ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಐತಿಹಾಸಿಕ ಮಹತ್ವದ ಸಾಧಕರನ್ನು, ಸಾಧನೆಗಳನ್ನು ನೆನೆಪಿಸುವ ಕೆಲಸ ಮಾಡಿದ ಅಂಚೆ ಇಲಾಖೆಯ ಕಾರ್ಯ ಅಭಿನಂದನಾರ್ಹ ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.ಮಹಾವೀರ ಭವನದಲ್ಲಿ ಆಯೋಜಿಸಿದ್ದ ಬೆಳಗಾವಿ ಜಿಲ್ಲಾಮಟ್ಟದ ಅಂಚೆ ಚೀಟಿ ಪ್ರದರ್ಶನ ಇಕ್ಷುಪೆಕ್ಸ್ ಕಾರ್ಯಕ್ರಮದಲ್ಲಿ ಬೆಳಗಾವಿಯ ಇತಿಹಾಸ ಮತ್ತು ಪರಂಪರೆ ವಿಷಯದ ಮೇಲೆ ಆಯೋಜಿಸಿದ್ದ ವಿಶೇಷ ಲಕೋಟೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ, ಅಂಚೆ ಇಲಾಖೆ ಇತಿಹಾಸ ಮೆಲುಕು ಹಾಕಲು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿ ಇದೊಂದು ಪ್ರೇರಣಾದಯಕ ಕಾರ್ಯಕ್ರಮ ಎಂದು ಕೊಂಡಾಡಿದರು.ಬೆಳಗಾವಿ ಜಿಲ್ಲಾಧಿಕಾರಿ ಮೋಹಮ್ಮದ್ ರೋಷನ್ ಮಾತನಾಡಿ, ಅತಿ ಕಡಿಮೆ ಸಮಯದಲಿ ಕೇವಲ ೧೮ ದಿನಗಳ ಅವಧಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮನ 200 ವರ್ಷಗಳ ಕುರಿತು ಅಂಚೆ ಚೀಟಿ ಬಿಡುಗಡೆ ಗೊಳಿಸಿ ಅಸಾಧ್ಯವನ್ನು ಸಾಧ್ಯವಾಗಿಸಿದ ಕೀರ್ತಿ ಬೆಳಗಾವಿ ಅಂಚೆ ಬಳಗಕ್ಕೆ ಅಭಿನಂದನೆ ಸಲ್ಲಿಸಿದರು. ಫಿಲಾಟೆಲಿಸ್ಟ್ ಗಳು ಇತಿಹಾಸ ಸಂರಕ್ಷಕರು ಎಂದು ಅಭಿಪ್ರಾಯಪಟ್ಟರು.
ಕರ್ನಲ್ ಚಂದ್ರ ನೀಲ ರಮಾನಾಥ್ ಕರ್ ನಮ್ಮ ಅಂಚೆ ಅಣ್ಣಾ ದೇಶದ ಪ್ರತಿಯೊಂದು ಮನೆಯ ಅತ್ಯಂತ ಅವಿಭಾಜ್ಯ ಸಂಬಂಧ ಹೊಂದಿದ್ದಾನೆ ಎಂದರು.ಕಾರ್ಯಕ್ರಮದಲ್ಲಿ ಬಾಳೆಕುಂದ್ರೀಯ ಶ್ರೀ ದತ್ತ ಸಂಸ್ಥಾನದ ಉಪಾಧ್ಯಕ್ಷ ಅಪ್ಪಸಾಹೇಬ ದಡ್ಡಿಕರ್, ಬೆಳಗಾವಿ ಅಂಚೆ ಅಧೀಕ್ಷಕ ವಿಜಯ ವಾದೋನಿ, ಗೋಕಾಕ ವಿಭಾಗದ ಅಂಚೆ ಅಧಿಕ್ಷಕ ರಮೇಶ ಕಮತೆ, ಚಿಕ್ಕೋಡಿ ಅಂಚೆ ಅಧೀಕ್ಷಕ ವೆಂಕಟೇಶ ಬದಾಮಿ ಉಪಸ್ಥಿತರಿದ್ದರು. ಅಂಚೆ ನಿರೀಕ್ಷಕ ಪ್ರವೀಣ್ ಶೀಲವಂತರ ಸ್ವಾಗತಿಸಿದರು, ಶ್ರುತಿ ನಿರೂಪಿಸಿದರು, ರಾಮದುರ್ಗ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕ ದವಲ್ ಅಣ್ಣಿಗೇರಿ ವಂದಿಸಿದರು.ವಿಶೇಷ ಅಂಚೆ ಲಕೋಟೆ ಬಿಡುಗಡೆ:
ಪಂತ ಮಹಾರಾಜ್ ಶ್ರೀ ಕ್ಷೇತ್ರ ಪಂತ ಬಾಳೇಕುಂದ್ರಿ ಕುರಿತು, ಉತ್ತರ ಕರ್ನಾಟಕದ ಭಗೀರಥ ಎಸ್.ಜಿ. ಬಾಳೇಕುಂದ್ರಿ ಅವರ ಸ್ಮರಣಾರ್ಥ ಮತ್ತು ಏಷ್ಯಾದ ಮೊದಲ ಹೈಡ್ರೋ ಎಲೆಕ್ಟ್ರಿಕ್ ಪವರ್ ಹೌಸ್ ಗೋಕಾಕ್ ಜಲಪಾತ ನೆನೆಪಿಗಾಗಿ ವಿಶೇಷ ಅಂಚೆ ಲಕೋಟೆಗಳನ್ನು ಅಂಚೆ ಇಲಾಖೆಯಿಂದ ಲೋಕಾರ್ಪಣೆ ಗೊಳಿಸಲಾಯಿತು. ಬೆಳಗಾವಿ ಪರಂಪರೆ ಬಿಂಬಿಸುವ ಚಿತ್ರಯುಕ್ತ ಅಂಚೆ ಕಾರ್ಡ್ ಸಹ ಬಿಡುಗಡೆ ಗೊಳಿಸಿದರು.