ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಧ್ಯ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಉತ್ತರದ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ, ಕಿತ್ತೂರು ಕರ್ನಾಟಕದ ಸಂಘಟನಾ ಚತುರ, ವಿಪ ಮುಖ್ಯ ಸಚೇತಕ ಸಲೀಂ ಅಹಮ್ಮದ್‌ಗೆ ಸಚಿವ ಸ್ಥಾನ ನೀಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಕಾಂಗ್ರೆಸ್ ವರಿಷ್ಠರು, ಸಿಎಂ, ಕೆಪಿಸಿಸಿ ಅಧ್ಯಕ್ಷರಿಗೆ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಧ್ಯ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಉತ್ತರದ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ, ಕಿತ್ತೂರು ಕರ್ನಾಟಕದ ಸಂಘಟನಾ ಚತುರ, ವಿಪ ಮುಖ್ಯ ಸಚೇತಕ ಸಲೀಂ ಅಹಮ್ಮದ್‌ಗೆ ಸಚಿವ ಸ್ಥಾನ ನೀಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಕಾಂಗ್ರೆಸ್ ವರಿಷ್ಠರು, ಸಿಎಂ, ಕೆಪಿಸಿಸಿ ಅಧ್ಯಕ್ಷರಿಗೆ ಒತ್ತಾಯಿಸಿದರು.ನಗರದಲ್ಲಿ ಭಾನುವಾರ ಸುದ್ದಿಗೋಷಷ್ಠಿಯಲ್ಲಿ ಮಾತನಾಡಿ, ಡಿ.ಕೆ.ಶಿವಕುಮಾರ್ ಸಿಎಂ ಆಗಿ ಪದಗ್ರಹಣ ವಹಿಸುವ ವೇಳೆಯೇ ಎಸ್ಸೆಸ್ ಮಲ್ಲಿಕಾರ್ಜುನ, ಸಲೀಂ ಅಹಮ್ಮದ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇತ್ತು. ಆದರೆ, ಕಾರಣಾಂತರದಿಂದ ಅದು ಆಗಲಿಲ್ಲ. ಬರುವ ಸಂಪುಟ ವಿಸ್ತರಣೆಯಲ್ಲಿ ಇಬ್ಬರಿಗೂ ಸಚಿವ ಸ್ಥಾನ ನೀಡಲಿ ಎಂದರು.
ಎಸ್ಸೆಸ್ ಮಲ್ಲಿಕಾರ್ಜುನ ಅಭಿವೃದ್ಧಿಯ ಚಾಂಪಿಯನ್ ಅಂತಲೇ ಹೆಸರಾದವರು. ದಾಖಲೆ ಪ್ರಮಾಣದ ಆಶ್ರಯ ಮನೆ ನಿರ್ಮಾಣ, ಸಿಸಿ ರಸ್ತೆ, ಕೆರೆಗಳಿಗೆ ಕಾಯಕಲ್ಪ, ಗಾಜಿನ ಮನೆ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆ, ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಎಸ್ಸೆಸ ಮಲ್ಲಿಕಾರ್ಜುನರ ಪಾತ್ರ ಮಹತ್ವದ್ದು. ಮಲ್ಲಿಕಾರ್ಜುನರ ಪರಿಶ್ರಮಕ್ಕೆ ಪಕ್ಷವು ಸಚಿವ ಸ್ಥಾನ ನೀಡುವ ಮೂಲಕ ಬೆಲೆ ಕೊಡಬೇಕು. ಮೊದಲ ಪಟ್ಟಿಯಲ್ಲೇ ಎಸ್ಸೆಸ್ ಮಲ್ಲಿಕಾರ್ಜುನ, ಸಲೀಂ ಅಹಮ್ಮದ್ ಸಚಿವರಾಗಬೇಕಾಗಿತ್ತು ಎಂದರು.
ಕೆ.ಸಿ.ವೇಣುಗೋಪಾಲರ ಸಮಕಾಲೀನರಾದ ಸಲೀಂ ಅಹಮ್ಮದ್‌ರಿಗೆ ಕಾಂಗ್ರೆಸ್ ಪಕ್ಷದಲ್ಲಿ ತುಂಬಾ ಅನ್ಯಾಯವಾಗಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ನಾಲ್ಕು ದಶಕದಿಂದ ಪಕ್ಷದಲ್ಲಿ ಸಲೀಂ ಕೆಲಸ ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಎಷ್ಟು ಕೆಲಸ ಮಾಡಿದ್ದಾರೋ ಅಷ್ಟೇ ಶ್ರಮ ಸಲೀಂ ಅಹಮ್ಮದ್‌ರದ್ದು ಇದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರು ಎಂದರು.ಸಲೀಂ ಅಹಮ್ಮದ್ ಜತೆಗೆ ಕೆಲಸ ಮಾಡಿದ ದೇಶದ ವಿವಿಧ ನಾಯಕರು ಉನ್ನತ ಸ್ಥಾನಕ್ಕೇರಿದ್ದಾರೆ. ಆದರೆ, ಸಲೀಂರಿಗೆ ಸೂಕ್ತ ಸಚಿವ ಸ್ಥಾನ ನೀಡಿ, ಇನ್ನಾದರೂ ಪಕ್ಷ ಸ್ಪಂದಿಸಬೇಕು. ಸಲೀಂ ಅಹಮ್ಮದ್ ಜತೆಗೆ ವಿದ್ಯಾರ್ಥಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾಗ ಕೆಲಸ ಮಾಡಿದ್ದ ಹಿಮಾಚಲ ಪ್ರದೇಶ ಸಿಎಂ ಸುಕ್ಕು, ಈಗಿನ ಅಸ್ಸಾಂ ಸಿಎಂ ಸಹ ಉನ್ನತ ಸ್ಥಾನಕ್ಕೇರಿದ್ದಾರೆ. ಸಲೀಂಗೆ ಸಚಿವ ಸ್ಥಾನವೇ ಇನ್ನೂ ಸಿಕ್ಕಿಲ್ಲ. ಇನ್ನಾದರೂ ಸಲೀಂ ಅಹಮ್ಮದ್, ಎಸ್ಸೆಸ್ ಮಲ್ಲಿಕಾರ್ಜುನರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.
ಕಿತ್ತೂರು ಕರ್ನಾಟಕವನ್ನ ಕರ್ಮಭೂಮಿ ಮಾಡಿಕೊಂಡು ಸಲೀಂ ಪಕ್ಷ ಸಂಘಟಿಸಿದ್ದಾರೆ. ಶಿಗ್ಗಾಂವಿ, ಹಾನಗಲ್, ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2023ರಲ್ಲೇ ಸಲೀಂರಿಗೆ ಸಚಿವ ಸ್ಥಾನ ದೊರೆಯಬೇಕಿತ್ತು. ಈಗಲಾದರೂ ಸಲೀಂ ಅಹಮ್ಮದ್ ಪಕ್ಷಕ್ಕಾಗಿ ಮಾಡಿದ ಕೆಲಸಕ್ಕೆ ಸೂಕ್ತ ಕೂಲಿ, ಪರಿಶ್ರಮಕ್ಕೆ ಬೆಲೆ ನೀಡ ಬೇಕು ಎಂದು ಮನವಿ ಮಾಡಿದರು.ಮಾಜಿ ಮೇಯರ್ ಕೆ.ಚಮನ್‌ಸಾಬ್, ಜಿಲ್ಲಾ ಗ್ಯಾರಂಟಿ ಸಮಿತಿ ಸದಸ್ಯ ಎಂ.ಕೆ.ಲಿಯಾಖತ್ ಅಲಿ, ಅಲ್ಲಾವಲಿ ಮುಜಾಹಿದ್ ಪಾಷಾ, ಬಿ.ಎಸ್.ಸುರೇಶ, ಶಾಹೀದ್ ಅಫ್ರಿದಿ, ಮುಷರಫ್ ಇತರರು ಇದ್ದರು.
--ಎಸ್ಸೆಸ್ ಮಲ್ಲಿಕಾರ್ಜುನ ಅಭಿವೃದ್ಧಿಯ ಚಾಂಪಿಯನ್. ಮೊದಲ ಪ್ರಾಶಸ್ತ್ಯದಲ್ಲಿ ಎಸ್ಸೆಸ್ಸೆಂಗೆ ಸಚಿವ ಸ್ಥಾನ ನೀಡಲಿ. ಬಳಿಕ ಅವಕಾಶ ಇದ್ದರೆ ಡಿ.ಜಿ.ಶಾಂತನಗೌಡ, ಬಸವರಾಜ ಶಿವಗಂಗಾಗೆ ನೀಡಲಿ.
ಡಿ.ಬಸವರಾಜ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ.