರ್ಯಗಳ ಕುರಿತು ವಿವರಿಸಿ, ₹30 ಕೋಟಿ ವೆಚ್ಚದಲ್ಲಿ ತಾಳಿಕೋಟೆ ಬ್ರೀಡ್ಜ್‌ ಕಾಮಗಾರಿ ನಡೆದಿದೆ. ₹25 ಕೋಟಿ ವೆಚ್ಚದಲ್ಲಿ ಮೂಕಿಹಾಳ ತಾಳಿಕೋಟೆ ರಸ್ತೆ ಬ್ರೀಡ್ಜ್‌ ಸುಧಾರಣೆಯಾಗಿದೆ. ನೀರಾವರಿಗೆ ಆದ್ಯತೆ ನೀಡಿದ್ದೇವೆ. ಹಗರಟಗಿ ವೆಂಕಟರಾಯಗೌಡರು ಬೂದಿಹಾಳ-ಪಿರಾಪೂರ ಯೋಜನೆಯಾಗಬೇಕೆಂದು ಹೋರಾಟ ಮಾಡಿದ್ದರು. ಈ ಯೋಜನೆ ಯಶಸ್ವಿಗೆ ಸರಕಾರದ ಮೇಲೆ ಬೆಳಕು ಚೆಲ್ಲಬೇಕೆಂದು ನನಗೆ ಒತ್ತಾಯ ಮಾಡಿದ್ದರು. ಬೊಮ್ಮಾಯಿ ಅವರು ನೀರಾವರಿ ಸಚಿವರಿದ್ದಾಗ ಅವರ ಜೊತೆ ಇಡೀ ಒಂದು ದಿನ ಸುದೀರ್ಘವಾಗಿ ಚರ್ಚೆ ಮಾಡಿ ಈ ಯೋಜನೆಗೆ ನೀಲನಕ್ಷೆಗೆ ಅನುಮೋದನೆ ಕೊಡಿಸುವ ಕೆಲಸ ಮಾಡಿದೆ. ಅದರ ಪರಿಣಾಮ ಹಂತ ಹಂತವಾಗಿ ಹಣ ನೀಡಿ ಯೋಜನೆ ಮುಕ್ತಾಯ ಹಂತಕ್ಕೆ ಬಂದಿದೆ ಎಂದು ಹೇಳಿದರು.

ವೇದಿಕೆಯ ಮೇಲೆ ಬೆಳಗಾವಿಯ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ, ವಿಜಯಪುರದ ಕಾರ್ಯನಿರ್ವಾಹಕ ಅಭಿಯಂತರ ಎಲ್.ಬಿ. ಲಮಾಣೆ ಹಾಗೂ ಸಿದ್ದನಗೌಡ ಪಾಟೀಲ(ನಾವದಗಿ), ಎಂ.ಎಸ್.ಸರಶೆಟ್ಟಿ, ಪ್ರಭುಗೌಡ ಮದರಕಲ್ಲ, ಅಕ್ಕಮಹಾದೇವಿ ಕಟ್ಟಿಮನಿ, ಕಾಂಗ್ರೆಸ್ ಮುಖಂಡರಾದ ಸುರೇಶಧನಿ ನಾಡಗೌಡ, ಶರಣುಧನಿ ದೇಶಮುಖ, ಬಿ.ಎನ್. ಹಿಪ್ಪರಗಿ, ಸಂಗನಗೌಡ ಅಸ್ಕಿ, ಮಹಿಬೂಬ ಕೆಂಭಾವಿ, ಫಯಾಜ್‌ ಉತ್ನಾಳ, ಎಪಿಎಂಸಿ ವರ್ತಕರಾದ ಚಿಂತಪ್ಪಗೌಡ ಯಾಳಗಿ, ಮಹಾದೇವಪ್ಪ ಕುಂಬಾರ, ನಾಗಪ್ಪ ಚಿನಗುಡಿ, ಅಶೋಕ ಜಾಲವಾದಿ, ಬಾಬು ಹಜೇರಿ, ಅಶೋಕ ಚಿನಗುಡಿ, ಈರಣ್ಣ ಕಲ್ಬುರ್ಗಿ ಇತರರು ಉಪಸ್ಥಿತರಿದ್ದರು.


ಒಂದಿಂಚು ಜಾಗ ಇದ್ದರೆ ಶ್ರೀಖಾಸ್ಗತೇಶ್ವ ನನ್ನ ಭಸ್ಮ ಮಾಡಲಿ:

ನಾಡಗೌಡರು ನೂರಾರು ಕೋಟಿ ಗಳಿಸಿದ್ದಾರೆ. ತಾಳಿಕೋಟೆ ಸುತ್ತಮುತ್ತಲಿನ ಜಮೀನು ಕೊಂಡುಕೊಂಡಿದ್ದಾರೆ. ಹೀಗಾಗಿ ಮಿನಿ ವಿಧಾನಸೌಧವನ್ನು ಅಲ್ಲಿ ತೆಗೆದುಕೊಂಡು ಹೋಗಿದ್ದಾರೆಂದು ಕೆಲವೊಬ್ಬರು ಈಚೆಗೆ ಭಾಷಣ ಮಾಡಿದ್ದಾರೆ. ನಾನು ಶ್ರೀ ಖಾಸ್ಗತೇಶ್ವರರ ಮೇಲೆ ಪ್ರಮಾಣ ಮಾಡುತ್ತೇನೆ. ಆ ಭಾಗದಲ್ಲಿ ನನ್ನದು ಒಂದಿಂಚು ಜಾಗವೂ ಇಲ್ಲ. ಹಾಗೇನಾದರೂ ಇದ್ದರೆ ಶ್ರೀ ಖಾಸ್ಗತೇಶ ಭಸ್ಮ ಮಾಡಲಿ. ಬಾಯಿ ಚಪಲಕ್ಕೆ ಮಾತಾಡುವುದು ಮಾತಲ್ಲ, ಕಾಮಾಲೆ ಕಣ್ಣಿಗೆ ಯಾವಾಗಲೂ ಹಳದಿನೇ ಕಾಣೋದು. ಬೇಕಾದುದ್ದನ್ನು ಮಾತಾಡಿದರೆ ಜನ ಸಹಿಸುವುದಿಲ್ಲ, ಅಪ್ಪಾಜಿ ನಾಡಗೌಡರು ಇರುವವರೆಗೆ ಅಭಿವೃದ್ಧಿ ಎಂದಿಗೂ ಕುಂಠಿತವಾಗುವುದಿಲ್ಲ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡೋದು ಸರಿಯಲ್ಲ. ತಾಳಿಕೋಟೆ ಭಾಗದ ಅಭಿವೃದ್ಧಿ ವಿಷಯದಲ್ಲಿ ನಾನೆಂದೂ ತಾರತಮ್ಯ ಮಾಡಿಲ್ಲ. ಮಾಡುವ ಪ್ರಶ್ನೆಯೇ ಇಲ್ಲ, ಅಭಿವೃದ್ಧಿ ವಿಷಯವಾಗಿ ಎಲ್ಲ ಕೆಲಸಗಳು ಆಗಲಿವೆ. ಎರಡೂ ವರ್ಷಗಳಲ್ಲಿ ಸರ್ಕಾರಿ ಕಚೇರಿಗಳು ಪ್ರಾರಂಭಗೊಂಡು ಸಂಪೂರ್ಣ ಆಡಳಿತ ನಡೆಸುವಂತಹ ತಾಳಿಕೋಟೆ ತಾಲೂಕಾಗಿ ಮಾರ್ಪಡಲಿದೆ ಎಂದು ಶಾಸಕ ಸಿ.ಎಸ್‌. ನಾಡಗೌಡ ಭರವಸೆ ನೀಡಿದರು.