ಬಳ್ಳಾರಿ; ವಿಪತ್ತು ಎದುರಿಸಲು ಪೂರ್ವ ಸಿದ್ಧತೆ ಮತ್ತು ಜಾಗೃತಿ ಬಹಳ ಅಗತ್ಯವಾಗಿದ್ದು, ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಾಗಾರಗಳು ಜೀವ ರಕ್ಷಣೆಗೆ ಸಹಾಯ ಮಾಡುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ತಿಳಿಸಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಮತ್ತು ಸ್ವಯಂ ಸೇವಕರಿಗಾಗಿ ಆಯೋಜಿಸಿದ್ದ ‘ಪ್ರಥಮ ಚಿಕಿತ್ಸೆ ಮತ್ತು ಪ್ರಕೃತಿ ವಿಕೋಪ ನಿರ್ವಹಣೆ'''' ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ತುರ್ತು ಪರಿಸ್ಥಿತಿಯ ಸಂದರ್ಭ ಹಾಗೂ ವಿಪತ್ತುಗಳು ಸಂಭವಿಸಿದ ಸಮಯದಲ್ಲಿ ರೆಡ್ ಕ್ರಾಸ್ ಮತ್ತು ರೇಂಜರ್ಸ್, ರೋವರ್ಸ್ ಗಳ ಪಾತ್ರ ಮಹತ್ವದ್ದಾಗಿದೆ. ಪ್ರಥಮ ಚಿಕಿತ್ಸೆಯು ರೋಗಿಗೆ ತಕ್ಷಣದ ವೈದ್ಯಕೀಯ ನೆರವು ನೀಡಿದರೆ ವಿಕೋಪ ನಿರ್ವಹಣೆಯಿಂದ ಪ್ರಾಣಹಾನಿ ಕಡಿಮೆ ಮಾಡುತ್ತದೆ. ಹವಾಮಾನ ಇಲಾಖೆಯು ಕಾಲಕಾಲಕ್ಕೆ ಹೊರಡಿಸುವ ಮುನ್ಸೂಚನೆಯ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದ್ದಲ್ಲಿ ಪ್ರಾಕೃತಿಕ ವಿಕೋಪವನ್ನು ಸಹ ತಡೆಯಬಹುದಾಗಿದೆ ಎಂದರಲ್ಲದೆ, ಬಳ್ಳಾರಿಯಂತಹ ಬಿಸಿಲು ಪ್ರದೇಶದಲ್ಲಿ ಬೇಸಿಗೆ ಸಂದರ್ಭದಲ್ಲಿ ಉರಿಬಿಸಿಲಿನಿಂದಾಗುವ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಪೋಲಾ ರಾಧಾಕೃಷ್ಣ ಮಾತನಾಡಿ, ವಿಪತ್ತುಗಳು (ಆಪತ್ತುಗಳು) ಎಂದರೆ ಪ್ರಕೃತಿ ಅಥವಾ ಮಾನವ ಸೃಷ್ಟಿಯಾದ ಅನಾಹುತಗಳು. ಉದಾಹರಣೆಗೆ ಪ್ರವಾಹ, ಭೂಕಂಪ, ಅಗ್ನಿ ಅವಘಡ, ಚಂಡಮಾರುತ, ಅಪಘಾತಗಳು ಇತ್ಯಾದಿ. ಇಂತಹ ಸಂದರ್ಭಗಳಲ್ಲಿ ಮಾನವನ ಜೀವ ಮತ್ತು ಆಸ್ತಿ ಅಪಾಯಕ್ಕೆ ಒಳಗಾಗುತ್ತವೆ. ಆದ್ದರಿಂದ ವಿಪತ್ತು ಸಂದರ್ಭದಲ್ಲಿ ಸರಿಯಾದ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯ.ವಿಪತ್ತುಗಳನ್ನು ಎದುರಿಸಲು ಪೂರ್ವ ಸಿದ್ಧತೆ ಮತ್ತು ಜಾಗೃತಿ ಬಹಳ ಮುಖ್ಯ. ಶಾಲೆಗಳಲ್ಲಿ ಮತ್ತು ಸಮಾಜದಲ್ಲಿ ವಿಪತ್ತು ನಿರ್ವಹಣೆಯ ಬಗ್ಗೆ ತರಬೇತಿ ನೀಡುವುದರಿಂದ ಜೀವರಕ್ಷಣೆಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ. ಶಕೀಬ್ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ, ಪ್ರಕೃತಿ ವಿಕೋಪಗಳು ಅಥವಾ ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಗಾಬರಿಯಾಗದೆ ದಿಟ್ಟತನ ಮತ್ತು ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸುವುದು ಮುಖ್ಯ ಎಂದು ತಿಳಿಸಿದರು.
ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಪಲ್ಲವಿ, ರೋವರ್ ಲೀಡರ್ ಡಾ. ಗುರುಬಸಪ್ಪ, ರೇಂಜರ್ ಲೀಡರ್ ಡಾ. ಸಲಿಹಾ ಹಾಗೂ ಸ್ವಯಂಸೇವಕರು ಭಾಗವಹಿಸಿದ್ದರು.