ಕೊಡಗಿನಲ್ಲಿ ಕಾಡಾನೆ-ಮಾನವ ಸಂಘರ್ಷಕ್ಕೆ ಕಳೆದ ಎಂಟು ವರ್ಷದಲ್ಲಿ ಸುಮಾರು 86 ಮಂದಿ ಮೃತಪಟ್ಟಿದ್ದಾರೆ. ಆನೆ ಹಾವಳಿ ತಡೆಗೆ ಅರಣ್ಯ ಇಲಾಖೆಯಿಂದ ಸೋಲಾರ್ ಬೇಲಿ, ಕಂದಕ, ರೈಲ್ವೇ ಬ್ಯಾರಿಕೇಡ್ ಸೇರಿದಂತೆ ಎಷ್ಟೇ ಯೋಜನೆ ಮಾಡಿದರೂ ಆನೆದಾಳಿ ಮಾತ್ರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

ವಿಘ್ನೇಶ್ ಎಂ.ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನಲ್ಲಿ ಕಾಡಾನೆ-ಮಾನವ ಸಂಘರ್ಷಕ್ಕೆ ಕಳೆದ ಎಂಟು ವರ್ಷದಲ್ಲಿ ಸುಮಾರು 86 ಮಂದಿ ಮೃತಪಟ್ಟಿದ್ದಾರೆ. ಆನೆ ಹಾವಳಿ ತಡೆಗೆ ಅರಣ್ಯ ಇಲಾಖೆಯಿಂದ ಸೋಲಾರ್ ಬೇಲಿ, ಕಂದಕ, ರೈಲ್ವೇ ಬ್ಯಾರಿಕೇಡ್ ಸೇರಿದಂತೆ ಎಷ್ಟೇ ಯೋಜನೆ ಮಾಡಿದರೂ ಆನೆದಾಳಿ ಮಾತ್ರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

2017-18ರಲ್ಲಿ 5, 2018-19ರಲ್ಲಿ 0, 2019-20ರಲ್ಲಿ 6, 2020-21ರಲ್ಲಿ 13, 2021-22ರಲ್ಲಿ 15, 2022-23ರಲ್ಲಿ 10, 2023-24ರಲ್ಲಿ 15, 2024-25ರಲ್ಲಿ 8 ಹಾಗೂ 2025-26ರಲ್ಲಿ 14 ಮಂದಿ ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ.

ಸುಮಾರು 899 ಕಿ.ಮೀ ವಿಸ್ತೀರ್ಣ ಪ್ರದೇಶದಲ್ಲಿ ಆನೆ-ಮಾನವ ಹಾವಳಿ ಪ್ರಮುಖವಾಗಿ ಕಂಡುಬಂದಿದೆ. ಮಡಿಕೇರಿ, ವಿರಾಜಪೇಟೆ ಹಾಗೂ ನಾಗರಹೊಳೆ ವ್ಯಾಪ್ತಿಯಲ್ಲಿ 421 ಕಿ.ಮೀ ಕಂದಕ, 544 ಕಿ.ಮೀ ಸೋಲಾರ್ ಬೇಲಿ ಹಾಗೂ 139 ಕಿ.ಮೀ ರೈಲ್ವೇ ಬ್ಯಾರಿಕೇಡ್ ಪೂರ್ಣಗೊಂಡಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

2025-26ನೇ ಸಾಲಿನಲ್ಲಿ ರು.116 ಲಕ್ಷ ವೆಚ್ಚದಲ್ಲಿ 69 ಕಿ.ಮೀ ಕಂದಕ ನಿರ್ವಹಣೆ, ವಿರಾಜಪೇಟೆ ಹಾಗೂ ನಾಗರಹೊಳೆ ವ್ಯಾಪ್ತಿಯಲ್ಲಿ ರು.14 ಲಕ್ಷ ವೆಚ್ಚದಲ್ಲಿ 1.25 ಕಿ.ಮೀ ನೂತನ ಕಂದಕ ನಿರ್ಮಾಣ, 76 ಲಕ್ಷ ರು. ವೆಚ್ಚದಲ್ಲಿ ಸೋಲಾರ್ ಬೇಲಿ ನಿರ್ವಹಣೆ, 367 ಲಕ್ಷ ರು. ವೆಚ್ಚದಲ್ಲಿ 49 ಕಿ.ಮೀ ಸೋಲಾರ್ ನಿರ್ಮಿಸಲಾಗಿದೆ. 332 ಲಕ್ಷ ರು. ವೆಚ್ಚದಲ್ಲಿ 1.93 ಕಿ.ಮೀ ರೈಲ್ವೇ ಬ್ಯಾರಿಕೇಡ್ ನಿರ್ವಹಣೆ, 2561 ಲಕ್ಷ ರು. ವೆಚ್ಚದಲ್ಲಿ 13.95 ಕಿ.ಮೀ ನೂತನ ರೈಲ್ವೇ ಬ್ಯಾರಿಕೇಡ್ ಅನ್ನು ನಿರ್ಮಿಸಲಾಗಿದೆ. 316 ಲಕ್ಷ ರು. ವೆಚ್ಚದಲ್ಲಿ ಆನೆ ಹಾವಳಿ ತಡೆಗೆ ವಿಶೇಷ ಮಾದರಿ ಕಾಮಗಾರಿ ಮಾಡಲಾಗಿದೆ.

ಐದು ವರ್ಷದ ಯೋಜನೆ: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2026-27ರಿಂದ 2030-31ರ ವರೆಗೆ 29004 ಲಕ್ಷ ರು. ವೆಚ್ಚದಲ್ಲಿ ಹಲವು ಕಾಮಗಾರಿ ಮಾಡಲು ಅರಣ್ಯ ಇಲಾಖೆ ಅಂದಾಜಿಸಿದೆ. 150 ಕಿ.ಮೀ ರೈಲ್ವೇ ಬ್ಯಾರಿಕೇಡ್, 23 ಕಿ.ಮೀ ಕಂದಕ ಹಾಗೂ 102 ಕಿ.ಮೀ ಸೋಲಾರ್ ಬೇಲಿ ನಿರ್ಮಾಣ ಆಗಬೇಕಿದೆ. ಇದಾದರೆ ಜಿಲ್ಲೆಯಲ್ಲಿ ಆನೆ ಹಾವಳಿಯನ್ನು ನಿಯಂತ್ರಿಸಬಹುದಾಗಿದೆ ಎಂದು ಅರಣ್ಯ ಇಲಾಖೆ ಹೇಳಿದೆ.

ವನ್ಯಪ್ರಾಣಿ ಹಾವಳಿಯಿಂದಾಗಿ ಜನ-ಜಾನುವಾರು ಸಾವು ಮಾತ್ರವಲ್ಲದೆ ಬೆಳೆ ಹಾನಿ ಹಾಗೂ ಇತರೆ ಪ್ರಕರಣಗಳು ಸಂಭವಿಸುತ್ತಿದೆ. 2025-26ನೇ ಸಾಲಿನಲ್ಲಿ ಸುಮಾರು 8,933 ಪ್ರಕರಣಗಳು ದಾಖಲಾಗಿದ್ದು, 1174 ಲಕ್ಷ ರು. ಮೊತ್ತವನ್ನು ಅರಣ್ಯ ಇಲಾಖೆಯಿಂದ ಪರಿಹಾರವಾಗಿ ನೀಡಲಾಗಿದೆ. ಹುಲಿ ಹಾವಳಿಯೂ ಕಡಿಮೆ ಇಲ್ಲ!: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಾತ್ರವಲ್ಲದೆ ಹುಲಿ ಹಾವಳಿಯೂ ಹೆಚ್ಚಾಗಿಯೇ ಇದೆ. ಹುಲಿ ಹಾವಳಿಯಿಂದಾಗಿ ಅಪಾರ ಪ್ರಮಾಣದಲ್ಲಿ ಜಾನುವಾರುಗಳು ಮೃತಪಟ್ಟಿವೆ. 2017-18ರಲ್ಲಿ 52, 2018-19ರಲ್ಲಿ 56, 2019-20ನೇ ಸಾಲಿನಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ಕೊಡಗು ವೃತ್ತಕ್ಕೆ ಸೇರ್ಪಡೆಗೊಂಡಿದೆ. ನಂತರ ಹುಲಿ ಹಾವಳಿಯ ಪ್ರಕರಣದಲ್ಲಿ ಬಹು ಏರಿಕೆ ಕಂಡಿದೆ. 2019-20ರಲ್ಲಿ 20, 2020-21ರಲ್ಲಿ 109, 2021-22ರಲ್ಲಿ 193, 2022-23ರಲ್ಲಿ 288, 2023-24ರಲ್ಲಿ 249, 2024-25ರಲ್ಲಿ 234 ಹಾಗೂ 2025-26ರಲ್ಲಿ 353 ಪ್ರಕರಣ ನಡೆದಿದೆ.

ಕೊಡಗಿನಲ್ಲಿ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಕ್ರಮಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಅರಣ್ಯ ಇಲಾಖೆಯಿಂದ ಆನೆ ಹಾವಳಿ ತಡೆಗೆ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸೋಲಾರ್ ಬೇಲಿ, ಕಂದಕ ನಿರ್ಮಾಣ ಹಾಗೂ ರೈಲ್ವೇ ಬ್ಯಾರಿಕೇಡ್ ಗಳು ಇನ್ನಷ್ಟು ಆಗಬೇಕು. ಇದರಿಂದ ಕಾಡಾನೆಗಳು ನಾಡಿಗೆ ಬಾರದಂತೆ ತಡೆಯಬಹುದಾಗಿದೆ.

ಸೋನಲ್ ವೃಷ್ಠಿ, ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿಲ್ಲೆಯಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ತಡೆಗಟ್ಟಲು ವೈಜ್ಞಾನಿಕ ಕ್ರಮ ಅಗತ್ಯವಾಗಿದೆ. ಆದ್ದರಿಂದ ಈ ಬಗ್ಗೆ ಈಗಾಗಲೇ ಅರಣ್ಯ ಸಚಿವರು ಸಭೆ ನಡೆಸಿದ್ದು, ಹಲವು ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅರಣ್ಯದಲ್ಲಿ ತೇಗದ ಮರ ತೆರವುಗೊಳಿಸಿ ಆನೆಗಳಿಗೆ ಪೂರಕ ಆಹಾರ ಒದಗಿಸುವ ವೃಕ್ಷಗಳನ್ನು ಬೆಳೆಸುವ ಬಗ್ಗೆ ಚರ್ಚೆಯಾಗಿದೆ.

ಎ.ಎಸ್. ಪೊನ್ನಣ್ಣ, ಶಾಸಕರು ವಿರಾಜಪೇಟೆ ಕ್ಷೇತ್ರ