ಎಂಜಿನಿಯರ್‌ ಅಭಿವೃದ್ಧಿ-ತಂತ್ರಜ್ಞಾನದ ಬೆನ್ನೆಲುಬು

| Published : Sep 28 2025, 02:00 AM IST

ಸಾರಾಂಶ

ದೂರದೃಷ್ಟಿ ಮತ್ತು ಕಾರ್ಯೋನ್ಮುಖರಾಗುವಲ್ಲಿ ಉತ್ಸಾಹ ಹೊಂದಿರುವ ಎಂಜಿನಿಯರ್‌ಗಳ ಅಗತ್ಯತೆ ಹೆಚ್ಚಾಗಿದೆ ಎಂದ ಅವರು, ದೂರದೃಷ್ಟಿ ಕ್ರಿಯೆಯಾಗಿ ಪರಿವರ್ತಿಸುವ ಮತ್ತು ಸಂಕೀರ್ಣ ಸಮಸ್ಯೆ ಎದುರಿಸಲು ವಿಭಿನ್ನವಾಗಿ ಯೋಚಿಸುವುದನ್ನು ಬೆಳೆಸಿಕೊಳ್ಳಬೇಕು.

ಧಾರವಾಡ:

ಎಂಜಿನಿಯರ್‌ಗಳು ಅಭಿವೃದ್ಧಿ ಮತ್ತು ತಂತ್ರಜ್ಞಾನದ ಬೆನ್ನೆಲುಬಾಗಿದ್ದಾರೆ. ಅವರು ವಿಜ್ಞಾನ ಮತ್ತು ಸಮಾಜದ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವವರು ಎಂದು ವಾಲ್ಮಿ ನಿರ್ದೇಶಕ ಡಾ. ಗಿರೀಶ ಎನ್‌. ಮರಡ್ಡಿ ಹೇಳಿದರು.

ಇಲ್ಲಿನ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ೧೫ನೇ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ದೂರದೃಷ್ಟಿ ಮತ್ತು ಕಾರ್ಯೋನ್ಮುಖರಾಗುವಲ್ಲಿ ಉತ್ಸಾಹ ಹೊಂದಿರುವ ಎಂಜಿನಿಯರ್‌ಗಳ ಅಗತ್ಯತೆ ಹೆಚ್ಚಾಗಿದೆ ಎಂದ ಅವರು, ದೂರದೃಷ್ಟಿ ಕ್ರಿಯೆಯಾಗಿ ಪರಿವರ್ತಿಸುವ ಮತ್ತು ಸಂಕೀರ್ಣ ಸಮಸ್ಯೆ ಎದುರಿಸಲು ವಿಭಿನ್ನವಾಗಿ ಯೋಚಿಸುವುದನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಧನಾತ್ಮಕ ಬದಲಾವಣೆ ತಂದು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಬಹುದು ಎಂದರು.

ಪದವೀಧರರು ತಮ್ಮ ಬುದ್ಧಿವಂತಿಕೆ ಮತ್ತು ಗಳಿಸಿದ ಜ್ಞಾನವನ್ನು ಸಮಾಜದ ಕಲ್ಯಾಣಕ್ಕಾಗಿ ಮತ್ತು ಮಾನವಕುಲದ ಉನ್ನತಿಗಾಗಿ ಬಳಸಬೇಕು ಎಂದು ಕರೆ ನೀಡಿದರು.

ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ವೀಡಿಯೋ ಸಂದೇಶದ ಮೂಲಕ ಪದವೀಧರರನ್ನು ಅಭಿನಂದಿಸಿ, ದೇಶದ ಒಳಿತಿಗೆ ಕಾರ್ಯೋನ್ಮುಖರಾಗಲು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜೀವಂಧರ ಕುಮಾರ್, ಎಂಜಿನಿಯರಿಂಗ್ ಪದವಿ ಅರ್ಹತೆಯೊಂದೆ ಅಲ್ಲದೇ, ತಮ್ಮ ಮತ್ತು ಸಮಾಜದ ಭವಿಷ್ಯ ನಿರ್ಮಿಸುವ ಪ್ರಬಲ ಸಾಧನವಾಗಿದೆ. ಸಂಕೀರ್ಣ ಸಮಸ್ಯೆಗಳನ್ನು ಸಮಗ್ರತೆಯಿಂದ ಪರಿಹರಿಸಲು ಮತ್ತು ಸಮಾಜದ ಒಳಿತಿಗಾಗಿ ಆವಿಷ್ಕಾರ ಮಾಡಲು ತಾವು ಗಳಿಸಿದ ಜ್ಞಾನ ಬಳಸುವಂತೆ ತಿಳಿಸಿದರು. ಪ್ರಾಂಶುಪಾಲ ಡಾ. ರಮೇಶ ಎಲ್. ಚಕ್ರಸಾಲಿ ವಾರ್ಷಿಕ ವರದಿ ವಾಚಿಸಿದರು.

೯.೯ ಸಿಜಿಪಿಎ ಪಡೆದ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಬಿಂದುಗೆ ಡಾ. ಡಿ. ವೀರೇಂದ್ರ ಹೆಗ್ಗಡೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಏಳು ಎಂಜಿನಿಯರಿಂಗ್ ವಿಭಾಗಗಳಲ್ಲಿ ತಲಾ ಮೂರು ಅಗ್ರ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪದಕ ನೀಡಿ ಪುರಸ್ಕರಿಸಲಾಯಿತು. ಒಟ್ಟು ೫೮೨ ಯುಜಿ ಮತ್ತು ೧೭ ಪಿಜಿ ಪದವೀಧರರು ಪ್ರಮಾಣಪತ್ರ ಪಡೆದರು. ಜತೆಗೆ ೨೮ ಪಿಎಚ್‌.ಡಿ ಪದವೀಧರರಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು. ೧೪ ವಿದ್ಯಾರ್ಥಿಗಳು ವಿಶೇಷ ಕಲಿಕಾ ಸಾಧನೆಗಳಿಗೊಸ್ಕರ ಬಿಇ ಆನರ್ಸ್ ಪದವಿ ಪಡೆದರು. ಪದವೀಧರ ವಿದ್ಯಾರ್ಥಿಗಳಿಗೆ ವಿವಿಧ ದತ್ತಿ ಬಹುಮಾನ ವಿತರಿಸಲಾಯಿತು.

ಈ ವೇಳೆ ಡೀನ್ ಅಕಾಡೆಮಿಕ್ ಪ್ರೋಗ್ರಾಮ್ ಡಾ. ವಿಜಯಾ ಸಿ., ಡಾ.ಶ್ರವಣಕುಮಾರ ನಾಯಕ್, ಪ್ರೊ. ಇಂದಿರಾ ಉಮರ್ಜಿ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.