ಕೊಡವ ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವ ಕುರಿತು ಸರ್ಕಾರದಿಂದ ವರದಿ ಕೇಳಲಾಗಿದ್ದು, ಈ ಸಂಬಂಧ ಉಪ ಸಮಿತಿಗಳ ತಂಡವನ್ನು ರಚಿಸಿ, ಕಾನೂನಾತ್ಮಕ ಮಾನದಂಡದನ್ವಯ ವರದಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಲಹೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವ ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವ ಕುರಿತು ಸರ್ಕಾರದಿಂದ ವರದಿ ಕೇಳಲಾಗಿದ್ದು, ಈ ಸಂಬಂಧ ಉಪ ಸಮಿತಿಗಳ ತಂಡವನ್ನು ರಚಿಸಿ, ಕಾನೂನಾತ್ಮಕ ಮಾನದಂಡದನ್ವಯ ವರದಿ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಲಹೆ ನೀಡಿದ್ದಾರೆ. ಕೊಡವ ಭಾಷೆಯನ್ನು ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಕುರಿತು ವಿರಾಜಪೇಟೆಯ ಕೊಡವ ಸಮಾಜದ ಸಭಾಂಗಣದಲ್ಲಿ ಸೋಮವಾರ ನಡೆದ ಮಹತ್ವದ ಸಭೆಯಲ್ಲಿ ಅವರು ಮಾತನಾಡಿದರು.ಕೊಡವ ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆ ಮಾಡಬೇಕೆಂದು ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಈಗಾಗಲೇ 2 ಬಾರಿ ವರದಿ ಸಲ್ಲಿಸಲಾಗಿದೆ. ಹಾಗಾಗಿ ಕೊಡವ ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆ ಪ್ರಕ್ರಿಯೆಯನ್ನು ಶಿಸ್ತುಬದ್ಧವಾಗಿ ನಿಯಮಾನುಸಾರ ನಡೆಸಬೇಕು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಜೊತೆಗೆ ಕೊಡವ ಸಮಾಜಗಳು, ಭಾಷಾ ತಜ್ಞರು, ಸಾಹಿತಿಗಳು, ಬರಹಗಾರರು ಸೇರಿದಂತೆ ಎಲ್ಲರೂ ಒಟ್ಟುಗೂಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತಾಗಬೇಕು ಎಂದು ಹೇಳಿದರು.ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿದರೆ ಸಮುದಾಯ, ಜನಾಂಗ ಉಳಿಯಲು ಸಾಧ್ಯ. ಆದ್ದರಿಂದ ಈ ಬಗ್ಗೆ ಇನ್ನಷ್ಟು ಶ್ರಮ ವಹಿಸಬೇಕಿದೆ. ರಾಷ್ಟ್ರ ಮತ್ತು ರಾಜ್ಯಕ್ಕೆ ಕೊಡವ ಭಾಷಿಕರ ಕೊಡುಗೆ ಅಪಾರವಾಗಿದ್ದು, ಇದನ್ನು ಸ್ಮರಿಸುವಂತಾಗಬೇಕು. ಭಾಷೆಗಳು ಕಣ್ಮರೆಯಾಗಬಾರದು. ಎಲ್ಲ ಸಣ್ಣ ಸಣ್ಣ ಭಾಷೆಗಳು ಸಹ ಉಳಿಯಬೇಕು. ಭಾಷೆ ಉಳಿದಲ್ಲಿ ಸಂಸ್ಕೃತಿ ಜನಾಂಗ ಉಳಿಯಲಿದೆ. ಆ ನಿಟ್ಟಿನಲ್ಲಿ ಅವಕಾಶಗಳನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಸರ್ಕಾರ ಕೊಡವ ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಛೇದದ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ವರದಿ ಕೇಳಿದ್ದು, ಆ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಹೇಳಿದರು.ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು. ಪರದಂಡ ಕೆ. ಸುಬ್ರಮಣಿ ಮಾತನಾಡಿ, ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಮಾಹಿತಿ ನೀಡುವಂತಾಗಬೇಕು ಎಂದು ಕೋರಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ನಂದಿನೆರವಂಡ ನಾಚಪ್ಪ ಮಾತನಾಡಿ, ಕೊಡವ ಭಾಷೆಗೆ ಹಲವು ಶತಮಾನಗಳ ಇತಿಹಾಸವಿದ್ದು, ಕೊಡವ ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಆ ನಿಟ್ಟಿನಲ್ಲಿ ನಿರಂತರ ಹೋರಾಟ ಮುಂದುವರಿದೆ ಎಂದರು.ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಡಾ. ತೀತಿರ ರೇಖಾ ವಸಂತ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಮನೆಯಪಂಡ ಎ. ಪೊನ್ನಪ್ಪ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ಚಂಗಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ಮುಲ್ಲೆಂಗಡ ರೇವತಿ ಪೂವಯ್ಯ, ಬಾಚರಣಿಯಂಡ ಅಪ್ಪಣ್ಣ, ರಾಜು ಬೋಪಯ್ಯ, ಪ್ರಮುಖರಾದ ಪಿ.ಜಿ. ಅಯ್ಯಪ್ಪ, ಕೊಡವ ಭಾಷಿಕ ಜನಾಂಗಗಳ ಪ್ರಮುಖರಾದ ಡಾ. ಮೇಚಿರ ಸುಭಾಷ್ ನಾಣಯ್ಯ ಮತ್ತಿತರರು ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಕೊಡಗು ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ, ವಿವಿಧ ಕೊಡವ ಸಮಾಜದ ಅಧ್ಯಕ್ಷರು, ಬರಹಗಾರರು, ಸಾಹಿತಿಗಳು, ಭಾಷಾ ತಜ್ಞರು, ಅಕಾಡೆಮಿ ಸದಸ್ಯರಾದ ಸಂಜು ಕಾವೇರಪ್ಪ, ಪಿ.ಕೆ. ಕುಟ್ಟಪ್ಪ, ದಿನು ಬೋಜಪ್ಪ, ಕಂಬೆಯಂಡ ಡೀನಾ ಬೋಜಣ್ಣ, ನಾಯಂದಿರ ಶಿವಾಜಿ, ಕುಡಿಯರ ಕಾವೇರಪ್ಪ, ಪೊನ್ನಿರ ಗಗನ್ ಉಪಸ್ಥಿತರಿದ್ದರು.ನಾಪಂಡ ಗಣೇಶ್ ಸ್ವಾಗತಿಸಿದರು. ಮೊಣ್ಣಂಡ ಶೋಭ ಸುಬ್ಬಯ್ಯ ಪ್ರಾರ್ಥಿಸಿದರು. ಸದಸ್ಯರಾದ ಪುಪ್ಪು ತಿಮ್ಮಯ್ಯ ವಂದಿಸಿದರು.ಕೊಡವ ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆ ಪ್ರಕ್ರಿಯೆಯನ್ನು ಶಿಸ್ತುಬದ್ಧವಾಗಿ ನಿಯಮಾನುಸಾರದಂತೆ ನಡೆಸಬೇಕು. ಮುಖ್ಯಮಂತ್ರಿಯವರಿಗೆ ಕೊಡವ ಭಾಷೆ ಬಗ್ಗೆ ವಿಶೇಷ ಕಾಳಜಿ ಇದ್ದು, ಕೊಡವ ಭಾಷೆ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆ ಬಗ್ಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಹಾಗೆಯೇ ಮುಖ್ಯಮಂತ್ರಿ ಅವರ ಭೇಟಿಗೆ ನಿಯೋಗ ಕರೆದುಕೊಂಡು ಹೋಗಲಾಗುವುದು.
-ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕರುಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದರಿಂದ ಹಲವು ಪ್ರಯೋಜನಗಳಿದ್ದು, ವಿಶೇಷ ಸ್ಥಾನಮಾನ ಹಾಗೂ ಅಧಿಕೃತ ಮನ್ನಣೆ ದೊರೆಯಲಿದೆ.
ಕೊಡವ ಭಾಷಿಕರ ಸೇವೆಗಳು, ಕೊಡವ ಸೈನಿಕರು, ರಾಜಕೀಯ, ವೈದ್ಯಕೀಯ, ಕ್ರೀಡೆ, ಕೊಡವ ಹಾಕಿ ಹಬ್ಬ ಹೀಗೆ ಹಲವು ರೀತಿಯ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗುವುದು.-ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ