ಕನ್ನಡಪ್ರಭ ವಾರ್ತೆ ಟಿ.ನರಸೀಪುರ
ಕಳೆದ ಭಾನುವಾರ ಮೈಸೂರು ಜಿಲ್ಲೆಯ ಕೆ.ಆರ್.ನಗರದ ಹಳೆ ಎಡತೊರೆಯ ಕಾವೇರಿ ನದಿಯಲ್ಲಿ ಮುಳುಗಿ ಬೆಂಗಳೂರಿನ 6 ಮಂದಿ ಮೃತಪಟ್ಟ ಘಟನೆ ಬೆನ್ನಲ್ಲೇ ಮಂಗಳವಾರ ಬೆಳಗ್ಗೆ ತಲಕಾಡಿನ ಕಾವೇರಿ ನಿಸರ್ಗಧಾಮದಲ್ಲಿ ನದಿಯಲ್ಲಿ ಆಟವಾಡುತ್ತಿದ್ದ ಬೆಂಗಳೂರಿನ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ.ಬೆಂಗಳೂರು ಚಾಮರಾಜಪೇಟೆಯ ಆಕ್ಸೀಲಿಯಂ ನವಜೀವನಸೇವಾ ಸಂಸ್ಥೆಯ ವಿದ್ಯಾರ್ಥಿಗಳಾದ ಚಾರ್ವಿ (12) ಹಾಗೂ ರಮ್ಯ (16) ನದಿ ನೀರಿನಲ್ಲಿ ಮುಳುಗಿ ಮೃತಪಟ್ಟವರು. ಅಸ್ವಸ್ಥಗೊಂಡ ಸುಜಿತಾ ಅವರನ್ನು ಮೈಸೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆಕ್ಸೀಲಿಯಂ ನವಜೀವನ ಸೇವಾ ಸಂಸ್ಥೆಯ 71 ವಿದ್ಯಾರ್ಥಿಗಳು ಹಾಗೂ 9 ಮಂದಿ ಅಧಿಕಾರಿಗಳು ಸಂಸ್ಥೆಯ ಒಂದು ಹಾಗೂ ಒಂದು ಖಾಸಗಿ ವಾಹನದಲ್ಲಿ ಬೆಂಗಳೂರಿನಿಂದ ತಲಕಾಡಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ ವಿದ್ಯಾರ್ಥಿಗಳು ನದಿಗೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ರಮ್ಯ, ಚಾರ್ವಿ, ಸುಜಿತಾ, ಕೀರ್ತಿ ಮತ್ತು ರೋಷಮಿ ನದಿಯಲ್ಲಿ ಹೆಚ್ಚು ಆಳ ಇರುವ ಕಡೆ ಹೋಗಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ತಕ್ಷಣವೇ ತೆಪ್ಪ ನಡೆಸುವವರು ಬಂದು ನೀರಿನಲ್ಲಿ ಮುಳುಗಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಚಾರ್ವಿ ಹಾಗೂ ರಮ್ಯ ಮೃತ ಪಟ್ಟಿದ್ದಾರೆ. ನದಿಯಲ್ಲಿ ಮುಳುಗಿ ನೀರು ಕುಡಿದು ಅಸ್ವಸ್ಥಗೊಂಡ ಸುಜಿತಾ ಅವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತಲಕಾಡು ಪೊಲೀಸ್ ಠಾಣೆಗೆ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಶಾರ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಎಎಸ್ಐ ಕೆ.ಪಿ. ನಾಗೇಂದ್ರ ಮೂರ್ತಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
