ಪಾಕಿಸ್ತಾನದ ಉಗ್ರರ ಜತೆಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧಿತ ದಾವಣಗೆರೆಯ ಜಮೀರ್ ಖಾನ್‌ನಂತೆಯೇ ಇನ್ನೂ ಅನೇಕರು ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಅನುಮಾನವಿದ್ದು, ಸುಮಾರು 4 ಸಾವಿರಕ್ಕೂ ಅದಿಕ ಬಾಂಗ್ಲಾ ವಲಸಿಗರು ಜಿಲ್ಲೆಯಲ್ಲಿರುವ ಅನುಮಾನವಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಾಕಿಸ್ತಾನದ ಉಗ್ರರ ಜತೆಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬಂಧಿತ ದಾವಣಗೆರೆಯ ಜಮೀರ್ ಖಾನ್‌ನಂತೆಯೇ ಇನ್ನೂ ಅನೇಕರು ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಅನುಮಾನವಿದ್ದು, ಸುಮಾರು 4 ಸಾವಿರಕ್ಕೂ ಅದಿಕ ಬಾಂಗ್ಲಾ ವಲಸಿಗರು ಜಿಲ್ಲೆಯಲ್ಲಿರುವ ಅನುಮಾನವಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಹೇಳಿದ್ದಾರೆ.

ತುಮಕೂರು, ದಾವಣಗೆರೆಯ ಇಬ್ಬರು ಪಾಕಿಸ್ತಾನದ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಕಾರಣಕ್ಕೆ ತುಮಕೂರು ಜಿಲ್ಲೆ ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಒಂದಿಬ್ಬರು ಸಿಕ್ಕಿ ಬಿದ್ದ ಪ್ರಕರಣವನ್ನು ತನಿಖಾ ಸಂಸ್ಥೆಗಳು, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ದಾವಣಗೆರೆನಗರ, ಜಿಲ್ಲೆಯಲ್ಲಿ ಇನ್ನೂ ಅನೇಕರು ದೇಶದ್ರೋಹಿ ಚಟುವಟಿಕೆಗಳಲ್ಲಿ, ಉಗ್ರರ ಸಂಪರ್ಕದಲ್ಲಿ ತೊಡಗಿರುವ ಅನುಮಾನವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ದಾವಣಗೆರೆಯಲ್ಲಿ ಬಂಧಿತನಾದ ಜಮೀರ್ ಖಾನ್‌, ತುಮಕೂರು ಜಿಲ್ಲೆಯಲ್ಲಿ ಬಂಧಿತನಾದ ಅಲ್ಲಾಭಕ್ಷಿಯಂತೆ ಇನ್ನೂ ಅನೇಕರು ಇಂತಹದ್ದೇ ಸಂಪರ್ಕ ಹೊಂದಿರುವವರು ಇರುವ ಸಾಧ್ಯತೆ ಇಲ್ಲದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದೇಶದ್ರೋಹಿಗಳ ಸಂಖ್ಯೆ ಹೆಚ್ಚಾಗಿದೆ.ಪಾಕಿಸ್ಥಾನದ ಪರ ಜೈಕಾರ ಹಾಕುವುದು, ತೆರೆ ಮರೆಯಲ್ಲೇ ಪಾಕಿಸ್ತಾನದ ಉಗ್ರರೊಡನೆ ಸಂಪರ್ಕ ಇಟ್ಟುಕೊಳ್ಳುವುದು, ಶತೃ ರಾಷ್ಟ್ರದ ಬಗ್ಗೆ ತೋರುವಂತಹ ಅನೇಕ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ದಾವಣಗೆರೆ ಜಮೀರ್ ಖಾನ್, ತುಮಕೂರಿನ ಅಲ್ಲಾಭಕ್ಷಿ ಬಂಧಿಸಿದ ಪೊಲೀಸರು ಇಡೀ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಮೀರ್ ಖಾನ್‌ಗೆ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ ವೀಡಿಯೋ ವೈರಲ್ ಆಗಿದೆ. ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುವ ಮುನ್ನವೇ ಶಂಕಿತ ಭಯೋತ್ಪಾದಕರ ಬಂಧನವಾಗಿದೆ. ದಾವಣಗೆರೆ ಬೀಡಿ ಲೇಔಟ್‌ನ 22 ವರ್ಷದ ಜಮೀರ್ ಖಾನ್‌, ತುಮಕೂರಿನ ಸುಮಾರು 23 ವರ್ಷದ ಅಲ್ಲಾಭಕ್ಷಿ ಜತೆಗೆ ಇತರರೂ ಸಹಿತ ಉಗ್ರರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಸಾಧ್ಯತೆ ಹೆಚ್ಚಾಗಿದೆ. ವಿಚಾರಣೆ ನಡೆಸಿ, ಉಳಿದವರನ್ನೂ ಬಂಧಿಸಬೇಕು. ಐಎಸ್‌ಐಎಸ್‌ಗೆ ಫಂಡಿಂಗ್ ಮಾಡುತ್ತಿದ್ದ ಪಾಕಿಸ್ಥಾನದ ಶಾಬಾಜ್ ಭುಟ್ಟಿ, ರಾಣಾ ಉನೇನ್‌ ಜತೆಗೆ ನಿರಂತರ ಸಂಪರ್ಕದಲ್ಲಿದ್ದ ಜಮೀರ್ ಖಾನ್, ಅಲ್ಲಾಭಕ್ಷಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.

ಬಂಧಿತ ತುಮಕೂರಿನ ಅಲ್ಲಾಭಕ್ಷಿ, ದಾವಣಗೆರೆ ಜಮೀರ್ ಖಾನ್ ಜೊತೆಗೆ ಇನ್ನೂ ಯಾರೆಲ್ಲಾ ಇದೀ ರೀತಿ ವಾಟ್ಸಾಪ್‌, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಪಾಕಿಸ್ಥಾನದ ಉಗ್ರರ ಜೊತೆಗೆ ಸಂಪರ್ಕದಲ್ಲಿದ್ದಾರೆಂಬುದನ್ನು ರಾಷ್ಟ್ರೀಯ ತನಿಖಾ ದಳ, ಪೊಲೀಸ್ ಇಲಾಖೆ ಆಳವಾಗಿ ತನಿಖೆ ಮಾಡಿ, ಬಂಧಿಸಬೇಕು. ಈಗ ಬಂಧಿತರಾದ ಇಬ್ಬರೂಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ದೇಶದಲ್ಲಿ ಸಂಚು ನಡೆಸಲು ಭಾರತದ ಮುಸ್ಲಿಂ ಯುವಕರನ್ನು ಐಎಸ್ಐಎಸ್‌ ಭಯೋತ್ಪಾದಕ ಸಂಘಟನೆ ಬಳಸಿಕೊಳ್ಳುತ್ತಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚಾಗಿರುವ ಮುಸ್ಲಿಂ ತುಷ್ಟೀಕರಣವೇ ಇಂತಹವರು ಬಲವಾಗಿ ಬೇರೂರಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರ ಹಾಕಲು ಒತ್ತಾಯ

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಸುಮಾರು 4 ಸಾವಿರದಷ್ಟು ಅಕ್ರಮ ಬಾಂಗ್ಲಾ ವಲಸಿಗರಿರುವ ಬಗ್ಗೆ ಮಾಹಿತಿ ಇದೆ. ಅಂತಹವರನ್ನು ಪತ್ತೆ ಮಾಡಿ, ಜಿಲ್ಲೆ, ರಾಜ್ಯ, ದೇಶದಿಂದ ಹೊರ ನೂಕುವ ಕೆಲಸ ಆಗಬೇಕು ಎಂದು ರಾಜನಹಳ್ಳಿ ಶಿವಕುಮಾರ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿದ್ದಾರೆ.

ದಾವಣಗೆರೆ ನಗರ, ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ. ಈ ಹಿಂದೆಯೇ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡಿ, ದೂರು ಸಹ ದಾಖಲು ಮಾಡಲಾಗಿತ್ತು. ಈಗ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರಿಂದ ಆಂತರಿಕ ಭದ್ರತೆಗೆ ಧಕ್ಕೆ ಇದ್ದು, ಅಪಾಯವೂ ಇಲ್ಲದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ದಾವಣಗೆರೆ ನಗರ, ಜಿಲ್ಲೆಯಲ್ಲಿ ಗುರುತಿಸಿ, ರಾಜ್ಯ, ದೇಶದಿಂದಲೇ ಗಡೀಪಾರು ಮಾಡಬೇಕು. ಈ ಬಗ್ಗೆ ಸ್ಥಳೀಯ ಆಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿದ್ದರೆ, ಇಂತಹ ಅಕ್ರಮ ಬಾಂಗ್ಲಾ ವಲಸಿಗರಿಂದಲೂ ಅನಾಹುತ ಖಚಿತ. ಪೊಲೀಸ್ ಇಲಾಖೆ ಇಂತಹ ಗಂಭೀರ ವಿಚಾರದ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಮುಂದೆ ಆಗುವಂತಹ ಅಪಾಯವನ್ನು ತಪ್ಪಿಸಬೇಕು ಎಂದು ರಾಜನಹಳ್ಳಿ ಶಿವಕುಮಾರ ಮನವಿ ಮಾಡಿದ್ದಾರೆ.