ಸುಂಟಿಕೊಪ್ಪದಲ್ಲಿ ಬಸ್ ನಿಲ್ದಾಣ ಮತ್ತು ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣದ ಹಿನ್ನಲೆಯಲ್ಲಿ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ವಾರದ ಸಂತೆ ಭಾನುವಾರ ಮಾರುಕಟ್ಟೆ ವ್ಯಾಪಾರಸ್ಥರು ಮತ್ತು ಗ್ರಾಹಕರು ಹಾಗೂ ನಾಗರಿಕರೊಂದಿಗೆ ಚರ್ಚೆ ನಡೆಸಿದರು.

ಕನ್ನಡಪ್ರಭವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪದಲ್ಲಿ ಬಸ್ ನಿಲ್ದಾಣ ಮತ್ತು ಅತ್ಯಾಧುನಿಕ ಮಾರುಕಟ್ಟೆ ನಿರ್ಮಾಣದ ಹಿನ್ನಲೆಯಲ್ಲಿ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ವಾರದ ಸಂತೆ ಭಾನುವಾರ ಮಾರುಕಟ್ಟೆ ವ್ಯಾಪಾರಸ್ಥರು ಮತ್ತು ಗ್ರಾಹಕರು ಹಾಗೂ ನಾಗರಿಕರೊಂದಿಗೆ ಚರ್ಚೆ ನಡೆಸಿದರು.

ಭಾನುವಾರ ಮಧ್ಯಾಹ್ನ ಸುಂಟಿಕೊಪ್ಪದ ಲೋಟಾಸ್ ಬಡಾವಣೆಯಲ್ಲಿ ನೆನಗುದ್ದಿಗೆ ಬಿದ್ದಿರುವ ಸಂತೆ ಮಾರುಕಟ್ಟೆಯನ್ನು ವೀಕ್ಷಿಸಿ ಮಾತನಾಡಿದರು. ಜನಾಭಿಪ್ರಾಯ ಸಭೆ ನಡೆಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕೇಶ್ ಅವರಿಗೆ ನಿರ್ದೇಶನ ನೀಡಿದರು. ೨೧ ರೊಳಗೆ ಸಭೆಯನ್ನು ನಡೆಸುವಂತೆ ಗಡುವು ನೀಡಿದರು. ಆ ಸಭೆಯ ಅಭಿಪ್ರಾಯಗಳನ್ನು ಕ್ರೋಡಿಕರಿಸಿ ವಿಶೇಷ ಗ್ರಾಮ ಸಭೆ ಕರೆಯುವಂತೆ ಅವರು ಸೂಚಿಸಿದರು. ೨ ಸಭೆಗಳಲ್ಲಿ ತಾವು ಪಾಲ್ಗೊಳ್ಳುವುದಾಗಿ ಶಾಸಕರು ಸ್ಪಷ್ಟಪಡಿಸಿದರು.

ಈಗಾಗಲೇ ಸಾಕಷ್ಟು ಅನುದಾನವನ್ನು ನೂತನ ಮಾರುಕಟ್ಟೆಗೆ ವೆಚ್ಚ ಮಾಡಲಾಗಿದೆ. ಆದರೆ ಈ ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಗಳು ಇನ್ನಷ್ಟೇ ಆಗಬೇಕಾಗಿದ್ದು, ಇಲ್ಲಿಗೆ ಸ್ಥಳಾಂತರಗೊಳ್ಳಲು ವ್ಯಾಪಾರಸ್ಥರು ಗ್ರಾಹಕರು ಮತ್ತು ನಾಗರಿಕರಲ್ಲಿ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಮುಂದಿನ ೨ ಸಭೆಗಳಲ್ಲಿ ತೆಗೆದುಕೊಳ್ಳುವ ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದೆಂದು ಶಾಸಕರು ನುಡಿದರು.

ಮೀನು ಮತ್ತು ಮಾಂಸ ಮಾರುಕಟ್ಟೆ ಹರಾಜಾಗದೇ ಪಂಚಾಯಿತಿ ಆದಾಯ ಕುಂಠಿತವಾಗಿರುವ ಬಗ್ಗೆ ಶಾಸಕರ ಗಮನ ಸೆಳೆದಾಗ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ೬ ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದ್ದು, ಇವರೆಲ್ಲಾರಿಗೂ ಜೀವನಾಡಿಯಾಗಿ ಕೆಲಸ ನಿರ್ವಹಿಸುತ್ತಿರುವ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ಧರ್ಜೆಗೇರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ೨೭೫ ಸುಂಟಿಕೊಪ್ಪದ ಮಧ್ಯಭಾಗದಲ್ಲಿ ಹಾದು ಹೋಗಿದ್ದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ವ್ಯವಹರಿಸುವುದಾಗಿ ಶಾಸಕರು ಭರವಸೆ ನೀಡಿದರು.

ಪಂಚಾಯಿತಿ ವತಿಯಿಂದ ನೂತನ ಮಾರುಕಟ್ಟೆಯ ಬಗ್ಗೆ ಕಾರ್ಯಕ್ರಮ ರೂಪಿಸಬೇಕಾಗಿದ್ದು ನೂತನ ಮಾರುಕಟ್ಟೆಗೆ ಸ್ಥಳಾಂತರಗೊಂಡ ನಂತರವೇ ಹಳೆಯ ಮಾರುಕಟ್ಟೆಯನ್ನು ಬಸ್‌ನಿಲ್ದಾಣವಾಗಿ ಪರಿವರ್ತಿಸಬಹುದು ಒಂದು ವೇಳೆ ಕೆಎಸ್‌ಆರ್‌ಟಿಸಿಗೆ ಈ ಜಾಗವನ್ನು ನೀಡಿದರೆ ಖಾಸಗಿ ಬಸ್‌ಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ. ಪಂಚಾಯಿತಿ ವತಿಯಿಂದ ಬಸ್ ನಿಲ್ದಾಣ ರೂಪುಗೊಂಡರೆ ಖಾಸಗಿ ಮತ್ತು ಸರ್ಕಾರಿ ಬಸ್ ನಿಲುಗಡೆಗೆ ಅವಕಾಶವಿರುತ್ತದೆ. ರಾಜ್ಯ ಸಾರಿಗೆ ಸಂಸ್ಥೆಯವರಿಗೆ ಬಿಟ್ಟು ಕೊಟ್ಟಲ್ಲಿ ಪಂಚಾಯಿತಿ ಆದಾಯಕ್ಕೆ ಧಕ್ಕೆಯಾಗಲಿದ್ದು ಖಾಸಗಿ ಬಸ್‌ ಪ್ರ ವೇಶ ನಿಷೇಧಗೊಳ್ಳಲಿದೆ ಎಂದು ತಿಳಿಸಿದರು. ಈ ಬಗ್ಗೆ ಗ್ರಾಮಸ್ಥರು ಸಭೆ ನಡೆಸಿ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಸುಂಟಿಕೊಪ್ಪ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಶಾಸಕರು ಮನವಿ ಮಾಡಿದರು.

ಈ ಸಂದರ್ಭ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್, ಸುಂಟಿಕೊಪ್ಪ ನಗರ ಕಾಂಗ್ರೆಸ್ ರಫೀಕ್ ಖಾನ್, ಸುಂಟಿಕೊಪ್ಪ ಕಾಂಗ್ರೆಸ್ ಹೋಬಳಿ ಅಧ್ಯಕ್ಷ ರಜಾಕ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಅಬ್ಧುಲ್ ಹಕೀಂ, ಗ್ರಾ.ಪಂ ಮಾಜಿ ಅಧ್ಯಕ್ಷರುಗಳಾದ ಶಿವಮ್ಮ ಮಹೇಶ್, ಕೆ.ಇ.ಕರೀಂ, ಪಿ.ಎಫ್.ಸಬಾಸ್ಟೀನ್, ಎಂ.ಎ.ಉಸ್ಮಾನ್, ಮಾಜಿ ಸದಸ್ಯರುಗಳಾದ ಜೀನಾಸುದ್ಧಿನ್, ಕೆ.ಎಂ.ಆಲಿಕುಟ್ಟಿ, ಪಕ್ಷದ ಮುಖಂಡರುಗಳಾದ ಅಬ್ಧುಲ್ ಅಜೀಜ್, ಯಂಕನ ಶ್ರೀರಾಮ್, ಹಿರಿಯ ವರ್ತಕರಾದ ಎಂ.ಎ.ವಸಂತ,ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ, ಗ್ರೇಸಿ ಡೆವಿಡ್, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜ್ ಹಾಗೂ ಗ್ರಾಮಸ್ಥರು ಇದ್ದರು.