ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗ್ರಾಮೀಣ ಭಾಗ ಸೇರಿದಂತೆ ಪ್ರತಿಯೊಬ್ಬರು ಜಿಎಸ್‌ಟಿ ಅಡಿಯಲ್ಲಿ ವ್ಯಾಪಾರ ವಹಿವಾಟು ಮಾಡಿ ದೇಶ ಆರ್ಥಿಕವಾಗಿ ಪ್ರಗತಿ ಹೊಂದಲು ಸಹಕರಿಸಬೇಕು ಎಂದು ಬೆಂಗಳೂರಿನ ಜಿಎಸ್‌ಟಿ ಗುಪ್ತದಳ ವಿಭಾಗದ ಉಪನಿರ್ದೇಶಕ ಬನಹಟ್ಟಿಯ ಡಾ.ಕಿಶೋರ ಭಟ್ಟ ಹೇಳಿದರು.ಬನಹಟ್ಟಿಯ ಎಸ್‌ಟಿಸಿ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ದಕ್ಷಿಣ ಭಾರತದ ರಾಜ್ಯಗಳ ಗ್ರಾಮೀಣ ವಸ್ತ್ರೋದ್ಯಮ ಕ್ಷೇತ್ರದಲ್ಲಿ ಜಿಎಸ್ಟಿ ಸುಧಾರಣೆಗಳ ಮೌಲ್ಯ ಮಾಪನ ಕುರಿತು ಶುಕ್ರವಾರ ನಡೆದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪಾರಂಪರಿಕವಾಗಿ ಬೆಳೆದು ಬಂದ ಉದ್ದಿಮೆ ವಸ್ತ್ರೋದ್ಯಮವಾಗಿದ್ದು, ಸರ್ಕಾರ ಇಂಥ ಉದ್ದಿಮೆಗಳು ಉಳಿದು ಬೆಳೆಯಲು ಏಕರೂಪ ತೆರಿಗೆ ಜಾರಿ ಮಾಡಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ತಾವೂ ಸಬಲರಾಗುವುದರೊಂದಿಗೆ ದೇಶದ ಶ್ರೀಮಂತಿಕೆ ಹೆಚ್ಚಿಸಬೇಕೆಂದರು.
ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ಈ ವಸ್ತ್ರೋದ್ಯಮಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ತಮಿಳುನಾಡಿನ ತಿರಪುರಂ, ಸೆಲಂ, ಬೆಂಗಳೂರು, ಇಳಕಲ್, ರಬಕವಿ-ಬನಹಟ್ಟಿ ಹೀಗೆ ಅನೇಕ ಊರು ಪಟ್ಟಣಗಳು ಜವಳಿ ಉದ್ದಿಮೆ ಅವಲಂಬಿಸಿವೆ. ತೆರಿಗೆ ಉಳಿತಾಯ ಮಾಡಲು ಯಾವುದೇ ವಾಮಮಾರ್ಗ ಬೇಡ, ಸರ್ಕಾರದ ನಿಯಮಾವಳಿಗಳ ಪ್ರಕಾರ ದೂರದೃಷ್ಟಿ ಇಟ್ಟುಕೊಂಡು ಸರಿಯಾಗಿ ತೆರಿಗೆ ಪಾವತಿಸಿ ಉತ್ತಮ ಉದ್ಯಮಿಗಳಾಗಿ ಎಂದು ಸಲಹೆ ನೀಡಿದ ಅವರು, ಇದೇ ಶಿಕ್ಷಣ ಸಂಸ್ಥೆಯ ಶಾಲಾ ಕೊಠಡಿಗಳಲ್ಲಿ ಕಲಿತು ಇಲ್ಲಿಯೇ ಒಬ್ಬ ಅಧಿಕಾರಿಯಾಗಿ ಆಗಮಿಸಿ ಮಾತನಾಡುವ ಭಾಗ್ಯ ದೊರಕಿದ್ದು ಈ ಭೂಮಿಮ ಮಣ್ಣಿನ ಋಣ ಎಂದು ಬಣ್ಣಿಸಿದರು.ವಿಜಯಪುರದ ಹಿರಿಯ ಲೆಕ್ಕಪರಿಶೋಧಕ ಎಸ್. ಆರ್. ಮಠಪತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಸರ್ಕಾರಗಳು ಒಂದು ದೇಶ ಒಂದು ತೆರಿಗೆ ಎಂದು ಹೇಳುವುದನ್ನು ನಾನು ಒಪ್ಪಲ್ಲ. ಕಚ್ಚಾ ವಸ್ತುಗಳನ್ನು ಖರೀದಿಸಿ ಅಲ್ಲಿ ಜಿಎಸ್‌ಟಿ ಕಟ್ಟಿರುತ್ತೇವೆ. ಉತ್ಪಾದಿತ ವಸ್ತುವಿನ ಮೇಲೆ ಮತ್ತೆ ಜಿಎಸ್‌ಟಿ ಕಟ್ಟುವುದು ಸರಿಯಾದ ಮಾರ್ಗವಲ್ಲ, ಹೀಗಾಗಿ ಒಂದು ತೆರಿಗೆ ಒಂದು ದೇಶ ಹೇಗಾಗುತ್ತದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಹುಬ್ಬಳ್ಳಿಯ ಕೆ ಎಲ್ ಇ ತಾಂತ್ರಿಕ ವಿವಿಯ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದ ಡೀನ್ ಎಂ.ಆರ್. ಸೊಲ್ಲಾಪುರ ಮಾತನಾಡಿ, ದೇಶದ ಪರೋಕ್ಷ ತೆರಿಗೆ ರಚನೆ ಸುಗಮಗೊಳಿಸಲು ಮತ್ತು ಸರಳಗೊಳಿಸಲು ಜಿಎಸ್‌ಟಿ ಪರಿಚಯಿಸಲಾಗಿದೆ.ಭಾರತದ ತೆರಿಗೆ ಸುಧಾರಣೆಯಲ್ಲಿ ಪ್ರಮುಖ ಮೈಲಿಗಲ್ಲಾಯಿತು. ತೆರಿಗೆ ಸರಳಗೊಳಿಸುವ, ಅನುಸರಣೆ ಸುಧಾರಿಸುವ ಮತ್ತು ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ರಚಿಸುವ ಗುರಿ ಹೊಂದುವ ಸುದುದ್ದೇಶ ಇದಾಗಿದೆ ಎಂದು ಹೇಳಿದರು.
ಮೊದಲ ದಿನದ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ಡಾ.ವಿ.ಆರ್. ಕುಳ್ಳಿ ವಹಿಸಿದ್ದರು. ಸಂಸ್ಥೆಯ ಚೇರ್ಮನ್ ಬಸವರಾಜ ಜಾಡಗೌಡ, ರಶ್ಮಿ ಭಟ್ಟಡ, ಭದ್ರಿನಾರಾಯಣ ಭಟ್ಟಡ, ಭೀಮಶಿ ಮಗದುಮ್, ಡಾ.ಎಂ.ಎಂ. ಮರಡಿ, ಪಂಡಿತ ಹನಗಂಡಿ, ಎಂ. ಜಿ. ಕೆರೂರ, ಬ್ರಿಜ್‌ಮೋಹನ ಚಿಂಡಕ, ಪ್ರಾಚಾರ್ಯ ಡಾ.ಜಿ. ಆರ್. ಜುನ್ನಾಯ್ಕರ, ಡಾ. ಪಿ.ಆರ್. ಕೆಂಗನಾಳ, ಜಿ. ಎಸ್. ಸಜ್ಜನ, ಪ್ರೊ. ಎಸ್. ಬಿ. ಆಕಾಶ, ಡಾ.ಮಂಜುನಾಥ ಬೆನ್ನೂರ, ಡಾ.ಮನೋಹರ ಶಿರಹಟ್ಟಿ, ಪ್ರೊ.ಸುರೇಶ ನಿಡೋಣಿ, ಡಾ.ವರದಾಯಿ, ಶ್ವೇತಾ ಮಠದ, ರಮೇಶ ಮಾಗೂರಿ, ಸಿದ್ದು ಉಕ್ಕಲಿ, ರಶ್ಮಿ ಕೊಕಟನೂರ ಸೇರಿದಂತೆ ಅನೇಕರಿದ್ದರು.