ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಯಾವುದೇ ಒಂದು ಗ್ರಾಮಗಳು ಅಭಿವೃದ್ಧಿಗೊಳ್ಳಬೇಕೆಂದರೆ ಮೊದಲಿಗೆ ಆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಪರಿಪೂರ್ಣವಾಗಿರಬೇಕು. ಹಾಗಿದ್ದರೆ ಮಾತ್ರ ಗ್ರಾಮಗಳು ಅಭಿವೃದ್ಧಿ ಮತ್ತು ಕೃಷಿಕರು ತಮ್ಮ ಕೃಷಿ ಕಾಯಕವನ್ನು ಸುಸಲಿತವಾಗಿ ನಿರ್ವಹಿಸಲು ಸಹಕಾರಿಯಾಗುತ್ತದೆ.ಗ್ರಾಮೀಣ ಪ್ರದೇಶದ ರಸ್ತೆಗಳು ಹೊಂಡಗುಂಡಿಗಳಿಂದ ಕೂಡಿರುವುದರಿಂದ ಇಲ್ಲಿನ ಕೃಷಿಕರು ತಮ್ಮ ಕೃಷಿ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಿರ್ವಹಿಸಲು ಸಾಕಷ್ಟು ದುಬಾರಿ ವೆಚ್ಚಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ನಾಕೂರು ಶಿರಂಗಾಲ ಗ್ರಾಪಂ ಕಡೆಯಿಂದ ಗುಂಡುಗುಟ್ಟಿ ಮಾದಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದೊಡ್ಡ ಗುಂಡಿಗಳಿಂದ ವಾಹನಗಳು ಈ ಭಾಗದಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಈ ಭಾಗದಲ್ಲಿ ನೂತನವಾದ ಜೈನ ಮಂದಿರ ನಿರ್ಮಾಣಗೊಳ್ಳುತ್ತಿದ್ದು ನಿತ್ಯ ನೂರಾರು ಪ್ರವಾಸಿಗಾರು ದೇವಾಲಯದ ವೀಕ್ಷಣೆಗೆ ತೆರಳುತ್ತಾರೆ. ಆದರೆ ರಸ್ತೆಯಲ್ಲಿ ವಾಹನದ ದಟ್ಟಣೆ ಹೆಚ್ಚಾಗಿದೆ ವಾಹನಗಳಲ್ಲಿ ಈ ರಸ್ತೆಯಲ್ಲಿ ಸಂಚರಿಸಿದರೆ ನೇರವಾಗಿ ವರ್ಕ್ ಶಾಪ್‌ಗೆ ತೆರಳುವ ಪರಿಸ್ಥಿತಿ ಇದೆ ಎಂದು ಈ ಭಾಗದ ನಿವಾಸಿಗಳು ಅಳಲು ತೊಡಿಕೊಂಡಿದ್ದಾರೆ.
ಈ ವ್ಯಾಪ್ತಿಯು ೨ ಗ್ರಾಪಂಗಳನ್ನೊಳಗೊಂಡಿದೆ. ನಾಕೂರು ಶಿರಂಗಾಲ ಹಾಗೂ ಹರದೂರು ಗ್ರಾಪಂ ಈ ರಸ್ತೆಗೆ ಕಾಯಕಲ್ಪ ಯಾವಾಗ ದೊರಕುತ್ತದೆ ಎಂದು ಇಲ್ಲಿನ ನಿವಾಸಿಗಳು ಕಾಯುತ್ತಿದ್ದಾರೆ. ಈ ಭಾಗದಿಂದ ನಿತ್ಯ ನೂರಾರೂ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ನಡೆದುಕೊಂಡೇ ತೆರಳಬೇಕಾಗಿದೆ. ಸುತ್ತ ಮುತ್ತಲ್ಲೂ ಕೃಷಿ ಅವಲಂಭಿತ ಪ್ರದೇಶವಾಗಿದೆ. ಸುಂಟಿಕೊಪ್ಪ ಮಾದಾಪುರ ಸೋಮವಾರಪೇಟೆ ರಾಜ್ಯ ಹೆದ್ದಾರಿಯು ಸಂಚಾರಕ್ಕೆ ಆಡಚಣೆ ಉಂಟಾದರೆ ಬದಲಿ ಸಂಪರ್ಕ ರಸ್ತೆಯನ್ನಾಗಿ ಉಪಯೋಗಿಸುವ ದಿಸೆಯಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ ಈ ರಸ್ತೆ ಡಾಂಬರ್ ಸಂಪೂರ್ಣ ಕಿತ್ತು ಹಳ್ಳದಂತಾಗಿದೆ. ಈ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವ ಚಾಲಕರ ಗೋಳು ಹೇಳ ತೀರದಾಗಿದೆ. ಸಣ್ಣ ಗುಂಡಿಯನ್ನು ತಪ್ಪಿಸಲು ಹೋಗಿ ದೊಡ್ಡ ಗುಂಡಿ ಬೀಳುವಂತಾಗಿದೆ. ರಸ್ತೆ ಕಿರಿದಾಗಿರುವುದರಿಂದ ಎರಡು ವಾಹನಗಳು ಎದುರುಬದುರಾದರೆ ಮತ್ತಷ್ಟು ಸಮಸ್ಯೆ ಎದುರಿಬೇಕಾಗುತ್ತದೆ ಎಂದು ಈ ಭಾಗದ ಚಾಲಕರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.ಈ ಭಾಗದಲ್ಲಿ ಜನರಿಗೆ ಆರೋಗ್ಯ ಸಮಸ್ಯೆಯಾದರೆ ಭಾರಿ ಸಮಸ್ಯೆ ಎದುರಿಸಬೇಕಾಗಿದೆ. ದುಪ್ಪಟ್ಟು ಹಣ ನೀಡುತ್ತೇವೆ ಎಂದರೂ ಈ ರಸ್ತೆಯಲ್ಲಿ ಸಂಚರಿಸಲು ಬಾಡಿಗೆ ವಾಹನದಾರರು ಬರಲು ಹಿಂಜರಿಯುತ್ತಾರೆ. ಕಳೆದ ೬ ವರ್ಷಗಳಿಂದ ಬೃಹತ್ ಜೈನ ಮಂದಿರದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈ ಮಂದಿರಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ದೇವಾಲಯ ವೀಕ್ಷಣೆಗೆ ಬರುತ್ತಾರೆ. ಅದೆಷ್ಟೋ ವಾಹನಗಳು ಕೆಟ್ಟು ನಿಂತ ಪ್ರಸಂಗಗಳನ್ನು ಈ ಭಾಗದ ನಿವಾಸಿಗಳು ಮೆಲಕು ಹಾಕಿಕೊಳ್ಳುತ್ತಾರೆ.
ಈ ಭಾಗದ ವಿದ್ಯಾರ್ಥಿಗಳ ಪಾಡು ಹೇಳ ತೀರದಾಗಿದೆ. ಸಂಬಂಧಿಸಿದ ಇಲಾಖೆಯವರು, ಜನ ಪ್ರತಿನಿಧಿಗಳು ಗಮನಹರಿಸಿ ಕನಿಷ್ಠ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗುವಂತೆ ಈ ಭಾಗದ ಜನರ ಆಗ್ರಹವಾಗಿದೆ.
ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯ ಜನತೆ ಈ ರಸ್ತೆ ಮೂಲಕವೇ ಮಾದಾಪುರ ಸೇರಿದಂತೆ ಸುತ್ತ ಮುತ್ತಲ್ಲ ಊರುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಮಕ್ಕಳು ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾರೆ. ಡಾಂಬರು ಕಿತ್ತು ಹೋಗಿ ಹೊಂಡ ಗುಂಡಿಗಳಿಂದ ಕೂಡಿದ್ದು ಇದಕ್ಕೆ ಕಾಯಕಲ್ಪ ಒದಗಿಸುವ ಕಾರ್ಯವಾಗಬೇಕು.
-ಕೆ.ಪಿ. ವಸಂತ್ ಕುಮಾರ್, ನಾಕೂರು ಶಿರಂಗಾಲ ಗ್ರಾಪಂ ಮಾಜಿ ಉಪಾಧ್ಯಕ್ಷ ಗ್ರಾಪಂ ವ್ಯಾಪ್ತಿಗೊಳಪಟ್ಟಿರುವ ಈ ಸಂಪರ್ಕ ರಸ್ತೆಗೆ ಈ ಭಾಗದಲ್ಲಿ ವಾಹನಗಳನ್ನು ಚಲಾಯಿಸುವುದು ಕಷ್ಟ ಸಾಧ್ಯ. ಶಾಲಾ ಮಕ್ಕಳ ವಾಹನಗಳ ಈ ಭಾಗಕ್ಕೆ ಆಗಮಿಸಲು ಹಿಂದೇಟು ಹಾಕುವುದರಿಂದ ಮಕ್ಕಳು ನಡೆದುಕೊಂಡು ಮುಖ್ಯ ರಸ್ತೆಗೆ ತೆರಳಬೇಕಾಗಿದ್ದು, ಪೋಷಕರು ಮಕ್ಕಳನ್ನು ಕರೆದುಕೊಂಡು ಕಾಲ್ನನಡಿಗೆಯಲ್ಲೇ ಮುಖ್ಯ ರಸ್ತೆಗೆ ಕರೆ ತರುವ ಪರಿಸ್ಥಿತಿ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ರಸ್ತೆಗೆ ಕಾಯಕಲ್ಪ ಒದಗಿಸಲು ಮುಂದಾಗಬೇಕು.-ಕುಮಾರ, ವಾಹನ ಚಾಲಕ
...ಕೋಟ್.... ಸುಂಟಿಕೊಪ್ಪ ಮಾದಾಪುರ ರಸ್ತೆ ಸಂಚಾರಕ್ಕೆ ತೊಡಕು ಉಂಟಾದರೆ ಬದಲಿ ಸಂಪರ್ಕ ಮುಖ್ಯ ರಸ್ತೆ ಇದಾಗಿದ್ದು, ಈ ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿದೆ. ಈ ರಸ್ತೆ ಸಂಪೂರ್ಣ ಕೃಷಿ ಆಧರಿತ ಪ್ರದೇಶವಾಗಿದೆ. ಕೃಷಿಕರು ಚಟುವಟಿಕೆಗಳಿಗೆ ಬೇಕಾದ ಗೊಬ್ಬರ ಸೇರಿದಂತೆ ಸಾಮಗ್ರಿಗಳನ್ನು ಸಾಗಾಟ ಮಾಡಲು ಪ್ರಮುಖ ರಸ್ತೆಯಾಗಿದೆ. ಇದನ್ನು ಅಭಿವೃದ್ಧಿಗೊಳಿಸಬೇಕು.-ಪಿ.ಎಫ್.ಸಬಾಸ್ಟೀನ್, ಸುಂಟಿಕೊಪ್ಪ ಗ್ರಾಪಂ ಮಾಜಿ ಅಧ್ಯಕ್ಷ
ಈಗಾಗಲೇ ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗಿದ್ದು, ರಸ್ತೆ ವಿಸ್ತರಣೆ ಕಾಮಗಾರಿ ಸುಸೂತ್ರವಾಗಿ ನಡೆಸುವ ದಿಸೆಯಲ್ಲಿ ನಮ್ಮ ವ್ಯಾಪ್ತಿಯಲ್ಲಿ ಬರುವ ೨ ಬದಿಯ ತೋಟದ ಬೇಲಿಯನ್ನು ತೆರವುಗೊಳಿಸುವಂತೆ ಸಂಬಂಧಿಸಿದ ತೋಟ ಮತ್ತು ಜಾಗದ ಮಾಲೀಕರಿಗೆ ಪಂಚಾಯಿತಿ ವತಿಯಿಂದ ನೋಟಿಸ್ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರಗೊಳ್ಳಲಿದೆ.-ಆಸ್ಮ, ನಾಕೂರು ಶಿರಂಗಾಲ ಗ್ರಾಪಂ ಅಭಿವೃದ್ಧಿ ಅಧಿಕಾರಿ