ಖಾಸಗಿ ಕಂಪನಿಯ ಉದ್ಯೋಗಿಯು ಸಂಸ್ಥೆಗೆ ಸೇರಿದ್ದ ಕಾರ್ಪೋರೆಟ್ ಕ್ರೆಡಿಟ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಂಡು 27 ಲಕ್ಷ ರು. ವಂಚಿಸಿದ್ದು, ಜತೆಗೆ ಸಿಬ್ಬಂದಿಗೆ ಅಶ್ಲೀಲ ‌ಸಂದೇಶ ಕಳುಹಿಸಿದ್ದಾನೆ.

ಬೆಂಗಳೂರು : ಖಾಸಗಿ ಕಂಪನಿಯ ಉದ್ಯೋಗಿಯು ಸಂಸ್ಥೆಗೆ ಸೇರಿದ್ದ ಕಾರ್ಪೋರೆಟ್ ಕ್ರೆಡಿಟ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಂಡು 27 ಲಕ್ಷ ರು. ವಂಚಿಸಿದ್ದು, ಜತೆಗೆ ಸಿಬ್ಬಂದಿಗೆ ಅಶ್ಲೀಲ ‌ಸಂದೇಶ ಕಳುಹಿಸಿದ್ದಾನೆ.

ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಕಂಪನಿಯ ಅಧಿಕಾರಿ ಅರ್ಜುನ್‌ಶೆಟ್ಟಿ ಎಂಬುವರು ನೀಡಿದ ದೂರಿನನ್ವಯ ಸೌಮ್ಯ ರಂಜನ್‌ ಪಾಂಡೆ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಜಾಪುರ ರಸ್ತೆಯಲ್ಲಿರುವ ಬಹುಮುಖ ಮಾಹಿತಿ ತಂತ್ರಜ್ಞಾನ ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ಒದಗಿಸುವ ಖಾಸಗಿ ಕಂಪನಿಯಲ್ಲಿ ಆರೋಪಿಯು ಸಿಸ್ಟಂ ಅಡ್ಮಿನಿಸ್ಟ್ರೇಟರ್‌ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸಂಸ್ಥೆಯು ಅಧಿಕೃತ ವೆಚ್ಚಗಳಿಗಾಗಿ ಕಾರ್ಪೋರೆಟ್‌ ಕ್ರೆಡಿಟ್‌ ಕಾರ್ಡ್‌ ಒದಗಿಸಿತ್ತು. ಉದ್ಯೋಗ ನಿಯಮಾವಳಿಗಳ ಪ್ರಕಾರ ಖಾಸಗಿ ಕಂಪನಿಯ ಕ್ರೆಡಿಟ್‌ ಕಾರ್ಡ್‌ ಅನ್ನು ನೀಡಲಾಗಿತ್ತು. ಅದರ ಪ್ರಾರಂಭಿಕ ಮಿತಿ 20 ಲಕ್ಷ ರು. ಆಗಿತ್ತು. ಅಗತ್ಯವಿದ್ದಲ್ಲಿ ಅನುಮತಿಯ ಮೇರೆಗೆ ಅದರ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿತ್ತು. 2023ರ ಅಕ್ಟೋಬರ್‌ನಿಂದ 2024ರ ಜನವರಿ ತನಕ ನಾಲ್ಕು ತಿಂಗಳ ಅವಧಿಯಲ್ಲಿ ಆರೋಪಿಯು ಕ್ರೆಡಿಟ್‌ ಕಾರ್ಡ್‌ ಮೂಲಕ 27 ಲಕ್ಷವನ್ನು ದುರುಪಯೋಗಪಡಿಸಿಕೊಂಡಿದ್ದ. ಈ ಬಗ್ಗೆ ಕಂಪನಿಯವರು 2024 ಜ.12 ರಂದು ಇ-ಮೇಲ್‌ ಮೂಲಕ ವಿಚಾರಿಸಿದ್ದರು.

ಚೀನಾ-ಪಾಕಿಸ್ತಾನದ ವ್ಯಕ್ತಿಗಳಿಂದ ಈ ಕೃತ್ಯ!

ಅದಕ್ಕೆ ಆರೋಪಿಯು ಉತ್ತರ ನೀಡಿ ಚೀನಾ ಮತ್ತು ಪಾಕಿಸ್ತಾನದ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಮತ್ತು ಬ್ಲ್ಯಾಕ್‌ ಮೇಲ್‌ ಕಾರಣ ಈ ಕೃತ್ಯ ನಡೆದಿದೆ ಎಂದು ಒಪ್ಪಿಕೊಂಡಿದ್ದ. ನಂತರ ಹಣವನ್ನು ಮರಳಿ ಪಾವತಿಸಲು ಹೇಳಿದ್ದಾಗ ಮೂರು ಹಂತಗಳಲ್ಲಿ ಹಣವನ್ನು ಪಾವತಿಸುವುದಾಗಿ ಹೇಳಿದ್ದ. ಒಂದು ವೇಳೆ ಪಾವತಿಸಲು ವಿಫಲವಾದರೆ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದ. ಈ ಮಧ್ಯೆ ಕಂಪನಿಯು ಆತನ ವೇತನವನ್ನು ಸ್ಥಗಿತಗೊಳಿಸಿದ ನಂತರ 10 ಲಕ್ಷ ರು. ಅನ್ನು ಫೆಬ್ರವರಿ ಎರಡನೇ ವಾರದೊಳಗೆ ಪಾವತಿಸುವುದಾಗಿ ಹಾಗೂ ಉಳಿದ ಹಣವನ್ನು ಹಂತ ಹಂತವಾಗಿ ಪಾವತಿಸುವುದಾಗಿ ತಿಳಿಸಿದ್ದ. ಸಾಕಷ್ಟು ಸಮಯ ನೀಡಿದರೂ ಆತ ಹಣ ಪಾವತಿಸಲು ವಿಫಲನಾಗಿದ್ದ.

ಸಿಬ್ಬಂದಿಗೆ ಅಸಭ್ಯ ಚಿತ್ರದ ಇ-ಮೇಲ್‌ ರವಾನೆ

ಪೂರ್ವಯೋಜಿತ ರೀತಿಯಲ್ಲಿ ಕಂಪನಿಗೆ 27 ಲಕ್ಷ ರು. ವಂಚನೆ ಮಾಡಿದ್ದಾನೆ. ಇದಲ್ಲದೇ ಆರೋಪಿಯು ಕಂಪನಿಯ ಹಿರಿಯ ನಿರ್ವಹಣಾ ಸಿಬ್ಬಂದಿಗೆ ಅಸಭ್ಯ ಚಿತ್ರಗಳನ್ನು ಒಳಗೊಂಡಿದ್ದ ಇ-ಮೇಲ್‌ ಕಳುಹಿಸಿದ್ದ. ತನ್ನ ಕೃತ್ಯವನ್ನು ಸಮರ್ಥಿಸಲು ಪ್ರಯತ್ನಿಸಿದ್ದ. ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಹಾಕಿದ್ದ. ಹೀಗಾಗಿ ಸುಳ್ಳು ಮಾಹಿತಿಗಳನ್ನು ನೀಡಿ ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡಿದ್ದ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.