ಗದಗ: ಅಂಚೆ ಇಲಾಖೆಯ ಗದಗ ವಿಭಾಗೀಯ 2025- 26ನೇ ಸಾಲಿನ ವಿವಿಧ ಪ್ರಕಾರಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಮೂಲಕ ಉತ್ತರ ಕರ್ನಾಟಕ ವಲಯದ ಜಿಲ್ಲೆಗಳಲ್ಲೇ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಗದಗ ಪಾತ್ರವಾಗಿದೆ ಎಂದು ಅಂಚೆ ಸೇವೆಯ ಉತ್ತರ ಕರ್ನಾಟಕ ವಲಯ ನಿರ್ದೇಶಕ ಶ್ರೀಹರ್ಷ ಎನ್. ತಿಳಿಸಿದರು.

ಜೆಟಿ ಕಾಲೇಜಿನ ಸಭಾಭವನದಲ್ಲಿ ಮಂಗಳವಾರ ಸಂಜೆ ಭಾರತೀಯ ಅಂಚೆ ಇಲಾಖೆಯ ಆಶ್ರಯದಲ್ಲಿ ನಡೆದ ಗದಗ ವಿಭಾಗೀಯ ಮಟ್ಟದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಅಂಚೆ ಇಲಾಖೆ ಪ್ರತಿಯೊಬ್ಬ ಗ್ರಾಹಕರಿಗೂ ವಿನಾಕಾರಣ ಅಲೆಯುವುದನ್ನು ತಪ್ಪಿಸಬೇಕು. ಅಷ್ಟೇ, ಅಲ್ಲದೆ ಗ್ರಾಹಕಸ್ನೇಹಿಯಾಗಿಸಿ, ಗ್ರಾಹಕರೊಂದಿಗೆ ಸೌಜನ್ಯದಿಂದ ಅಂಚೆ ಇಲಾಖೆ ವಿವಿಧ ಸೇವೆಗಳನ್ನು ಪ್ರಾಮಾಣಿಕವಾಗಿ ತಲುಪಿಸಲು ಅಂಚೆ ಇಲಾಖೆ ಪ್ರತಿಯೊಬ್ಬ ನೌಕರರು ಶ್ರಮಿಸಬೇಕು ಎಂದರು.ಜೆಟಿ ಕಾಲೇಜಿನ ಪ್ರಾ. ಪಿ.ಜಿ. ಪಾಟೀಲ ಮಾತನಾಡಿ, ಶಿಕ್ಷಕರು ಹಾಗೂ ಪದವೀಧರರನ್ನು ಹಲವು ನಕಲಿ ಕಂಪನಿಗಳು ಅಬ್ಬರದ ಪ್ರಚಾರ ಮತ್ತು ವಿದೇಶಿ ಪ್ರವಾಸ ಹೆಚ್ಚಿನ ಹಣ ನೀಡುವ ಆಮಿಷ ತೋರಿಸಿ ಕಷ್ಟದಿಂದ ಸಂಪಾದಿಸಿದ ಹಣವನ್ನು ವಂಚಿಸಲಾಗುತ್ತಿದೆ. ಇದರಿಂದಾಗಿ ಹಣ ಕಳೆದುಕೊಂಡ ಜನರು ಕಣ್ಣೀರು ಹಾಕುತ್ತಿದ್ದಾರೆ. ಹಾಗಾಗಿ ಹಲವು ದಶಕಗಳಿಂದ ಜನರ ವಿಶ್ವಾಸಾರ್ಹ ಸೇವೆಗೆ ಹೆಸರಾಗಿರುವ ಅಂಚೆ ಇಲಾಖೆ ವಿಮೆ, ಉಳಿತಾಯ ಒಳಗೊಂಡಂತೆ ಹಲವು ಸೇವೆಗಳನ್ನು ನೀಡಿದೆ. ಅವುಗಳ ಪ್ರಯೋಜನ ಪಡೆಯಬೇಕು ಎಂದರು.ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಮಾತನಾಡಿ, ಕಳೆದ ಸಾಲಿನಲ್ಲಿ ಅಂಚೆ ಇಲಾಖೆಯ ವಿವಿಧ ಸೇವೆಗಳನ್ನು ಹೆಚ್ಚಿನ ಜನರಿಗೆ ತಲುಪಿಸಲಾಗಿದೆ. ಆದ್ದರಿಂದ ಈ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳು ಬರಲು ಸಾಧ್ಯವಾಯಿತು. ಉತ್ತರ ಕರ್ನಾಟಕ ವಲಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪ್ರಶಸ್ತಿಗಳನ್ನು ಗದಗ ವಿಭಾಗ ಪಡೆದಿದೆ. ಇದು ಗದಗ ಅಂಚೆ ವಿಭಾಗಕ್ಕೆ ಹೆಮ್ಮೆಯ ವಿಷಯ ಎಂದರು.

ಗದಗ ಪ್ರಧಾನ ಅಂಚೆ ಪಾಲಕ ಶರಣಪ್ಪ ನಾಯ್ಕರ, ಡಿ.ಜಿ. ಮ್ಯಾಗೇರಿ, ಶ್ರೀಕಾಂತ ತೇರದಾಳ, ಮಂಜುನಾಥ ಕುರಿಯವರ, ಎಚ್. ಬಸವರಾಜ, ಹನುಮೇಶ ಮ್ಯಾಳಿ, ವೆಂಕಟೇಶ ಆಕಳವಾಡಿ, ಪರಶುರಾಮ ಕೊಪ್ಪದ, ಎಂ.ಎನ್. ಕುರಹಟ್ಟಿ, ವಿ. ಸುನೀಲಕುಮಾರ ಸೇರಿದಂತೆ ಇತರರು ಇದ್ದರು. ಶ್ರೀಕಾಂತ ಜಾಧವ ಸ್ವಾಗತಿಸಿದರು. ಸವಿತಾ ಕುಪ್ಪಸದ ಪ್ರಾರ್ಥಿಸಿದರು. ವೆಂಕಟೇಶರಡ್ಡಿ ಕೊಳ್ಳಿ ವಂದಿಸಿದರು.