ಸಾರಾಂಶ
ಕುಷ್ಟಗಿ: ಕೇಂದ್ರ ಸರ್ಕಾರ ಅಂಚೆ ಇಲಾಖೆ ಮೂಲಕ ಸಾಕಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು, ಅದನ್ನು ತಲುಪಿಸುವ ಕಾರ್ಯ ಅಂಚೆ ಇಲಾಖೆ ಜನ ಸಂಪರ್ಕ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ ಎಂದು ಅಂಚೆ ಅಧೀಕ್ಷಕರು ಶಿವಾನಂದ ರಬಕವಿ ಹೇಳಿದರು.
ತಾಲೂಕಿನ ದೋಟಿಹಾಳ ಗ್ರಾಮದ ಶುಖಮುನಿಸ್ವಾಮಿ ಮಠದ ಹತ್ತಿರ ನಡೆದ ಅಂಚೆ ಜನ ಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.ಅಂಚೆ ಕಚೇರಿಯು ಉಳಿತಾಯ ಖಾತೆ ಅಲ್ಲದೆ ಹಲವಾರು ಸೌಲಭ್ಯದ ಯೋಜನೆಗಳು ಸೇರಿದಂತೆ ಜೀವ ವಿಮಾ ವ್ಯವಸ್ಥೆ ಕೂಡಾ ಮಾಡಬಹುದಾಗಿದೆ ಜನರಿಗೆ ಉಪಯೋಗವಾಗುವ ಸಾಕಷ್ಟು ಯೋಜನೆಗಳಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅಂಚೆ ನೀರಿಕ್ಷಕ ಎನ್.ಗೋಪಿಸಾಗರ ಮಾತನಾಡಿ, ಕೇಂದ್ರ ಸರ್ಕಾರ ಅಂಚೆ ಇಲಾಖೆಯ ಮೂಲಕ ಹಲವಾರು ಕಾರ್ಯಕ್ರಮ ನೀಡುತ್ತಿದೆ. ಕೇವಲ ಪತ್ರ ವ್ಯವಹಾರಕ್ಕೆ ಅಂಚೆ ಇಲಾಖೆ ಸೀಮಿತವಾಗಿಲ್ಲ. ಆದರೆ ಜನರಿಗೆ ಇದರ ಬಗ್ಗೆ ಮಾಹಿತಿ ನೀಡುವ ಕಾರ್ಯ ಇಂತಹ ಅಂಚೆ ಜನಸಂಪರ್ಕ ಕಾರ್ಯ ಮಾಡುತ್ತಿದೆ. ಅಪಘಾತವಿಮೆ, ಪಾಸ್ ಪೋರ್ಟ್, ಆಧಾರ್ ಸೇರಿದಂತೆ ಹಲವಾರು ಕಾರ್ಯ ಅಂಚೆ ಇಲಾಖೆ ಮಾಡುತ್ತಿದೆ ಎಂದರು.ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿ, ಕೇಂದ್ರ ಸರ್ಕಾರದ ಇಂತಹ ಕಾರ್ಯ ಯೋಜನೆ ನಿಜಕ್ಕೂ ಉತ್ತಮ. ನಮ್ಮೂರಲ್ಲಿಯೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಗ್ರಾಮೀಣ ಭಾಗದ ಜನಸೇವೆಗೆ ಯೋಜನೆಗಳು ಸಹಕಾರಿ ಎಂದರು.
ವಿಮಾ ಚೆಕ್ ವಿತರಣೆ:ದೋಟಿಹಾಳ ಗ್ರಾಮದ ಬಸೀರ್ ಅಹ್ಮದ ಇಲಕಲ್ಲ ಎಂಬುವವರು ಅಂಚೆ ಕಚೇರಿಯಲ್ಲಿ ಆರ್‌ಪಿಎಲ್ಐ ವಿಮಾ ಯೋಜನೆಯಡಿ ಮೂರು ಲಕ್ಷ ಮೊತ್ತದ ವಿಮೆ ಮಾಡಿಸಿದ್ದರು.ಇತ್ತೀಚಿಗೆ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ವಿಮೆಯ ಹಣ ನಾಮಿನಿಯಾದ ಪತ್ನಿ ಆಸ್ಮಾ ಇಲಕಲ್ ಅವರಿಗೆ ಕಟ್ಟಿದ ಕಂತುಗಳ ಹಣದ ಜತೆಯಲ್ಲಿ ವಿಮಾ ಮೊತ್ತ 3ಲಕ್ಷ ಒಟ್ಟು 329925 ಚೆಕ್ ಮೂಲಕ ವಿತರಿಸಲಾಯಿತು.
ಅಭಿಯಾನದಲ್ಲಿ ದೋಟಿಹಾಳ ಗ್ರಾಪಂ ಪಿಡಿಒ ನಾಗರತ್ನ ಮ್ಯಾಳಿ, ನಿವೃತ್ತ ಉಪನ್ಯಾಸಕ ಕೆವೈ ಕಂದಕೂರು, ಉಪಅಂಚೆಪಾಲಕ ಸಂಗಪ್ಪ ಬೈಲಕೂರ್, ಸೇರಿದಂತೆ ಅಂಚೆ ಕಚೇರಿಯ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.