ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಈ ಬಾರಿಯ ಯುಗಾದಿಗೆ ಶ್ರೀ ಸಿದ್ಧೇಶ್ವರ ಸಂಸ್ಥೆಯಿಂದ ನಿರಂತರ ಅನ್ನ ದಾಸೋಹ ಸೇವೆ ಆರಂಭಿಸಲಾಗುವುದು ಎಂದು ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಿಸಿದರು.ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಸಿದ್ದೇಶ್ವರ ಶಿವಾನುಭವ ಸಮುದಾಯ ಭವನದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆ ಸಂಕ್ರಮಣ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಸಿದ್ದೇಶ್ವರ ಶಿವಾನುಭವ ಸಮುದಾಯ ಭವನವನ್ನು ಹಿಂದೂಗಳ ಹೊಸ ವರ್ಷವಾಗಿರುವ ಯುಗಾದಿ ದಿನ ಲೋಕಾರ್ಪಣೆಗೊಳಿಸಲಾಗುತ್ತಿದೆ. ಅಂದೇ ಅನ್ನ ದಾಸೋಹ ಸೇವೆ ಕೂಡ ಆರಂಭಿಸಲಾಗುವುದು. ಇದರಿಂದ ಪಾದಯಾತ್ರಿಗಳಿಗೆ, ಶೈಕ್ಷಣಿಕ ಪ್ರವಾಸಕ್ಕೆ ಬರುವ ಮಕ್ಕಳಿಗೆ ಅನುಕೂಲವಾಗಲಿದೆ. ಶಿವಾನುಭವ ಸಮುದಾಯ ಭವನದ ಮೇಲೆ ಯಾತ್ರಿ ನಿವಾಸ ಕೂಡ ಆರಂಭಿಸಲಾಗುವುದು ಎಂದು ತಿಳಿಸಿದರು.
ದಾನಿಗಳು ಮತ್ತು ಪ್ರಾಮಾಣಿಕ ಆಡಳಿತ ಮಂಡಳಿಯ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತಿ. ನಮ್ಮ ಹಿರಿಯರು ಮಾಡಿದ್ದ ಆಸ್ತಿಯ 10ರಷ್ಟು ಸಂಸ್ಥೆಯ ಆಸ್ತಿಯನ್ನು ಹೆಚ್ಚಿಸಿರುವ ಹೆಮ್ಮೆ ನನಗಿದೆ. ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಗೋ ಶಾಲೆ ಮಾಡಲಾಗಿದೆ. ಗೋ ಸೇವೆ ಜೊತೆಗೆ ಸಂಸ್ಥೆಯಿಂದ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ಜೆಎಸ್ಎಸ್ ಆಸ್ಪತ್ರೆಯಲ್ಲಿ ಈ ವರ್ಷ ನರ್ಸಿಂಗ್ ಕಾಲೇಜು ಆರಂಭಗೊಂಡಿದ್ದು, ಮುಂದಿನ ಎರಡು ವರ್ಷದಲ್ಲಿ ಮೆಡಿಕಲ್ ಕಾಲೇಜು ಸಹ ಆರಂಭಿಸಲಾಗುವುದು ಎಂದರು.ಜನರ ಸಹಭಾಗಿತ್ವದಲ್ಲಿ ಜಾತ್ರೆ
ಕೋರೊನಾ ಹಿನ್ನೆಲೆಯಲ್ಲಿ ಕಳೆದ ಎರಡ್ಮೂರು ಜಾತ್ರೆಗಳನ್ನು ಸರಳವಾಗಿ ಮಾಡಬೇಕಾಯಿತು. ಮೊದಲಿನ ವೈಭವಕ್ಕೆ ಕೊಂಡೊಯ್ಯಲಾಗುವುದು. ನಂದಿಕೋಲುಗಳ ಮೆರವಣಿಗೆ ಅತ್ಯಂತ ಶಿಸ್ತಿನಿಂದ ಹಾಗೂ ಜನರು ಮರಳಿ ಮನೆಗೆ ಬೇಗ ತೆರಳಲು ಅನುಕೂಲವಾಗುವಂತೆ ರಾತ್ರಿ 10 ಗಂಟೆ ಒಳಗಾಗಿ ದೇವಸ್ಥಾನಕ್ಕೆ ಬರುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಜನರು ವೀಕ್ಷಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರೆ ಮೆರವಣಿಗೆಗೆ ಮೆರಗು ಬರುತ್ತದೆ ಎಂದು ಹೇಳಿದರು.ಈ ವೇಳೆ ಜಾತ್ರಾ ಸಮಿತಿಯ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ಸಿದ್ರಾಮಪ್ಪ ಉಪ್ಪಿನ, ಸಂಸ್ಥೆ ಪದಾಧಿಕಾರಿಗಳಾದ ಸಂಗನಬಸಪ್ಪ ಸಜ್ಜನ, ಸದಾನಂದ ದೇಸಾಯಿ, ಬಸವರಾಜ ಸುಗೂರ, ಮಲ್ಲಿಕಾರ್ಜುನ ಸಜ್ಜನ, ಶಿವಾನಂದ ನೀಲಾ, ನಿಂಗೊಂಡಪ್ಪ ಗೋಲಾಯಿ, ಮಡಿವಾಳಪ್ಪ ಕರಡಿ, ವಿಜಯಕುಮಾರ ಡೋಣಿ, ಸುಧೀರ ಚಿಂಚಲಿ, ಸದಾಶಿವ ಗುಡ್ಡೊಡಗಿ, ಚಂದ್ರಪ್ಪ ಹುಂಡೆಕಾರ, ನಾಗಪ್ಪ ಗುಗ್ಗರಿ, ಸಾಯಿಬಣ್ಣ ಭೋವಿ, ಮಲಕಪ್ಪ ಗಾಣಿಗೇರ, ರಮೇಶ ಹಳ್ಳದ, ರಾಮನಗೌಡ ಪಾಟೀಲ ಯತ್ನಾಳ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಮುಖಂಡರಾದ ಗುರು ಗಚ್ಚಿನಮಠ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಮಳುಗೌಡ ಪಾಟೀಲ, ರಾಹುಲ ಜಾಧವ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಪಾಂಡು ಸಾಹುಕಾರ ದೊಡಮನಿ, ವಿಕ್ರಮ ಗಾಯಕವಾಡ, ಬಸವರಾಜ ಬಿರಾದಾರ ಮತ್ತಿತರರು ಇದ್ದರು.
ಕೋಟ್107ನೇ ಸಿದ್ದೇಶ್ವರರ ಸಂಕ್ರಮಣ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕರ ದೇಣಿಗೆಯಿಂದ ಜಾತ್ರೆ ಮಾಡಿದರೆ, ನಿಜವಾಗಿಯೂ ನಮ್ಮೂರ ಜಾತ್ರೆ ಆಗಲಿದೆ. ಜನರ ಸಹಭಾಗಿತ್ವ ಇರಬೇಕು. ಹೀಗಾಗಿ ಎಲ್ಲರೂ ಸೇವೆಯಲ್ಲಿ ತೊಡಗಿಕೊಂಡು, ಪ್ರಾಮಾಣಿಕವಾಗಿ ಶ್ರಮವಹಿಸಿದರೆ ಪುಣ್ಯ ಪ್ರಾಪ್ತಿಯಾಗಲಿದ್ದು, ಜಾತ್ರೆಗಳಿಂದ ಧಾರ್ಮಿಕ ಕಾರ್ಯದ ಜತೆಗೆ ವ್ಯಾಪಾರ ಹೆಚ್ಚುತ್ತದೆ, ಜನರ ಸಂಪರ್ಕ ವೃದ್ಧಿಯಾಗಲಿದೆ, ಅದಕ್ಕೆ ಹಿರಿಯರು ಜಾತ್ರೆ, ಅಮಾವಾಸ್ಯೆ, ಹುಣ್ಣಿಮೆ, ಸಮಾರಂಭಗಳನ್ನು ಮಾಡಿದ್ದಾರೆ.
ಬಸನಗೌಡ ಪಾಟೀಲ ಯತ್ನಾಳ, ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ