ಸಾರಾಂಶ
ಗಜೇಂದ್ರಗಡ: ಪಟ್ಟಣದ ಮಾರುಕಟ್ಟೆ ವ್ಯವಸ್ಥೆ ಬದಲಾವಣೆಯಿಂದ ಬಡ ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಪುರಸಭೆ ಮಾಜಿ ಸದಸ್ಯ ಎಂ.ಎಸ್. ಹಡಪದ ಹೇಳಿದರು.
ಪಟ್ಟಣದ ಸೇವಾಲಾಲ್ ಕಲ್ಯಾಣ ಮಂಟಪದಲ್ಲಿ ರಾಜ್ಯ ಬೀದಿ ಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಸಂಯೋಜಿತ ಹಾಗೂ ತಾಲೂಕು ಬೀದಿ ಬದಿ ವ್ಯಾಪಾರಸ್ಥರ ಸಮಾವೇಶದಲ್ಲಿ ಮಾತನಾಡಿದರು. ಜಿಲ್ಲೆಯ ವಾಣಿಜ್ಯ ಕೇಂದ್ರವಾಗಿರುವ ಪಟ್ಟಣದಲ್ಲಿ ವ್ಯಾಪಾರ-ವಹಿವಾಟು ಸ್ಥಳೀಯರು ಸೇರಿ ಸುತ್ತಲಿನ ಗ್ರಾಮಗಳ ರೈತರು ಹಾಗೂ ವ್ಯಾಪಾರಿಗಳಿಗೆ ಜೀವಾಳವಾಗಿದೆ. ಆದರೆ ಮಾರುಕಟ್ಟೆ ಸ್ಥಳಾಂತರ ಭಾಗವಾಗಿ ಎಷ್ಟೋ ಬಡ ಕುಟುಂಬಗಳು ಬಿದಿಗೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರಿಪಡಿಸಬೇಕು ಎಂದು ಹೇಳಿದರು.ಮುಖಂಡ ಬಾಲು ರಾಠೋಡ ಮಾತನಾಡಿ, ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ವಹಿವಾಟಿಗೆ ಅಧಿಕಾರಿಗಳು ನಿರ್ಬಂಧ ಹಾಕಿದ್ದಾರೆ. ಪರಿಣಾಮ ಸಣ್ಣಪುಟ್ಟ ವ್ಯಾಪಾರಸ್ಥರ ಬದುಕಿನ ಮೇಲೆ ಬರೆ ಎಳೆದಂತಾಗುತ್ತಿದೆ. ಹೀಗಾಗಿ ಫುಟ್‌ಪಾತ್ ಮೇಲೆ ವ್ಯಾಪಾರಕ್ಕೆ ಅವಕಾಶ ಜತೆಗೆ ಬೀದಿ ಬದಿ ಕಾಯ್ದೆ ಅಡಿ ವ್ಯಾಪಾರಸ್ಥರಿಗೆ ಆಡಳಿತ ಶಾಶ್ವತ ಸ್ಥಳಾವಕಾಶ ನೀಡಬೇಕು ಎಂದರು.
ನಿರ್ಣಯಗಳು: ಜೋಡು ರಸ್ತೆಯಲ್ಲಿ ಸೇರಿ ಪಟ್ಟಣದ ನಾಲ್ಕು ರಸ್ತೆಗಳಲ್ಲಿ ೨೦೦೪ ಕಾಯ್ದೆ ಅಡಿಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಸಂಬಂಧಪಟ್ಟ ಶಾಸಕರು, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ಎಲ್ಲ ವ್ಯಾಪಾರ ನಡುವೆ ಒಂದು ಜಂಟಿ ಸಭೆ ನಡೆಸಿ, ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸಲಾಗುವುದು. ತರಕಾರಿ ಮಾರುಕಟ್ಟೆಗೆ ಪ್ರತ್ಯೇಕ ಸ್ಥಳ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಹಣ್ಣು, ಎಗ್‌ರೈಸ್, ಕಬ್ಬಿನ ಹಾಲು, ಬಟ್ಟೆ ವ್ಯಾಪಾರ, ಚಪ್ಪಲಿ, ಎಲೆ ಅಡಿಕೆ ಸೇರಿ ಇತರ ವ್ಯಾಪಾರಿಗಳಿಗೆ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಎಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು.ಈ ವೇಳೆ ಬೀದಿ ಬದಿ ವ್ಯಾಪಾರಸ್ಥರ ತಾಲೂಕು ಸಮಾವೇಶದಲ್ಲಿ ಅಧ್ಯಕ್ಷರನ್ನಾಗಿ ಶಾಮೀದಲಿಸಾಬ್ ದಿಂಡವಾಡ, ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ, ಪದಾಧಿಕಾರಿಗಳಾಗಿ ಚೌಡಮ್ಮ ಯಲ್ಪು, ಮೈಬೂಸಾಬ್ ಮಾಲ್ದಾರ, ಮುತ್ತಣ್ಣ ರಾಠೋಡ, ಅಂಬರೇಶ ಚವ್ಹಾಣ, ಮಾರುತಿ ಗೊಂದಳೆ, ಮುತ್ತಣ್ಣ ತೇಜಪ್ಪ ರಾಠೋಡ, ವಿಷ್ಣು ಚಂದುಕರ, ಮಹಾಂತೇಶ ಹಿರೇಮಠ, ಪರಶುರಾಮ ಬಡಿಗೇರ ಆಯ್ಕೆಯಾದರು.
ಗಂಗಾಧರ ಸತ್ಯನ್ನವರ, ಯಮನೂರಸಾಬ್ ಗಾದಿ, ಮರ್ತುಜಾ ದಿಂಡವಾಡ, ಅಶೋಕ ಚವ್ಹಾಣ, ಕಳಕಪ್ಪ ಮಾಳೋತ್ತರ, ರಾಜುಪಾಲ, ಅಲ್ಲಾಬಕ್ಷಿ ಮುಚ್ಚಾಲಿ, ಸುರೇಶ್ ಅಕ್ಕಸಾಲಿ, ನಾಗರಾಜ ಅಜ್ಮೀರ, ದೇವಕ್ಕ ರಾಠೋಡ, ಭದ್ರೇಶ್ ರಾಠೋಡ ಸೇರಿ ೩೦ ಜನರ ಸಮಿತಿ ರಚಿಸಲಾಯಿತು. ಮೆಹಬೂಬ್ ಹವಾಲ್ದಾರ್, ಚಂದ್ರು ರಾಠೋಡ ಸೇರಿ ಇತರರು ಇದ್ದರು.