ತರೀಕೆರೆ: ತಾಲೂಕಿನ ಲಕ್ಕವಳ್ಳಿ ದರ್ಗಾದಲ್ಲಿ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಸಚಿವರಾಗಲೆಂದು ವಿಶೇಷ ಪ್ರಾರ್ಥನೆ ಕಾರ್ಯಕ್ರಮ ನಡೆಯಿತು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ವಕೀಲೆ ಪರ್ವೀನ್ ತಾಜ್ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಗೆ ಸುಮಾರು 35 ವರ್ಷಗಳಿಂದ ಸಚಿವ ಸ್ಥಾನ ದೊರೆತಿಲ್ಲ. ಈ ಬಾರಿ ಜಿಲ್ಲೆಯ ಜನರು ಕಾಂಗ್ರೆಸ್ ಪಕ್ಷಕ್ಕೆ ಐದು ಶಾಸಕರನ್ನು ನೀಡಿದ್ದಾರೆ. ಆದ್ದರಿಂದ ನಮ್ಮ ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು, ಅವರು ಉತ್ತಮ ಆಡಳಿತ ನೀಡುತ್ತಿದ್ದು, ಸಚಿವರಾದರೆ ಇನ್ನಷ್ಟು ಜನಪರ ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.ಜಿಲ್ಲಾ ಕೆ.ಡಿ.ಪಿ.ಸದಸ್ಯರು, ದರ್ಗಾ ಸಮಿತಿಯ ಅಧ್ಯಕ್ಷ ಸಿರಾಜ್ ಮಾತನಾಡಿ, ಶಾಸಕ ಜಿ.ಎಚ್.ಶ್ರೀನಿವಾಸ್ ತರೀಕೆರೆ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ದೊರೆತರೆ ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಸಿಗಲಿದೆ ಎಂದರು.
ಕಾಂಗ್ರೆಸ್ ಮುಖಂಡ ರೋಷನ್ ಪಾಷಾ ಮಾತನಾಡಿ, ಜಿ.ಎಚ್.ಶ್ರೀನಿವಾಸ್ ಯುವ ಕಾಂಗ್ರೆಸ್‌ನಿಂದ ರಾಜಕೀಯ ಜೀವನ ಆರಂಭಿಸಿ ಶಾಸಕರಾಗಿ ಬೆಳೆದಿದ್ದಾರೆ. ಬಡವರ ಹಾಗೂ ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಉತ್ತಮ ಅರಿವಿದೆ. ಸಚಿವರಾದರೆ ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಲಿದ್ದಾರೆ ಎಂದು ಹೇಳಿದರು.ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಅಸ್ಮಾ ಬಾನು ಮಾತನಾಡಿದರು.
ಮೆಹಬೂಬ್ ಬಿ, ಸಾಜಿಲಾ ಬಾನು, ಶಹಬಾಜ್ ಪಾಷಾ, ಅನೇಕ ಮುಖಂಡರು, ಮುಸ್ಲಿಂ ಸಮುದಾಯದ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಹಾಜರಿದ್ದರು.