ಕನ್ನಡಪ್ರಭ ವಾರ್ತೆ ಬೆಂಗಳೂರು
ಅಂತರ ಕಾಯ್ದುಕೊಂಡಿದ್ದಕ್ಕೆ ಆಕ್ರೋಶಗೊಂಡ ಯುವತಿಯೊಬ್ಬಳು ವಿದೇಶಿ ಶೈಲಿಯಲ್ಲಿ ಪ್ರೀತಿಯ ನಿವೇದನೆ ಮಾಡುವೆ ಎಂದು ನಂಬಿಸಿ ಪ್ರಿಯತಮನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದು ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಿರಣ್ ಕೊಲೆಯಾದವನು. ಪ್ರಕರಣದ ಸಂಬಂಧ ಪ್ರೇಮಾ ಎಂಬ ಯುವತಿಯನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿರಣ್ ಮತ್ತು ಪ್ರೇಮಾ ವೋಡಫೋನ್ ಐಡಿಯಾ (ವಿಐ) ಕಚೇರಿಯಲ್ಲಿ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಸ್ಪರ ಪರಿಚಯವಾಗಿದ್ದು, ನಂತರ ಸ್ನೇಹಿತರಾಗಿದ್ದರು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಈ ಮಧ್ಯೆ ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿದ್ದು, ಆಗಿನಿಂದ ಪ್ರೇಮಾನೊಂದಿಗೆ ಕಿರಣ್ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ. ಇದರಿಂದ ಪ್ರೇಮ ಆಕ್ರೋಶಗೊಂಡಿದ್ದಳು.ಮನೆಗೆ ಕರೆಸಿ ಬೆಂಕಿ ಹಚ್ಚಿದಳು:
ಯುವತಿ ಅಂಜನಾನಗರದಲ್ಲಿರುವ ಮನೆಯಲ್ಲಿ ತಾಯಿ ಮತ್ತು ಸಹೋದರನೊಂದಿಗೆ ವಾಸವಿದ್ದು, ಅವರು ಹೊರಗಡೆ ಹೋಗಿದ್ದರು. ಈ ವೇಳೆ ನಿನ್ನ ಬಳಿ ಮಾತನಾಡುವುದು ಇದೆ ಎಂದು ಸುಳ್ಳು ಹೇಳಿ ಕಿರಣ್‌ನನ್ನು ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ತನ್ನ ಮನೆಗೆ ಕರೆಸಿಕೊಂಡಿದ್ದಳು. ನಂತರ ಆತನ ಮೇಲೆ ಪೆಟ್ರೋಲ್, ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದಾಳೆ. ಕ್ಷಣ ಮಾತ್ರದಲ್ಲಿಯೇ ಬೆಂಕಿ ಇಡೀ ದೇಹವನ್ನು ಆವರಿಸಿದ್ದು, ಯುವಕ ಕಿರುಚಾಡಿ ಒದ್ದಾಡಿ ಮನೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.
ಮೊದಲು ಆತ್ಮಹತ್ಯೆ ಶಂಕೆ:
ಮೇಲ್ನೋಟಕ್ಕೆ ಮೊದಲು ಕಿರಣ್ ಯುವತಿಯ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ದೌಡಾಯಿಸಿದರು. ಪ್ರಾಥಮಿಕ ತನಿಖೆಯ ವೇಳೆ ಇದೊಂದು ಕೊಲೆ ಎಂಬುದು ಪತ್ತೆಯಾಯಿತು. ಕೂಡಲೇ ಯುವತಿಯನ್ನು ಬಂಧಿಸಿದ ಪೊಲೀಸರು ಆಕೆಯನ್ನು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಫಾರಿನ್ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡ್ತಿನಿ!ನಿನಗೆ ವಿದೇಶಿ ಶೈಲಿಯಲ್ಲಿ ಪ್ರಪೋಸ್ ಮಾಡುತ್ತೇನೆ ಎಂದು ಹೇಳಿದ ಯುವತಿ, ಕಿರಣ್‌ನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ-ಕಾಲುಗಳನ್ನು ಹಗ್ಗದಿಂದ ಬಿಗಿದಿದ್ದಾಳೆ. ಕಿರಣ್, ಯಾಕೆ ಇಷ್ಟು ಟೈಟ್ ಆಗಿ ಕಟ್ತಿದ್ದೀಯಾ? ಎಂದು ಕೇಳಿದಾಗ, ಇದು ಫಾರಿನ್ ಸ್ಟೈಲ್, ಸುಮ್ಮನಿರು ಎಂದು ನಂಬಿಸಿದ್ದಾಳೆ.
ಕಿರಣ್ ಸಂಪೂರ್ಣ ಅಸಹಾಯಕನಾದ ಮೇಲೆ ಆಕೆ ಮೈಮೇಲೆ ಪೆಟ್ರೋಲ್ ಮತ್ತು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲಾಗದೆ ಕಿರಣ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭೀಕರ ಕೃತ್ಯ ನಡೆಯುವ ದೃಶ್ಯವನ್ನು ಯುವತಿ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾಳೆ ಎಂದು ತಿಳಿದು ಬಂದಿದೆ.ಬೆಂಕಿ ಹಚ್ಚಿಕೊಂಡನೆಂದು ಕಥೆ ಕಟ್ಟಿದಳು!
ಆರಂಭದಲ್ಲಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದ ಯುವತಿ, ನಾನು ಟಾಯ್ಲೆಟ್‌ನಲ್ಲಿದ್ದೆ, ಆಗ ಸೌಂಡ್ ಬಂತು. ಹೊರಬಂದು ನೋಡಿದಾಗ ಕಿರಣ್ ಬೆಂಕಿ ಹಚ್ಚಿಕೊಂಡಿದ್ದ ಎಂದು ಕಥೆ ಕಟ್ಟಿದ್ದಳು. ಆದರೆ ಕಿರಣ್ ಬೈಕ್‌ನಲ್ಲಿ ಬಂದಾಗ ಯಾವುದೇ ಪೆಟ್ರೋಲ್ ಕ್ಯಾನ್ ತಂದಿರಲಿಲ್ಲ ಎಂಬುದು ಸಿಸಿ ಕ್ಯಾಮೆರಾ ಮತ್ತು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತು. ಇದರಿಂದಾಗಿ ಪೆಟ್ರೋಲ್ ಅನ್ನು ಯುವತಿಯೇ ಮೊದಲೇ ತಂದಿಟ್ಟಿದ್ದಳು ಎಂಬ ಅನುಮಾನ ವ್ಯಕ್ತವಾಗಿದೆ.ಮೇಲ್ನೋಟಕ್ಕೆ ಮೊದಲು ಆತ್ಮಹತ್ಯೆ ಎಂಬಂತೆ ಕಂಡು ಬಂದಿತ್ತು. ಆದರೆ ಯುವತಿಯೇ ಆತನನ್ನು ಕೊಲೆ ಮಾಡಿದ್ದಾಳೆ ಎಂಬುದು ತನಿಖೆ ವೇಳೆ ಧೃಡಪಟ್ಟಿದೆ. ಒಬ್ಬಳೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಳೋ ಅಥವಾ ಬೇರೆ ಯಾರಾದರೂ ಇದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
-ಡಿ.ಎಲ್ ನಾಗೇಶ್, ವಾಯುವ್ಯ ವಿಭಾಗ ಡಿಸಿಪಿ